ಅಂಬೇಡ್ಕರ್ ಈಗ ಬದುಕಿದ್ದಿದ್ದರೆ ಅತ್ಯಂತ ಖುಷಿ ಪಡುತ್ತಿದ್ದರು: ಸಂವಿಧಾನ ದಿನ ಭಾಷಣದಲ್ಲಿ ಪ್ರಧಾನಿ ಮೋದಿ

Update: 2019-11-26 08:53 GMT

ಹೊಸದಿಲ್ಲಿ, ನ.26: ‘‘ಭಾರತೀಯರ ಘನತೆ’ ಕಾಪಾಡುವುದು ಹಾಗೂ ‘ದೇಶದ ಏಕತೆ’ ಸಂವಿಧಾನದ ಎರಡು ಮಂತ್ರಗಳಾಗಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಇಂದು ಬದುಕಿರುತ್ತಿದ್ದರೆ ಅವರು ಪ್ರಾಯಶಃ ಅತ್ಯಂತ ಸಂತೋಷ ಪಡುತ್ತಿದ್ದರು’’ ಎಂದು ಸಂವಿಧಾನ ದಿನದಂದು ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಸಂಸತ್ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಭಾರತೀಯರು ಪ್ರಜಾಪ್ರಭುತ್ವದ ಮೇಲಿರಿಸಿರುವ ವಿಶ್ವಾಸವನ್ನು ಶ್ಲಾಘಿಸಿದ ಮೋದಿ, ಸಂವಿಧಾನವನ್ನು ಪವಿತ್ರ ಗ್ರಂಥಕ್ಕೆ ಹೋಲಿಸಿದರು. ‘‘ಪ್ರಜಾಪ್ರಭುತ್ವದ ಮೇಲಿನ ತಮ್ಮ ವಿಶ್ವಾಸ ಯಾವತ್ತೂ ಕುಂದದಂತೆ ನೋಡಿಕೊಳ್ಳುವ 130 ಕೋಟಿ ಭಾರತೀಯರೆದುರು ನಾನು ನಮಿಸುತ್ತೇನೆ. ನಮ್ಮ ಸಂವಿಧಾನವನ್ನು ಒಂದು ಪವಿತ್ರ ಗ್ರಂಥ, ಒಂದು ದಾರಿದೀಪವೆಂದು ನಾನು ಯಾವತೂ ಪರಿಗಣಿಸಿದ್ದೇನೆ’’ ಎಂದರು.

‘‘ಸಂವಿಧಾನವು ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆಯೂ ಹೇಳಿದೆ. ನಮ್ಮ ಕರ್ತವ್ಯಗಳನ್ನು ನಾವು ನಿಷ್ಠೆಯಿಂದ ಮಾಡಿದಾಗ ಎಲ್ಲ ಹಕ್ಕುಗಳನ್ನೂ ನಾವು ನಿರೀಕ್ಷಿಸಬಹುದೆಂದು ಗಾಂಧೀಜಿ ಹೇಳಿದ್ದರು. ಗಾಂಧೀಜಿಯವರ ಪ್ರಕಾರ ನಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳ ನಡುವೆ ನೇರ ನಂಟಿದೆ’’ಎಂದು ಪ್ರಧಾನಿ ಹೇಳಿದರು.

26/11ರ ಮುಂಬೈ ಉಗ್ರ ದಾಳಿಗಳಲ್ಲಿ ಮೃತಪಟ್ಟವರಿಗೂ ಈ ಸಂದರ್ಭ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರಧಾನಿ ತಮ್ಮ ಭಾಷಣ ನೀಡುತ್ತಿರುವಾಗ, ಕಾಂಗ್ರೆಸ್, ಶಿವಸೇನೆ ಸಹಿತ ವಿಪಕ್ಷಗಳು ಸಂಸತ್ತಿನ ಹೊರಗೆ ಮಹಾರಾಷ್ಟ್ರದ ವಿಚಾರವನ್ನೆತ್ತಿಕೊಂಡು ಪ್ರತಿಭಟಿಸುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News