ಈ ದೇಶದಲ್ಲಿನ್ನು ಘೇಂಡಾಮೃಗವೇ ಇಲ್ಲ !

Update: 2019-11-24 17:04 GMT

ಕೌಲಾಲಂಪುರ, ನ.24: ಮಲೇಶ್ಯದಲ್ಲಿದ್ದ ಕಟ್ಟಕಡೆಯ ಸುಮಾತ್ರ ಘೇಂಡಾಮೃಗವು ರವಿವಾರ ಮೃತಪಟ್ಟಿದೆಯೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಇಮಾನ್ ಎಂಬ ಹೆಸರಿನ ಈ ಹೆಣ್ಣು ಘೇಂಡಾಮೃಗದ ಸಾವಿನೊಂದಿಗೆ ಈಗ ಮಲೇಶ್ಯದಲ್ಲಿ ಘೇಂಡಾಮೃಗ ಸಂಪೂರ್ಣವಾಗಿ ಅಳಿದುಹೋದಂತಾಗಿದೆ. ಜಗತ್ತಿನಾದ್ಯಂತ ಈಗ ಕೇವಲ 80 ಸುಮಾತ್ರತಳಿಯ ಘೇಂಡಾಮೃಗಗಳು ಇರುವುದಾಗಿ ವಿಶ್ವ ವನ್ಯಜೀವಿ ನಿಧಿ ತಿಳಿಸಿದೆ. ಒಂದು ಕಾಲದಲ್ಲಿ ಇಂಡೊನೇಶ್ಯ, ಮಲೇಶ್ಯ ಹಾಗೂ ಭಾರತದಲ್ಲಿ ಸುಮಾತ್ರ ತಳಿಯ ಘೇಂಡಾಮೃಗಗಳು ಹೇರಳವಾಗಿದ್ದವು.

 25 ವರ್ಷದ ಇಮಾನ್ ಘೇಂಡಾಮೃಗವು ಮಲೇಶ್ಯದ ಸಭಾ ರಾಜ್ಯದ ಬೋರ್ನಿಯೊ ದ್ವೀಪದಲ್ಲಿ ಕೊನೆಯುಸಿರೆಳೆಯಿತೆಂದು ಸಭಾ ವನ್ಯಜೀವಿ ಇಲಾಖೆಯ ನಿರ್ದೇಶಕಿ ಆಗಸ್ಟಿನ್ ಟುಗಾ ಅವರು ತಿಳಿಸಿದ್ದಾರೆ.

ಈ ಹೆಣ್ಣು ಘೇಂಡಾ ಮೃಗವು ಮೆದುಳಿನ ಗಡ್ಡೆಯಿಂದ ಬಾಧಿತವಾಗಿತ್ತೆಂದು ಆಗಸ್ಟಿನ್ ಟುಗಾ ತಿಳಿಸಿದ್ದಾರೆ. ಮಲೇಶ್ಯದ ಕಟ್ಟಕಡೆಯ ಸುಮಾತ್ರ ತಳಿಯ ಗಂಡು ಘೇಂಡಾಮೃಗವು ಈ ವರ್ಷದ ಮೇ ತಿಂಗಳಲ್ಲಿ ಸಾವನ್ನಪ್ಪಿತ್ತು. ಟ್ಯಾಮ್ ಎಂಬ ಹೆಸರಿನ ಈ ಘೇಂಡಾ ಮೃಗವು, ಇಮಾನ್ ಇದ್ದ ಬೊರ್ನಿಯೊ ದ್ವೀಪದ ಅಭಯಾರಣ್ಯದಲ್ಲಿ ವಾಸವಾಗಿತ್ತೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News