ಎಫ್‌ಎಟಿಎಫ್ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿ: ಪಾಕಿಸ್ತಾನಕ್ಕೆ ಅಮೆರಿಕ ಒತ್ತಾಯ
ವಾಶಿಂಗ್ಟನ್, ನ. 23: ಭಯೋತ್ಪಾದನೆಗೆ ಹಣಕಾಸು ಪೂರೈಸುವವರ ಮೇಲೆ ನಿಗಾ ಇಡುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಶಿಫಾರಸುಗಳನ್ನು ಪಾಕಿಸ್ತಾನ ಸಂಪೂರ್ಣವಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಶ್ಯಗಳ ಉಸ್ತುವಾರಿ ಹೊತ್ತಿರುವ ಸಹಾಯಕ ಕಾರ್ಯದರ್ಶಿ ಆ್ಯಲಿಸ್ ವೆಲ್ ಹೇಳಿದ್ದಾರೆ.
ಪಾಕಿಸ್ತಾನವು ಎಫ್‌ಎಟಿಎಫ್ ಶಿಫಾರಸುಗಳನ್ನು ಜಾರಿಗೊಳಿಸಿದರೆ ಹಾಗೂ ಅದರ ಜೊತೆಗೆ ಭಯೋತ್ಪಾದಕ ಜಾಲಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡರೆ, ಪಾಕಿಸ್ತಾನದ ವಿರುದ್ಧದ ಪ್ರಯಾಣ ಸೂಚನೆಗಳನ್ನು ಮರುಪರಿಶೀಲಿಸಲು ಅಮೆರಿಕಕ್ಕೆ ಸಹಾಯವಾಗುತ್ತದೆ ಎಂದು ಗುರುವಾರ ವಿಲ್ಸನ್ ಸೆಂಟರ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
‘‘ಪಾಕಿಸ್ತಾನದ ಭದ್ರತಾ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ನೋಡಲು ನಾವು ಬಯಸುತ್ತೇವೆ. ಅದು ಅಮೆರಿಕದ ಪ್ರಯಾಣ ಸೂಚನೆಯಲ್ಲಿ ಪ್ರತಿಫಲಿಸುತ್ತದೆ’’ ಎಂದು ಆ್ಯಲಿಸ್ ವೆಲ್ಸ್ ಹೇಳಿದರು.
‘‘ಭಯೋತ್ಪಾದನೆಗೆ ಹಣಕಾಸು ಪೂರೈಕೆಯಾಗುವುದನ್ನು ತಡೆಯುವುದನ್ನು ಖಾತರಿಪಡಿಸುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್‌ನ ಶಿಫಾರಸುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದು ಹಾಗೂ ಭಯೋತ್ಪಾದಕ ಸಂಘಟನೆಗಳ ಸದಸ್ಯರ ಆಸ್ತಿಗಳನ್ನು ವಶಪಡಿಸಿಕೊಂಡು ಅವರನ್ನು ವಿಚಾರಣೆಗೆ ಗುರಿಪಡಿಸುವುದು- ಇವು ಪಾಕಿಸ್ತಾನ ಮುಖ್ಯವಾಗಿ ಮಾಡಬೇಕಾದ ಕೆಲಸಗಳಾಗಿವೆ’’ ಎಂದರು.
ಪಾಕ್ ಪ್ರಯಾಣ ಮರುಪರಿಶೀಲನೆಗೆ ಸೂಚನೆ ನೀಡಿದ್ದ ಅಮೆರಿಕ
ಈ ವರ್ಷದ ಎಪ್ರಿಲ್ 9ರಂದು ಅಮೆರಿಕ ತನ್ನ ನಾಗರಿಕರಿಗಾಗಿ ಹೊರಡಿಸಿದ ಕೊನೆಯ ಪ್ರಯಾಣ ಸೂಚನೆಯಲ್ಲಿ, ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು.
ಅದೂ ಅಲ್ಲದೆ, ಭಯೋತ್ಪಾದನೆ ಮತ್ತು ಅಪಹರಣ ಪ್ರಕರಣಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂನ್‌ಖ್ವ ರಾಜ್ಯಗಳಿಗೆ ಪ್ರಯಾಣಿಸದಂತೆಯೂ ಅದು ಅಮೆರಿಕನ್ನರಿಗೆ ಎಚ್ಚರಿಕೆ ನೀಡಿತ್ತು.