ನ್ಯಾಟೋದ ಭವಿಷ್ಯದ ಬಗ್ಗೆ ‘ತಿಳಿದವರಲ್ಲಿ’ ಕೇಳಲು ನಿರ್ಧಾರ

Update: 2019-11-27 14:33 GMT

 ಬ್ರಸೆಲ್ಸ್ (ಬೆಲ್ಜಿಯಮ್), ನ. 27: ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೊ)ನ ಪ್ರಸ್ತುತತೆಯ ಬಗ್ಗೆ ಹಲವು ಸದಸ್ಯರು ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ, ಈ ಮಿತ್ರಕೂಟಕ್ಕೆ ಸುಧಾರಣೆ ತರಲು ಸಹಾಯ ಮಾಡುವಂತೆ ‘ತಿಳಿದವರ’ ಬಳಿ ಮನವಿ ಮಾಡಲು ಅದು ನಿರ್ಧರಿಸಿದೆ.

ಈ ಮಿತ್ರಕೂಟದ ಪ್ರಸ್ತುತತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ ಹಾಗೂ ಅದು ಸಾಯುತ್ತಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.

ಲಂಡನ್‌ನಲ್ಲಿ ಡಿಸೆಂಬರ್ 4ರಂದು ಸಂಘಟನೆಯ 70ನೇ ವಾರ್ಷಿಕ ದಿನದ ಅಂಗವಾಗಿ ನಡೆಯಲಿರುವ ಶೃಂಗ ಸಮ್ಮೇಳನದಲ್ಲಿ 29 ಸದಸ್ಯ ದೇಶಗಳು ಏಕತೆಯನ್ನು ಪ್ರದರ್ಶಿಸಲು ಪ್ರಯತ್ನಿಸಲಿವೆ. ಆದರೆ, ಅಮೆರಿಕ ನೇತೃತ್ವದ ಮಿತ್ರಕೂಟದ ಭವಿಷ್ಯದ ಬಗ್ಗೆ ಈಗಾಗಲೇ ಪ್ರಶ್ನೆಗಳು ಎದ್ದಿವೆ.

2018 ಜುಲೈಯಲ್ಲಿ ನಡೆದ ನ್ಯಾಟೋ ಶೃಂಗ ಸಮ್ಮೇಳನದಲ್ಲಿ ಟ್ರಂಪ್ ಜರ್ಮನಿಯನ್ನು ಟೀಕಿಸಿದ್ದರು ಹಾಗೂ ಅದರಿಂದ ಹೊರಬರುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ, ಬಳಿಕ ಸಂಘಟನೆಯನ್ನು ಪ್ರಶಂಸಿರುವ ಅವರು ಅದರಲ್ಲಿ ಆಗಿರುವ ಸುಧಾರಣೆಗಳಿಗೆ ನಾನೇ ಕಾರಣ ಎಂದಿದ್ದರು.

ಹಾಗಾಗಿ, ಟ್ರಂಪ್‌ರಿಂದ ಏನು ನಿರೀಕ್ಷಿಸಬಹುದು ಎಂಬ ಬಗ್ಗೆ ಯುರೋಪ್ ದೇಶಗಳು ಮತ್ತು ಕೆನಡ ಗೊಂದಲದಲ್ಲಿವೆ.

1949 ಎಪ್ರಿಲ್ 4ರಂದು ಅಸ್ತಿತ್ವಕ್ಕೆ ಬಂದ ನ್ಯಾಟೋ, ಉತ್ತರ ಅಮೆರಿಕ ಮತ್ತು ಯುರೋಪ್‌ನ 29 ದೇಶಗಳನ್ನು ಸದಸ್ಯರಾಗಿ ಹೊಂದಿದೆ. ಸಂಘಟನೆಯ ಯಾವುದಾದರೂ ದೇಶದ ಮೇಲೆ ದಾಳಿ ನಡೆದರೆ, ಇತರ ದೇಶಗಳು ಅದರ ರಕ್ಷಣೆಗೆ ಧಾವಿಸುವುದು ಅದರ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News