ಜಮ್ಮು- ಕಾಶ್ಮೀರದಲ್ಲಿ ನಿರ್ಬಂಧ ಪ್ರಶ್ನಿಸಿದ ಅರ್ಜಿಗಳ ತೀರ್ಪು ಕಾದಿರಿಸಿದ ಸುಪ್ರೀಂ

Update: 2019-11-28 07:53 GMT
Supreme Court | PTI

ಹೊಸದಿಲ್ಲಿ, ನ.27: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಸಹಿತ ಹಲವರು ಸಲ್ಲಿಸಿರುವ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

 ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಎನ್‌ವಿ ರಮಣ, ಆರ್ ಸುಭಾಷ್ ರೆಡ್ಡಿ ಮತ್ತು ಬಿಆರ್ ಗವಾಯ್ ಅವರಿದ್ದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.

 ವಿಚಾರಣೆ ಸಂದರ್ಭ ವಾದ ಮಂಡಿಸಿದ ಗುಲಾಂ ನಬಿ ಆಝಾದ್ ಪರ ವಕೀಲ ಕಪಿಲ್ ಸಿಬಲ್, ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ಭದ್ರತೆಯ ಸಮಸ್ಯೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಂದು 7 ಮಿಲಿಯನ್ ಜನಸಂಖ್ಯೆಯನ್ನು ‘ಬಂಧಿಸಿರುವುದು’ ಸರಿಯಲ್ಲ ಎಂದರು. ರಾಜ್ಯದಲ್ಲಿ ವಿಧಿಸಿರುವ ನಿರ್ಬಂಧ ಅಸಾಂವಿಧಾನಿಕ ಎಂದು ಕಾಶ್ಮೀರ್ ಟೈಮ್ಸ್‌ನ ಸಂಪಾದಕಿ ಅನುರಾಧ ಭಾಸಿನ್ ಪರ ನ್ಯಾಯವಾದಿ ವೃಂದಾ ಗ್ರೋವರ್ ಹೇಳಿದರು.

   ಮಂಗಳವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಜಮ್ಮು ಮತ್ತು ಕಾಶ್ಮೀರದ ಆಡಳಿತ ರಾಜ್ಯದಲ್ಲಿ ವಿಧಿಸಿದ್ದ ನಿಬರ್ಂಧವನ್ನು ಸಮರ್ಥಿಸಿಕೊಂಡಿತ್ತು. ಆಂತರಿಕ ಶತ್ರುಗಳ ಜೊತೆ ಗಡಿಯಾಚೆಗಿಂದ ಎದುರಾಗುವ ಸವಾಲನ್ನು ಎದುರಿಸಲು ಇಂತಹ ನಿರ್ಬಂಧದ ಅಗತ್ಯವಿದೆ. ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಪಾಕಿಸ್ತಾನದ ಸೇನೆಯಲ್ಲದೆ ತಾಲಿಬಾನ್ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳು ಕಾಶ್ಮೀರದ ಜನತೆಯನ್ನು ಪ್ರಚೋದಿಸುವಂತಹ ಹೇಳಿಕೆ ಪ್ರಸಾರ ಮಾಡುತ್ತಿರುವ ಕಾರಣ ನಿರ್ಬಂಧ ವಿಧಿಸಬೇಕಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News