ಭಷ್ಟಾಚಾರ ಪ್ರಕರಣದಲ್ಲಿ ನೆತನ್ಯಾಹು ವಿರುದ್ಧ ದೋಷಾರೋಪ

Update: 2019-11-22 17:41 GMT

ಜೆರುಸಲೇಮ್, ನ. 22: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಗುರುವಾರ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ. ಇದರೊಂದಿಗೆ ಅವರು ಅಧಿಕಾರದಲ್ಲಿರುವಾಗಲೇ ಆರೋಪ ಪಟ್ಟಿ ದಾಖಲಾದ ಮೊದಲ ಇಸ್ರೇಲ್ ಪ್ರಧಾನಿಯಾದರು.

ಆದರೆ, ಇದನ್ನು ತನ್ನ ವಿರುದ್ಧದ ‘ಕ್ಷಿಪ್ರ ಕ್ರಾಂತಿ’ ಎಂದು ಬಣ್ಣಿಸಿರುವ ನೆತನ್ಯಾಹು, ಅಧಿಕಾರದಲ್ಲಿ ಮುಂದುವರಿಯುವುದಾಗಿ ಘೋಷಿಸಿದರು.

ಬೆಂಜಮಿನ್‌ರ ಈ ನಿರ್ಧಾರದಿಂದಾಗಿ ಇಸ್ರೇಲ್‌ನ ರಾಜಕೀಯ ಬಿಕ್ಕಟ್ಟು ಮತ್ತಷ್ಟು ವಿಷಮಿಸಿದೆ. ಇಸ್ರೇಲ್ ಹಲವು ತಿಂಗಳಿಂದ ಸರಕಾರರಹಿತವಾಗಿದ್ದು, ವರ್ಷದಲ್ಲಿ ಮೂರನೇ ಚುನಾವಣೆಯನ್ನು ಎದುರು ನೋಡುತ್ತಿದೆ.

ಹಲವು ತಿಂಗಳ ನಿಗೂಢತೆಯ ಬಳಿಕ, ದೇಶದ ಅತ್ಯಂತ ದೀರ್ಘಾವಧಿ ಪ್ರಧಾನಿಯ ವಿರುದ್ಧ ಅಟಾರ್ನಿ ಜನರಲ್ ಅವಿಚಲ್ ಮಾಂಡೆಲ್‌ಬ್ಲಿಟ್ ಗುರುವಾರ ಪ್ರಧಾನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದರು. ದೋಷಾರೋಪ ಪಟ್ಟಿಯಲ್ಲಿ ಪ್ರಧಾನಿ ವಿರುದ್ಧ ಲಂಚ, ವಂಚನೆ ಮತ್ತು ವಿಶ್ವಾಸದ್ರೋಹದ ಆರೋಪಗಳನ್ನು ಹೊರಿಸಲಾಗಿದೆ.

ನನ್ನ ವಿರುದ್ಧ ಸಂಚು: ನೆತನ್ಯಾಹು

ತನ್ನ ವಿರುದ್ಧದ ದೋಷಾರೋಪಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನೆತನ್ಯಾಹು, ನ್ಯಾಯಾಂಗ, ಪೊಲೀಸ್ ಮತ್ತು ಇತರರು ‘ಸುಳ್ಳು’ ಮತ್ತು ‘ರಾಜಕೀಯ ಪ್ರೇರಿತ’ ಆರೋಪಗಳ ಮೂಲಕ ನನ್ನ ವಿರುದ್ಧ ಪಿತೂರಿ ಹೂಡಿದ್ದಾರೆ ಎಂದು ಆರೋಪಿಸಿದರು.

‘‘ಇಲ್ಲಿ ಪ್ರಧಾನಿ ವಿರುದ್ಧ ಕ್ರಿಪ್ರಕ್ರಾಂತಿ ಯತ್ನ ನಡೆಯುತ್ತಿದೆ’’ ಎಂದು 15 ನಿಮಿಷಗಳ ಟೆಲಿವಿಶನ್ ಭಾಷಣದಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News