ಅಮಿತ್ ಶಾ ವರ್ಸಸ್ ಪವಾರ್: ಕುತೂಹಲ ಘಟ್ಟಕ್ಕೆ ಚಾಣಕ್ಯರ ಸಮರ

Update: 2019-11-24 03:41 GMT

ಮುಂಬೈ, ನ.24: ಮಹಾರಾಷ್ಟ್ರದಲ್ಲಿ ಫಡ್ನವೀಸ್ ನೇತೃತ್ರವದ ಸರ್ಕಾರ ರಚನೆಯಾಗಿದ್ದರೂ, ಬಿಜೆಪಿ ಚಾಣಕ್ಯ ಅಮಿತ್ ಶಾ ಅವರ ಎಲ್ಲ ರಣತಂತ್ರಗಳು ಫಲಿಸಿಲ್ಲ. ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ನಿರೀಕ್ಷಿತ ಮಟ್ಟದಲ್ಲಿ ಶಾಸಕರು ಬಿಜೆಪಿಯತ್ತ ಬಂದಿಲ್ಲ. ಆದರೂ ಮಹಾರಾಷ್ಟ್ರದ ರಾಜಕೀಯ ಸರ್ಜಿಕಲ್ ಸ್ಟ್ರೈಕ್ ದಾಳಿಯ ಕೀರ್ತಿ ಅಮಿತ್ ಶಾ ಅವರಿಗೆ ಸಲ್ಲುತ್ತದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಯಶಸ್ಸು ಸಾಧಿಸದ ಹಿನ್ನೆಲೆಯಲ್ಲಿ ಶಿವಸೇನೆ ಅಧಿಕಾರ ಹಂಚಿಕೆಗೆ 50:50 ಸೂತ್ರ ಅನುಸರಿಸುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಮಸ್ಯೆ ಕಗ್ಗಂಟಾಗಿತ್ತು. ಆದರೆ ಶಾ ಅಧಿಕಾರ ಹಂಚಿಕೆ ಬದಲು ರಣತಂತ್ರ ರೂಪಿಸಿ ಅಚ್ಚರಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಆದರೆ ಅವರು ಸಮರ ಸಾರಿರುವುದು ಮತ್ತೊಬ್ಬ ಮುತ್ಸದ್ದಿ ಹಾಗೂ ಎನ್‌ಸಿಪಿ ನಾಯಕ ಶರದ್ ಪವಾರ್ ವಿರುದ್ಧ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಗೆ ಎನ್‌ಸಿಪಿ ಕೊಚ್ಚಿಹೋಗಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಿದೆ.

54 ಶಾಸಕರನ್ನು ಹೊಂದಿರುವ ಎನ್‌ಸಿಪಿ, ಉದ್ಧವ್ ಠಾಕ್ರೆಯವರ ಮಹತ್ವಾಕಾಂಕ್ಷೆಯ ಪರಿಣಾಮವಾಗಿ ಕಿಂಗ್‌ಮೇಕರ್ ಸ್ಥಾನಕ್ಕೆ ಬಂತು ನಿಂತಿತು. ಪವಾರ್ ಕಾಂಗ್ರೆಸ್ ಹಾಗೂ ಶಿವಸೇನೆ ನಡುವಿನ ಮೈತ್ರಿಗೂ ಸೂತ್ರಧಾರರಾದರು. ಆದರೆ ಅಳಿಯ ಅಜಿತ್ ಪವಾರ್ ಅವರಿಂದಲೇ ಅನಿರೀಕ್ಷಿತ ಬಂಡಾಯ ಎದುರಾಗಿರುವುದು ಪವಾರ್‌ಗೆ ಅಚ್ಚರಿ ತಂದಿದೆ. ಶಿವಸೇನೆಗೆ ಪಾಠ ಕಲಿಸಲು ಬಿಜೆಪಿ ಜತೆ ಕೈಜೋಡಿಸಿದ್ದಾಗಿ ಅಜಿತ್ ಘೋಷಿಸಿದ್ದಾರೆ.

ನೂತನ ಸರ್ಕಾರದ ವಿರುದ್ಧ ಎನ್‌ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಸುಪ್ರೀಂ ಕೋರ್ಟ್‌ನ ಮೆಟ್ಟಲೇರಿದ್ದು, ಶಾ ಹಾಗೂ ಪವಾರ್ ನಡುವಿನ ಪ್ರತಿಷ್ಠೆಯ ಹೋರಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಅಧಿಕಾರ ಕೈಯಲ್ಲಿರುವುದು ಶಾ ಅವರಿಗೆ ಮುನ್ನಡೆ ದೊರಕಿಸುತ್ತದೆ ಎಂಬ ನಿರೀಕ್ಷೆ ಇದೆ. ಆದರೆ ಎನ್‌ಸಿಪಿ ಶಾಸಕರು ಪವಾರ್ ಅವರನ್ನು ನಿರ್ಲಕ್ಷ್ಯಿಸುವ ಸಾಹಸ ಮಾಡುವುದಿಲ್ಲ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಇಬ್ಬರು ಗಣ್ಯರ ಪ್ರತಿಷ್ಠೆಯ ಹೋರಾಟದಲ್ಲಿ ಗೆಲುವು ಯಾರದು ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News