ಚುನಾವಣಾ ಬಾಂಡ್: ಸಂಸತ್ ಆವರಣದಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2019-11-22 18:32 GMT

ಹೊಸದಿಲ್ಲಿ, ನ. 22: ಚುನಾವಣಾ ಬಾಂಡ್ ಕುರಿತು ಕೇಂದ್ರದ ವಿರುದ್ಧ ತನ್ನ ವಾಗ್ದಾಳಿಯನ್ನು ಶುಕ್ರವಾರ ತೀವ್ರಗೊಳಿಸಿರುವ ಕಾಂಗ್ರೆಸ್, ಕೇಂದ್ರ ಸರಕಾರ ‘ಸುಳ್ಳಿನ ಕಾರ್ಖಾನೆ’ ಎಂದು ಹೇಳಿದೆ ಹಾಗೂ ಈ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವೌನ ಮುರಿಯುವಂತೆ ಆಗ್ರಹಿಸಿದೆ.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಝಾದ್, ಲೋಕ ಸಭೆಯ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧುರಿ, ಆನಂದ್ ಶರ್ಮಾ, ಶಶಿ ತರೂರ್ ಹಾಗೂ ಮನೀಶ್ ತೀವಾರಿ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಸಂಸತ್ ಸದನದ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಚುನಾವಣಾ ಬಾಂಡ್‌ಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ ವರದಿ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ. ಆದರೆ, ಈ ಆಕ್ಷೇಪವನ್ನು ಮೋದಿ ಸರಕಾರ ತಳ್ಳಿ ಹಾಕಿದೆ.

 ಸಂಸತ್ತಿನ ಆವರಣದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಸಮೀಪ ಸೇರಿದ ಕಾಂಗ್ರೆಸ್ ಸಂಸದರು ‘6,000 ಕೋಟಿ ರೂ. ದರೋಡೆ’ ಎಂಬ ಘೋಷಣಾ ಫಲಕವನ್ನು ಹಿಡಿದುಕೊಂಡು, ‘ಮೋದಿಯವರೇ ಮಾತನಾಡಿ’ ಎಂದು ಘೋಷಣೆಗಳನ್ನು ಕೂಗಿದರು.

 ‘‘ಚುನಾವಣಾ ಬಾಂಡ್ ನಕಲಿ. ಅದು ಹಾಡು ಹಗಲಿನ ದರೋಡೆ’’ ಎಂದು ಸಂಸದರು ಘೋಷಣೆಗಳನ್ನು ಕೂಗಿದರು.

ಕಾನೂನು ಬಾಹಿರ ಮಾರ್ಗದಲ್ಲಿ ಮಾರಾಟ ಮಾಡಿದ ಅವಧಿ ಮುಗಿದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವಂತೆ ಕೇಂದ್ರ ಸರಕಾರ ಎಸ್‌ಬಿಐ ಮೇಲೆ ಒತ್ತಡ ಹೇರಿದೆ ಎಂದು ಪ್ರತಿಪಾದಿಸಿದ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್‌ನ ವಕ್ತಾರ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದರು ಹಾಗೂ ಸರಕಾರ ‘ಸುಳ್ಳಿನ ಕಾರ್ಖಾನೆ’ ಎಂದು ಆರೋಪಿಸಿದ್ದರು.

ಸದನದಲ್ಲಿ ಗೊಂದಲ ಉಂಟು ಮಾಡಿದ ಕಾಂಗ್ರೆಸ್ ಅನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಅನ್ನು ಗುರುವಾರ ತರಾಟೆಗೆ ತೆಗೆದುಕೊಂಡ ರೈಲ್ವೆ ಹಾಗೂ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಪೀಯೂಷ್ ಗೋಯಲ್, ಕಪ್ಪು ಹಣದ ಶಾಪಕ್ಕೆ ಒಳಗಾದ ಚುನಾವಣಾ ಪ್ರಕ್ರಿಯೆಯನ್ನು ಶುದ್ಧಗೊಳಿಸುವ ವ್ಯವಸ್ಥೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ಸಹಜವಾದುದು ಎಂದು ವ್ಯಂಗ್ಯವಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News