ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ನೂರಾರು ಜನರಿಂದ ಸಂಸತ್ ಗೆ ರ‍್ಯಾಲಿ

Update: 2019-11-23 15:06 GMT

ಹೊಸದಿಲ್ಲಿ, ನ. 23: ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಶುಲ್ಕ ಏರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಹೊಸದಿಲ್ಲಿಯಲ್ಲಿ ಶನಿವಾರ ನೂರಾರು ಜನರು ಸಂಸತ್ತಿಗೆ ರ್ಯಾಲಿ ನಡೆಸಿದ್ದಾರೆ.

ನಾಗರಿಕ ಸಮಾಜದ ಸದಸ್ಯರು, ಜೆಎನ್‌ಯುನ ಹಳೆ ವಿದ್ಯಾರ್ಥಿಗಳು ಒಳಗೊಂಡ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು. ಶುಲ್ಕ ಏರಿಕೆ ಹಿಂದೆ ತೆಗೆದುಕೊಳ್ಳಬೇಕು ಹಾಗೂ ಶಿಕ್ಷಣ ಎಲ್ಲರಿಗೂ ಕೈಗೆಟುಕುವಂತಾಗಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದು, ಮೊದಲ ಬಾರಿಗೆ ನಾಗರಿಕ ಸಮಾಜದ ಸದಸ್ಯರು ವಿದ್ಯಾರ್ಥಿಗಳ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಮಂಡಿಹೌಸ್‌ನಲ್ಲಿ ಸೇರಿದ ಪ್ರತಿಭಟನಕಾರರು ಸಂಸತ್ತಿಗೆ ರ್ಯಾಲಿ ನಡೆಸಿದರು. ಈ ಸಂದರ್ಭ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕನ್ಹೌಟ್‌ಪ್ಲೇಸ್‌ಗೆ ಸಾಗುವ ರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿ ಸಂಚಾರ ನಿರ್ಬಂಧಿಸಿದ್ದರು.

ಎಸ್‌ಎಫ್‌ಐ, ಕೆವೈಎಸ್, ಎಐಎಸ್‌ಎಫ್ ಹಾಗೂ ಎನ್‌ಎಸ್‌ಯುಐ ಸಹಿತ ಹಲವು ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಪ್ರತಿಭಟನಾ ರ್ಯಾಲಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಜನತಾ ದಳ, ಭೀಮ್ ಆರ್ಮಿಯ ಕಾರ್ಯಕರ್ತರು ಕೂಡ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News