ಸಂಸತ್‌ಗೆ ಅವಮಾನ

Update: 2019-11-23 05:40 GMT

ಡಿಸೆಂಬರ್ 13, 2001 ಭಾರತದ ಪಾಲಿಗೆ ಮರೆಯಲಾಗದ ಕೆಟ್ಟ ದಿನ. ಅಂದು ಭಾರತದ ಅತ್ಯುನ್ನತ ಸಂಸ್ಥೆಯಾಗಿರುವ ಸಂಸತ್‌ನ ಮೇಲೆ ಉಗ್ರರ ದಾಳಿ ನಡೆಯಿತು. ಆ ಸಂದರ್ಭದಲ್ಲಿ ಒಟ್ಟು 14 ಮಂದಿ ಮೃತಪಟ್ಟು 20ಕ್ಕೂ ಅಧಿಕ ಮಂದಿ ಗಾಯಗೊಂಡರು. ನಮ್ಮ ಪೊಲೀಸ್ ಪಡೆಗಳು ಅವರನ್ನು ತಡೆಯುವಲ್ಲಿ ವಿಫಲವಾಗುತ್ತಿದ್ದರೆ ದೊಡ್ಡ ಮಟ್ಟದ ದುರಂತ ನಡೆದು ಬಿಡುತ್ತಿತ್ತು. ಉಗ್ರರು ದಾಳಿಯಲ್ಲಿ ವಿಫಲರಾಗಿದ್ದರೂ, ಭಾರತದ ಪಾಲಿಗೆ ಆ ಘಟನೆ ಸಣ್ಣ ಗಾಯವನ್ನು ಮಾಡಿಯೇ ಬಿಟ್ಟಿತು. ಬಳಿಕ ಈ ದಾಳಿಗೆ ಸಂಬಂಧಿಸಿ ಕಾಶ್ಮೀರದ ಪ್ರತ್ಯೇಕತಾವಾದಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಲಾಯಿತು. ಸಂಸತ್ ಈ ದೇಶದ ಸಂವಿಧಾನದ ಆಶಯಗಳು ಜಾರಿಗೊಳ್ಳುವ ಸ್ಥಳ. ಆದುದರಿಂದಲೇ, ಸಂಸತ್ ಮೇಲೆ ನಡೆಯುವ ದಾಳಿ ಪರೋಕ್ಷವಾಗಿ ಸಂವಿಧಾನದ ಮೇಲೆ ನಡೆಯುವ ದಾಳಿಯೇ ಆಗಿದೆ. ಉಗ್ರರು ಅದೇನೇ ಸಮರ್ಥನೆ ನೀಡಲಿ, ಅವರ ಅಂತಿಮ ಗುರಿ ಈ ದೇಶದ ಸಾರ್ವಭೌಮತೆಯೇ ಆಗಿದೆ. ಸಂಸತ್ ದಾಳಿ ನಡೆದು ಸುಮಾರು 18 ವರ್ಷಗಳ ಬಳಿಕ ಇನ್ನೊಂದು ದುರಂತ ನಡೆಯಿತು. ಎಲ್ಲಿಯವರೆಗೆ ದೇಶಕ್ಕಾಗಿ ಪ್ರಾಣಕೊಡುವ ಯೋಧರು ಇರುತ್ತಾರೆಯೋ ಅಲ್ಲಿಯವರೆಗೆ ಸಂಸತ್ ಮೇಲೆ ದಾಳಿ ಸಾಧ್ಯವಿಲ್ಲ ಎಂದು ಅರಿತ ಉಗ್ರರು ಸಂಸತ್‌ನೊಳಗೆ ಪ್ರವೇಶಿಸಲು ಬೇರೆ ದಾರಿ ಹುಡುಕಿ ಅದರಲ್ಲಿ ಈಗ ಯಶಸ್ವಿಯಾಗಿದ್ದಾರೆ.

ಮಾಲೆಗಾಂವ್ ಸ್ಫೋಟದಲ್ಲಿ ಭಾಗಿಯಾದ ಆರೋಪದಲ್ಲಿ ಗುರುತಿಸಿಕೊಂಡ, ಈ ದೇಶದ ವಿರುದ್ಧ ಸಂಚುನಡೆಸಿದ ಶಂಕಿತ ಭಯೋತ್ಪಾದಕಿಯೊಬ್ಬರಿಗೆ ‘ದೇಶಪ್ರೇಮ’ದ ಗುತ್ತಿಗೆ ತೆಗೆದುಕೊಂಡ ಬಿಜೆಪಿಯೇ ಟಿಕೆಟ್ ನೀಡಿ ಆಕೆಯನ್ನು ಗೆಲ್ಲಿಸಿ ಸಂಸತ್‌ನೊಳಗೆ ಪ್ರವೇಶಿಸುವಂತೆ ಮಾಡಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಅವರ ಮೇಲಿನ ಭಯೋತ್ಪಾದನಾ ಆರೋಪವನ್ನು ನ್ಯಾಯಾಲಯ ಇನ್ನೂ ನಿರಾಕರಿಸಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಕೆಗೆ ಜಾಮೀನು ದೊರಕಿದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ದುರುಪಯೋಗ ಪಡಿಸಿ ಪ್ರಜ್ಞಾಸಿಂಗ್ ಠಾಕೂರ್ ಸಂಸತನ್ನು ಪ್ರವೇಶಿಸಿದ್ದಾರೆ. ಸಂಸತ್ ದಾಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಗಲ್ಲಿಗೇರಿದ ಅಫ್ಝಲ್‌ಗುರು ಆತ್ಮ ಮೊದಲ ಬಾರಿಗೆ ಗಹಿಗಹಿಸಿ ನಕ್ಕಿರಬಹುದು. ಯಾಕೆಂದರೆ ಇಬ್ಬರೂ ಉಗ್ರವಾದಿಗಳೇ. ಇಬ್ಬರೂ ಈ ದೇಶದ ಸಂವಿಧಾನದ ಮೇಲೆ ಅಸಮ್ಮತಿಯನ್ನು ಹೊಂದಿದವರೇ ಆಗಿದ್ದಾರೆ. ಆದುದರಿಂದಲೇ, ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್ ಸಂಸತ್‌ನೊಳಗೆ ಕಾಲಿಟ್ಟ ಆ ದಿನ ನಿಜಕ್ಕೂ, ಅಫ್ಝಲ್ ಗುರು ಪ್ರಜಾಸತ್ತೆಯ ದೌರ್ಬಲ್ಯ ಬಳಸಿಕೊಂಡು, ಧರ್ಮ, ಬಟ್ಟೆ, ಲಿಂಗವನ್ನು ಬದಲಿಸಿ ಸಂಸತ್‌ಗೆ ಕಾಲಿಟ್ಟ ಎಂದು ನಾವು ಭಾವಿಸಬೇಕಾಗಿದೆ. ಒಂದು ವೇಳೆ, ನಾಳೆ ಪ್ರಜ್ಞಾ ಸಿಂಗ್ ಠಾಕೂರ್ ಮೇಲಿನ ಸ್ಫೋಟ ಆರೋಪ ಸಾಬೀತಾದರೆ ಈ ದೇಶದ ಪ್ರಜಾಸತ್ತೆಯ ಮೇಲೆ, ಸಂಸತ್‌ನ ಮೇಲೆ ಆದ ಕಳಂಕವನ್ನು ಯಾವ ನೀರಿನಿಂದಲೂ ತೊಳೆಯುವುದಕ್ಕೆ ಸಾಧ್ಯವಿಲ್ಲ.

ವಿಪರ್ಯಾಸವೆಂದರೆ, ತನ್ನ ಕೃತ್ಯಕ್ಕೆ ಬಿಜೆಪಿ ಎಳ್ಳಷ್ಟು ಕೀಳರಿಮೆಯನ್ನು ಹೊಂದಿಲ್ಲ ಮತ್ತು ಇದು ಪೂರ್ವನಿಯೋಜಿತ ಎನ್ನುವುದು ಸಾಬೀತಾಗುವಂತೆ, ಪ್ರಜ್ಞಾಸಿಂಗ್ ಠಾಕೂರ್‌ಗೆ ಸಂಸತ್‌ನಲ್ಲಿ ಮಹತ್ವದ ಹುದ್ದೆಯೊಂದನ್ನು ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸಂಸದೀಯ ಸಮಿತಿಗೆ ಸದಸ್ಯೆಯಾಗಿ ಪ್ರಜ್ಞಾಸಿಂಗ್‌ರನ್ನು ನೇಮಕ ಮಾಡಿದೆ. ಪ್ರಜ್ಞಾಸಿಂಗ್ ಸಂಸತ್‌ನೊಳಗೆ ಕಾಲಿಟ್ಟಾಗ ಹೇಗೆ ಅಫ್ಝಲ್ ಗುರು ಗಹಗಹಿಸಿ ನಕ್ಕಿರಬಹುದೋ, ಈಕೆಯನ್ನು ದೇಶದ ರಕ್ಷಣಾ ವಿಷಯದಲ್ಲಿ ಶಾಮೀಲು ಮಾಡಿದ ದಿನ, ಸಂಸತ್ ದಾಳಿಯಲ್ಲಿ ಉಗ್ರರನ್ನು ಮಟ್ಟ ಹಾಕಿ ಹುತಾತ್ಮರಾದ ಯೋಧರ ಆತ್ಮ ಕಣ್ಣೀರು ಹಾಕಿರಬಹುದು. ಸಂಸತ್ ದಾಳಿಯಲ್ಲಿ ಹುತಾತ್ಮರಾದ ಪೊಲೀಸರಿಗಾಗಿ ಪ್ರತಿ ವರ್ಷ ಸಂಸತ್ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಇದೀಗ ಓರ್ವ ಸ್ಫೋಟ ಆರೋಪಿಯನ್ನೇ ರಕ್ಷಣಾ ಸಲಹಾ ಸಮಿತಿ ಸದಸ್ಯೆಯನ್ನಾಗಿಸಿ ಆ ಯೋಧರ ಬಲಿದಾನಕ್ಕೆ ಸರಕಾರ ಅವಮಾನ ಮಾಡಿದೆ. ಈಗ ಯಾವ ಮುಖ ಇಟ್ಟು ಸರಕಾರ ಸಂಸತ್ ದಾಳಿಯಲ್ಲಿ ಬಲಿಯಾದ ಸಂತ್ರಸ್ತರಿಗೆ ತನ್ನ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ?

ಈ ದೇಶದ ವಿರುದ್ಧ ದಾಳಿ ನಡೆಸಿದ ಆರೋಪ ಮಾತ್ರವಲ್ಲ, ಠಾಕೂರ್ ಮಾನಸಿಕವಾಗಿ ಇನ್ನೂ ಉಗ್ರವಾದಿ ಧೋರಣೆಗೇ ಆತುಕೊಂಡಿದ್ದಾರೆ ಎನ್ನುವುದನ್ನು ಚುನಾವಣೆಯ ಸಂದರ್ಭದಲ್ಲಿ ಆಕೆ ನೀಡಿದ ಹೇಳಿಕೆಗಳೇ ಸಾಬೀತು ಪಡಿಸಿವೆ. ಮುಂಬೈ ದಾಳಿಯ ಸಂದರ್ಭದಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ಕರ್ಕರೆ ಸೇರಿದಂತೆ ಅವರ ಸಹೋದ್ಯೋಗಿಗಳನ್ನು ಅತ್ಯಂತ ನಿಕೃಷ್ಟವಾಗಿ ಟೀಕಿಸಿದವರು ಪ್ರಜ್ಞಾಸಿಂಗ್. ಉಗ್ರರ ವಿರುದ್ಧ ಹೋರಾಡಿದವರನ್ನು ನಿಕೃಷ್ಟರಾಗಿ ಕಾಣುವವರು ಪರೋಕ್ಷವಾಗಿ ಉಗ್ರರ ಬೆಂಬಲಿಗರೇ ಆಗಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿದೆಯೇ? ಅಷ್ಟೇ ಅಲ್ಲ, ಮಹಾತ್ಮಾಗಾಂಧೀಜಿಯನ್ನು ಕೊಂದು ಗಲ್ಲಿಗೇರಿದ ಸ್ವಾತಂತ್ರೋತ್ತರ ಭಾರತದ ಪ್ರಪ್ರಥಮ ಭಯೋತ್ಪಾದಕ ನಾಥೂರಾಂ ಗೋಡ್ಸೆಯನ್ನು ದೇಶಪ್ರೇಮಿ ಎಂದು ಕರೆಯುವ ಈಕೆ, ಆ ಮೂಲಕ ಗಾಂಧೀಜಿಯ ಕೊಲೆಯನ್ನು ಬಹಿರಂಗವಾಗಿ ಸಮರ್ಥಿಸಿದ್ದಾರೆ. ಮೂಲತಃ ಈ ದೇಶದ ಸಂವಿಧಾನದ ಕುರಿತಂತೆಯೇ ಪ್ರಜ್ಞಾಗೆ ಅಸಮಾಧಾನವಿದೆ.

ಭಾರತದ ಪ್ರಜಾಸತ್ತೆಯನ್ನು ಕಿತ್ತೊಗೆದು ವೈದಿಕ ಸಂವಿಧಾನದ ತಳಹದಿಯಲ್ಲಿ ‘ಹಿಂದುತ್ವ ರಾಷ್ಟ್ರ’ವೊಂದನ್ನು ಕಟ್ಟುವ ಸಿದ್ಧಾಂತಕ್ಕೆ ಈಕೆ ಬದ್ಧರಾದವರು ಮಾತ್ರವಲ್ಲ, ಅದಕ್ಕಾಗಿ ಹಿಂಸೆಯನ್ನು ಸಮರ್ಥಿಸುವವರೂ ಆಗಿದ್ದಾರೆ. ಇಂತಹ ವಿಕೃತ ಮನಸ್ಸನ್ನು ಈ ದೇಶದ ರಕ್ಷಣಾ ಸಲಹಾ ಸಮಿತಿಯಲ್ಲಿ ಸದಸ್ಯೆಯನ್ನಾಗಿ ಮಾಡಿರುವುದೇ ನಮ್ಮ ರಕ್ಷಣಾ ಇಲಾಖೆಗೆ ಮಾಡಿರುವ ಮಹಾ ದ್ರೋಹವಾಗಿದೆ. ಈ ದೇಶದ ರಕ್ಷಣೆಗಾಗಿ ಉಗ್ರರೊಂದಿಗೆ ಹೋರಾಡುತ್ತಾ ಮಡಿದಿರುವ ಸಾವಿರಾರು ಸೈನಿಕರಿಗೆ ಎಸಗಿದ ವಂಚನೆಯಾಗಿದೆ. ಪ್ರಜ್ಞಾಸಿಂಗ್‌ಗೆ ಇಂತಹದೊಂದು ಗೌರವ ನೀಡುವ ಮೂಲಕ ಬಿಜೆಪಿ ಸರಕಾರ ಈ ದೇಶದ ಕೇಸರಿ ಉಗ್ರವಾದವನ್ನು ನೇರವಾಗಿಯೇ ಎತ್ತಿ ಹಿಡಿದಂತಾಗಿದೆ. ಇದು ಕೇಸರಿ ಉಗ್ರವಾದಿಗಳು ನಡೆಸಿರುವ ದೇಶದ್ರೋಹಿ ಕೃತ್ಯಗಳನ್ನು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ. ಜೊತೆಗೆ ಕೇಸರಿ ಉಗ್ರರಿಗೆ ಇನ್ನಷ್ಟು ಕುಕೃತ್ಯಗಳನ್ನು ಎಸಗಲು ಕುಮ್ಮಕ್ಕು ಕೊಟ್ಟಿದೆ.

ಬಹುಶಃ ಉಗ್ರವಾದಿಗಳ ಬೀಡು ಎಂದು ಆರೋಪಕ್ಕೊಳಗಾಗಿರುವ ಪಾಕಿಸ್ತಾನದಲ್ಲೂ ಇಂತಹ ಸ್ಥಿತಿಯಿಲ್ಲ. ಅಲ್ಲಿ ಯಾವುದೇ ಉಗ್ರವಾದಿಗಳನ್ನು ಅವರು ಸಂಸತ್‌ನೊಳಗೆ ಕಾಲಿಡಲು ಇನ್ನೂ ಅವಕಾಶ ನೀಡಿಲ್ಲ. ಪಾಕಿಸ್ತಾನ ಸಾಧಿಸದೇ ಇದ್ದುದನ್ನು ಭಾರತ ಪ್ರಜಾಸತ್ತೆಯ ಹೆಸರಿನಲ್ಲೇ ಸಾಧಿಸಲು ಮುಂದಾಗಿದೆ. ಸರಕಾರದ ಈ ಕ್ರಮವನ್ನು ದೇಶದ ರಕ್ಷಣೆಯ ಕುರಿತಂತೆ ಕಾಳಜಿಯಿರುವ ಜನರು ಒಕ್ಕೊರಲಲ್ಲಿ ಖಂಡಿಸಬೇಕಾಗಿದೆ. ಆಕೆಯನ್ನು ಆ ಸ್ಥಾನದಿಂದ ಕಿತ್ತೊಗೆಯಬೇಕು ಮಾತ್ರವಲ್ಲ, ತನ್ನ ಕೃತ್ಯಕ್ಕಾಗಿ ಸರಕಾರ ದೇಶದ ಕ್ಷಮೆ ಯಾಚಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News