ಪ್ರಜಾತಂತ್ರದ ಮೇಲೆ ಕಣ್ಗಾವಲು

Update: 2019-11-28 07:01 GMT
PTI

ಮಾಹಿತಿ ಹಕ್ಕು ಕಾಯ್ದೆಯನ್ನೂ ಒಳಗೊಂಡಂತೆ ಪ್ರತಿಯೊಂದು ಕಾಯ್ದೆಯಿಂದಲೂ ವಿನಾಯಿತಿ ಪಡೆದುಕೊಂಡಿರುವ ಮತ್ತು ಯಾವುದೇ ಮೇಲ್ವಿಚಾರಣೆಯಡಿ ಇರದ ಈ ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ದೇಶದ ಪ್ರಜಾತಂತ್ರಕ್ಕೆ ಹೊರೆಯಾಗಿಬಿಟ್ಟಿವೆ. ಅವರ ಪ್ರಧಾನ ಉದ್ದೇಶ ಈ ದೇಶದ ದುರ್ಬರನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ಅಧಿಕಾರಸ್ಥರನ್ನು ರಕ್ಷಿಸುವುದೇ ಆಗಿದೆ. ಹೀಗಾಗಿ ಭಾರತದಲ್ಲಿ ಬಹಳ ತುರ್ತಾಗಿ ಬೇಹುಗಾರಿಕಾ ಸುಧಾರಣೆಗಳು ಜಾರಿಯಾಗಬೇಕಿದೆ.

ನಮ್ಮ ಪ್ರಜಾತಂತ್ರದ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ. ಸಂವಿಧಾನದ ಚೌಕಟ್ಟಿನೊಳಗೆ ವ್ಯಕ್ತಿಗಳು ಚಲಾಯಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ರಾಷ್ಟ್ರೀಯ ಭದ್ರತೆಗೆ ಒದಗಿರುವ ಅಪಾಯವೆಂದು ಪರಿಗಣಿಸಲಾಗದು. ಇತ್ತೀಚಿನ ವರದಿಗಳ ಪ್ರಕಾರ ವಾಟ್ಸ್‌ಆ್ಯಪ್ ಒದಗಿಸುವ ದತ್ತಾಂಶಗಳನ್ನು ಆಧರಿಸಿ ಕೆಲಸ ಮಾಡುವ ‘ಪೆಗಾಸಸ್’ ಎಂಬ ಕಣ್ಗಾವಲು ಸಾಫ್ಟ್‌ವೇರನ್ನು ಬಳಸಿ ಹಲವಾರು ಭಾರತೀಯರ ಚಲನವಲನಗಳ ಮೇಲೆ ಕಾನೂನುಬಾಹಿರವಾಗಿ ನಿಗಾ ಇರಿಸಲಾಗಿತ್ತೆಂಬುದು ತಿಳಿದುಬಂದಿದೆ. ಈ ಪೆಗಾಸಸ್ ಸಾಫ್ಟ್‌ವೇರನ್ನು ಒಂದು ಮೊಬೈಲ್ ಫೋನಿನಲ್ಲಿ ಸೇರಿಸಿಬಿಟ್ಟರೆ ಆ ಫೋನಿನ ವೂಲಕ ನಡೆಯುವ ಎಲ್ಲಾ ಮಾತುಕತೆಗಳು, ಸಂದೇಶಗಳು, ಪಾಸ್‌ವರ್ಡ್‌ಗಳು ಮತ್ತು ಸಂಪರ್ಕದಲ್ಲಿರುವವರ ಪಟ್ಟಿ ಎಲ್ಲವನ್ನೂ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ. ಅದರ ಮೂಲಕ ಮೊಬೈಲಿನಲ್ಲಿರುವ ಕ್ಯಾಮರಾ ಮತ್ತು ಮೈಕ್ರೋಫೋನ್‌ಗಳನ್ನು ಚಾಲ್ತಿ ಮಾಡಿ ಫೋನಿನ ಸುತ್ತಮುತ್ತಲ ನಡೆಯುವ ಚಟುವಟಿಕೆಗಳನ್ನೂ ಗಮನಿಸಬಹುದು.

ಪೆಗಾಸಸ್ ಬೇಹುಗಾರಿಕಾ ಸಾಫ್ಟ್‌ವೇರಿನ ಒಡೆಯ ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಟೆಕ್ನಾಲಜೀಸ್ ಎಂಬ ಸಂಸ್ಥೆ. ಇದರ ಸೇವೆಯನ್ನು ಸೌದಿ ಅರೇಬಿಯ ಸರಕಾರವು ತನ್ನ ಜನರ ಚಲನವಲನಗಳ ಮೇಲೆ ನಿಗಾ ಇರಿಸಲು ಮತ್ತು ಬೆದರಿಸಲು ಬಳಸಿಕೊಳ್ಳುತ್ತಿದೆ. ಇದನ್ನು ಬಳಸಿಕೊಂಡೇ ಸೌದಿ ಸರಕಾರವು 2018ರಲ್ಲಿ ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ರಾಜತಾಂತ್ರಿಕ ನಿವಾಸದಲ್ಲಿ ಸೌದಿ ಸರಕಾರವನ್ನು ವಿರೋಧಿಸುತ್ತಿದ್ದ ‘ವಾಶಿಂಗ್ಟನ್ ಪೋಸ್ಟ್’ನ ಅಂಕಣಕಾರ ಜಮಾಲ್ ಖಶೋಗಿಯನ್ನೂ ಸಹ ಹತ್ಯೆ ಮಾಡಿತ್ತು. ಈ ಬಗ್ಗೆ ಭಾರತ ಸರಕಾರವು ಸಂಸತ್ತಿನಲ್ಲಿ ನೀಡಿದ ಉತ್ತರವು ಉಡಾಫೆಯಿಂದ ಕೂಡಿತ್ತು ಮತ್ತು ಅದು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲೇ ತನ್ನೆಲ್ಲ ಕೃತ್ಯಗಳನ್ನು ಸಮರ್ಥನೆ ಮಾಡಿಕೊಂಡಿತ್ತು. ಹಾಲಿ ಇರುವ ಕಾನೂನುಗಳ ಪ್ರಕಾರ ಸಮಾಜದ ಸ್ವಾಸ್ಥ್ಯ ಮತ್ತು ರಾಷ್ಟ್ರ್ಟ್ರೀಯ ಭದ್ರತೆಗೆ ಆಪತ್ತು ಎಂದು ತೋರಿದ ಅತ್ಯಂತ ತುರ್ತು ಪ್ರಕರಣಗಳಲ್ಲಿ ಮಾತ್ರ ಕೆಲವು ನಿರ್ದಿಷ್ಟ ಸಂಪರ್ಕ- ಸಂವಹನಗಳನ್ನು ಕದ್ದು ಕೇಳುವ ಅವಕಾಶವನ್ನು ಒದಗಿಸಲಾಗಿದೆ. ಆದರೆ 2018ರ ಕೆ.ಎಸ್. ಪುಟ್ಟಸ್ವಾಮಿ ಮತ್ತು ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಆದೇಶದ ಪ್ರಕಾರ ಎಲ್ಲದಕ್ಕೂ ರಾಷ್ಟ್ರೀಯ ಭದ್ರತೆಯ ನೆಪವನ್ನು ಒದಗಿಸುವಂತಿಲ್ಲ.

ಸಾಫ್ಟ್‌ವೇರನ್ನು ಬಳಸಿ ಅತ್ಯಂತ ಉಲ್ಲಂಘನೀಯ ಬೇಹುಗಾರಿಕೆಗೆ ಒಳಪಟ್ಟ 121 ಜನರಲ್ಲಿ ಬಹುಪಾಲು ಜನರು ಸಾಮಾಜಿಕ ಕಾರ್ಯಕರ್ತರು, ವಿದ್ವಾಂಸರು ಮತ್ತು ಪತ್ರಕರ್ತರೇ ಆಗಿದ್ದಾರೆ. ಈ ವ್ಯಕ್ತಿಗಳ ತಿಳುವಳಿಕೆ ಮತ್ತು ಭಿನ್ನಮತಗಳನ್ನು ರಾಷ್ಟ್ರೀಯ ಭದ್ರತೆಯ ವಿಷಯವನ್ನಾಗಿ ಮಾಡಲಾಗಿದೆ. ಆದರೆ ಸರಕಾರದ ಉತ್ತರದಾಯಿತ್ವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಈ ವ್ಯಕ್ತಿಗಳು ಎತ್ತುತ್ತಿರುವ ಪ್ರಶ್ನೆಗಳು ಮಾತ್ರ ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಭೀತಿ ಹುಟ್ಟಿಸುತ್ತಿರುವುದಂತೂ ನಿಜ. ಹೀಗಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಇಂತಹ ವ್ಯಕ್ತಿಗಳನ್ನು ಬೇಹುಗಾರಿಕೆಯಡಿಯಲ್ಲಿ ತರಲು ಸರಕಾರವು ಬಳಸಿರುವ ಈ ಖಂಡನೀಯ ಕ್ರಮಗಳನ್ನು ನಾವೆಲ್ಲರೂ ಪ್ರಶ್ನಿಸಲೇ ಬೇಕಿದೆ.

ಮುಂಬೈನಲ್ಲಿ ನಡೆದ 26/11ರ ದಾಳಿಯ ಬಗ್ಗೆ ಪೂರ್ವಭಾವಿ ಬೇಹುಮಾಹಿತಿಯನ್ನು ಸಂಗ್ರಹಿಸಲು ವಿಫಲವಾದ ನಂತರದಲ್ಲಿ ಭಾರತವು ವಿಸ್ತೃತವಾದ ಮಾಹಿತಿ-ದತ್ತಾಂಶಗಳ ಆಗರವನ್ನು ಸೃಷ್ಟಿಸಿಕೊಳ್ಳುತ್ತಿದೆ. ಅದೇರೀತಿ ಬೇಹುಮಾಹಿತಿಗಳ ದತ್ತಾಂಶಗಳನ್ನು ಮತ್ತು ವಿಶಾಲ ಜನಸಂಖ್ಯೆಯ ಮೇಲೆ ಚಲನವಲನಗಳ ಮೇಲೆ ನಿಗಾ ಇರಿಸುವ ಕೇಂದ್ರಗಳನ್ನು ನಿರ್ಮಿಸಲು ಸರಕಾರವು ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸುತ್ತಿದೆ. ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ (ನ್ಯಾಟ್‌ಗ್ರಿಡ್), ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್ (ಸಿಎಂಎಸ್) ಮತ್ತು ನ್ಯಾಷನಲ್ ಆಟೋಮೇಟೆಡ್ ಫೇಷಿಯಲ್ ರೆಕಾಗ್‌ಷನ್ ಸಿಸ್ಟಮ್ ಆಫ್ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಮ್ಸ್ (ಸಿಸಿಟಿಎನ್‌ಎಸ್) ನಂತಹ ಯೋಜನೆಗಳ ಮೂಲಕ ದುರ್ಬಳಕೆಯನ್ನು ತಡೆಗಟ್ಟುವ ಅಥವಾ ಇಂತಹ ಬೇಹುಗಾರಿಕೆಯನ್ನು ಪ್ರಶ್ನಿಸುವಂತಹ ಯಾವುದೇ ಅವಕಾಶಗಳೇ ಇಲ್ಲದ ಪೊಲೀಸ್ ಪ್ರಭುತ್ವವನ್ನು ನಿರ್ಮಿಸಲಾಗುತ್ತಿದೆ. ಹಂತಹಂತವಾಗಿ ಜಾರಿಯಾಗುತ್ತಿರುವ ಈ ವ್ಯವಸ್ಥೆಯು ಸರಕಾರಕ್ಕೆ ಕ್ರಮೇಣವಾಗಿ ಯಾರಮೇಲಾದರೂ ಯಾವಾಗ ಬೇಕಾದರೂ ಬೇಹುಗಾರಿಕೆ ನಡೆಸಬಹುದಾದ ಅಧಿಕಾರವನ್ನು ನೀಡುತ್ತಿದೆ. ಒಂದೆಡೆ ಜನರ ಮಾಹಿತಿಗಳ ಬೃಹತ್ ದತ್ತಾಂಶಗಳು ಸಿದ್ಧಗೊಳ್ಳುತ್ತಿರುವ ವೇಳೆಯಲ್ಲೇ ಈ ಬಗೆಯ ಬೇಹುಗಾರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಏನಿಲ್ಲವೆಂದರೂ ಒಂದು ದಶಕದಷ್ಟು ಹಿಂದೆ ಉಳಿದಿದ್ದೇವೆ. ಕಾನೂನಿನ ಸಮ್ಮತಿಯಿಲ್ಲದೆ ಕೇವಲ ಒಂದು ಆಡಳಿತಾತ್ಮಕ ಆದೇಶದ ಮೂಲಕ ಜನರ ಮಾಹಿತಿಗಳನ್ನು ಸಂಗ್ರಹಿಸುವ ಪದ್ಧತಿಯೂ ಅತ್ಯಂತ ಕಳವಳಕಾರಿಯಾದ ಬೆಳವಣಿಗೆಯೇ ಆಗಿದೆ. ಉದಾಹರಣೆಗೆ ಯಾವುದೇ ಕಾನೂನಿನ ಚೌಕಟ್ಟು ಅಥವಾ ದತ್ತಾಂಶ ರಕ್ಷಣಾ ಚೌಕಟ್ಟುಗಳು ಜಾರಿಯಾಗದೆಯೇ ಆಡಳಿತ ವರ್ಗವು ಆಧಾರ್ ಯೋಜನೆಯನ್ನು ಜಾರಿ ಮಾಡುತ್ತಿತ್ತು. ಈಗ ಆ ಯೋಜನೆಯು ಭದ್ರತೆಯ ವಿಷಯಗಳಿಗೆ ಸಂಬಂಧಪಟ್ಟಂತಹ ನಿಚ್ಚಳವಾದ ಹಲವಾರು ವಿಷಯಗಳಲ್ಲಿ ಸಿಕ್ಕುಗಳಿಗೆ ಸಿಲುಕಿಕೊಂಡಿದೆ ಮತ್ತು ಈ ವೈಪರೀತ್ಯಗಳಿಗೆ ಬಲಿಯಾದವರಿಗೆ ನೀಡಬಹುದಾದ ಯಾವ ಪರಿಹಾರವೂ ಅದರಲ್ಲಿಲ್ಲ.

ಪ್ರಭುತ್ವವು ನಾಗರಿಕರ ಎಲ್ಲಾ ಮೂಲಭೂತ ಹಕ್ಕುಗಳನ್ನೂ ರಕ್ಷಿಸಬೇಕು. ಅವುಗಳಲ್ಲಿ ಖಾಸಗಿತನದ ಹಕ್ಕೂ ಒಂದು. ಎನ್‌ಎಸ್‌ಒ ಗ್ರೂಪ್ ಟೆಕ್ನಾಲಜೀಸ್‌ನಂತಹ ಸಂಸ್ಥೆಗಳು ನಾಗರಿಕರ ಹಕ್ಕುಗಳ ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಒಂದು ದೊಡ್ಡ ಉಲ್ಲಂಘನೆಯೇ ಆಗಿದೆ. ಭದ್ರತಾ ಸಂಸ್ಥೆಗಳು ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಮಾತು ಇಷ್ಟೊಂದು ಬೇಜವಾಬ್ದಾರಿಯುತವಾಗಿ ವ್ಯಕ್ತಿಗಳ ಖಾಸಗಿತನದ ಹಕ್ಕುಗಳನ್ನು ಕಿತ್ತುಕೊಳ್ಳಲಾಗದು ಮತ್ತು ಅತ್ಯಂತ ವಿಶೇಷ ಸಂದರ್ಭವಿಲ್ಲದೆ ಇಂತಹ ಉಲ್ಲಂಘನೆಯನ್ನು ಮಾಡಲಾಗದು. ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕಾನೂನುಬಾಹಿರ ಬೇಹುಗಾರಿಕೆಯ ಮೂಲಕ ಪಡೆದುಕೊಂಡ ಮಾಹಿತಿಯನ್ನು ಸಾಕ್ಷಿಯಾಗಿ ಹೇಗೆ ಪರಿಗಣಿಸುತ್ತೀರೆಂದು ಸಿಬಿಐ ಅನ್ನು ಪ್ರಶ್ನಿಸುವ ಮೂಲಕ ಮುಂಬೈ ಹೈಕೋರ್ಟು ನಾವು ಸಾಗಬೇಕಾದ ದಾರಿಯನ್ನು ತೋರಿಸಿಕೊಟ್ಟಿದೆ. ಕೋರ್ಟು ಅದನ್ನು ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ನಿರಾಕರಿಸಿದ್ದು ಮಾತ್ರವಲ್ಲದೆ ಕಾನೂನುಬಾಹಿರವಾಗಿ ಪಡೆದುಕೊಂಡಿದ್ದ ಎಲ್ಲಾ ಮಾಹಿತಿಯನ್ನು ಅಳಿಸಿಹಾಕಬೇಕೆಂದೂ ಸಹ ಆದೇಶಿಸಿತು. ಈ ಭ್ರಷ್ಟಾಚಾರದ ಪ್ರಕರಣವನ್ನು ಬೇಹುಗಾರಿಕೆಯನ್ನು ಬಳಸಲು ಸೂಕ್ತವಾದ ಸಾರ್ವಜನಿಕ ಸುರಕ್ಷೆಗೆ ಆಪತ್ತು ಒದಗಿದ್ದ ತುರ್ತುಸ್ಥಿತಿಯೆಂದು ಕೋರ್ಟು ಪರಿಗಣಿಸಲಿಲ್ಲ. ರಾಜಕೀಯ ಲಾಭಗಳಿಗಾಗಿಯೂ ಬೇಹುಗಾರಿಕೆಯನ್ನು ಮಾಡಲಾಗುತ್ತದೆ. ಬೇಹುಗಾರಿಕೆಯಲ್ಲಿ ತೊಡಗಿರುವ ಇಟಾಲಿಯನ್ ಸಂಸ್ಥೆಯಾದ ‘ಹ್ಯಾಕಿಂಗ್ ಟೀಮ್’ ಸೋರಿಕೆ ಮಾಡಿದ ಇ ಮೇಲ್ ಸರಣಿಯು 2015ರಲ್ಲಿ ಆಂಧ್ರ ಪೊಲೀಸರು ಫೋನ್ ಸಂಭಾಷಣೆಗಳನ್ನು ಕದ್ದಾಲಿಸುವ ಉಪಕರಣಗಳನ್ನು ಪಡೆದುಕೊಳ್ಳಲು ಆಸಕ್ತರಾಗಿದ್ದರೆಂಬುದನ್ನು ಬಯಲು ಮಾಡಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ತನ್ನ ರಾಜಕೀಯ ಎದುರಾಳಿಯಾದ ಅಂದಿನ ತೆಲಂಗಾಣದ ಮುಖ್ಯಮಂತ್ರಿಯು ತನ್ನ ಫೋನನ್ನು ಕದ್ದಾಲಿಸುತ್ತಿದ್ದರೆಂದು ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್‌ಗೆ ದೂರು ನೀಡಿದ್ದ ಸನ್ನಿವೇಶದಲ್ಲಿ ಈ ಪ್ರಸ್ತಾಪವು ಹುಟ್ಟಿಕೊಂಡಿತ್ತು. ಮತ್ತೊಂದು ಪ್ರಕರಣದಲ್ಲಿ ಛತ್ತೀಸ್‌ಗಡದ ಪೊಲೀಸ್ ಅಧಿಕಾರಿಗಳು ಎನ್‌ಎಸ್‌ಒ ಗ್ರೂಪ್ ಟೆಕ್ನಾಲಜೀಸ್ ಪ್ರತಿನಿಧಿಗಳ ಜೊತೆ ಸಮಾಲೋಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಸರಕಾರವು ಈ ಉಲ್ಲಂಘನೆಯ ಬಗ್ಗೆ ವಾಟ್ಸ್‌ಆ್ಯಪ್ ಸಂಸ್ಥೆಯಿಂದ ವರದಿಗಳನ್ನು ಕೇಳಿದ್ದರೂ ತನ್ನದೇ ಸಂಸ್ಥೆಗಳು ಏನು ಮಾಡುತ್ತಿವೆಯೆಂಬ ಬಗ್ಗೆ ಮಾತ್ರ ಈವರೆಗೆ ವಿಚಾರಿಸಿಲ್ಲ.

ಮಾಹಿತಿ ಹಕ್ಕು ಕಾಯ್ದೆಯನ್ನೂ ಒಳಗೊಂಡಂತೆ ಪ್ರತಿಯೊಂದು ಕಾಯ್ದೆಯಿಂದಲೂ ವಿನಾಯಿತಿ ಪಡೆದುಕೊಂಡಿರುವ ಮತ್ತು ಯಾವುದೇ ಮೇಲ್ವಿಚಾರಣೆಯಡಿ ಇರದ ಈ ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ದೇಶದ ಪ್ರಜಾತಂತ್ರಕ್ಕೆ ಹೊರೆಯಾಗಿಬಿಟ್ಟಿವೆ. ಅವರ ಪ್ರಧಾನ ಉದ್ದೇಶ ಈ ದೇಶದ ದುರ್ಬರನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ಅಧಿಕಾರಸ್ಥರನ್ನು ರಕ್ಷಿಸುವುದೇ ಆಗಿದೆ. ಹೀಗಾಗಿ ಭಾರತದಲ್ಲಿ ಬಹಳ ತುರ್ತಾಗಿ ಬೇಹುಗಾರಿಕಾ ಸುಧಾರಣೆಗಳು ಜಾರಿಯಾಗಬೇಕಿದೆ. ಹೀಗಾಗಿ ಬರಲಿರುವ ಅಧಿವೇಶನದಲ್ಲಿ 2019ರ ಖಾಸಗಿ ದತ್ತಾಂಶ ಸುರಕ್ಷತಾ ಕಾಯ್ದೆಯ ಬಗ್ಗೆ ನಡೆಯಲಿರುವ ಚರ್ಚೆಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ ಮತ್ತು ವರದಿ ಮಾಡಬೇಕಿದೆ. ಪ್ರಜಾಪ್ರತಿನಿಧಿಗಳು ಪಾರದರ್ಶಕತೆಯನ್ನು ಆಗ್ರಹಿಸಬೇಕು, ಜಾರಿಯಲ್ಲಿರುವ ಬೇಹುಗಾರಿಕಾ ವ್ಯವಸ್ಥೆಯನ್ನು ಪುನರಾವಲೋಕಿಸಬೇಕು ಮತ್ತು ಸಂವಿಧಾನ ಬಾಹಿರವಾಗಿ ಬೇಹುಗಾರಿಕೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಾಹಿತಿ ವತ್ತು ತಂತ್ರಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಸಂಸದೀಯ ಸಮಿತಿಯು ಪೆಗಾಸಸ್ ಪ್ರಕರಣದ ಬಗ್ಗೆ ತ್ವರಿತವಾಗಿ ತನಿಖೆಯನ್ನು ಪೂರೈಸಬೇಕು ವತ್ತು ಒಂದು ಸಮಗ್ರ ಹಾಗೂ ಮುಂದಾಲೋಚನೆಯುಳ್ಳ ವರದಿಯನ್ನು ನೀಡಬೇಕು. ಇಂತಹ ಸನ್ನಿವೇಶಗಳೇ ನಮ್ಮ ಪ್ರಜಾತಾಂತ್ರಿಕ ಸತ್ವವನ್ನು ಪರೀಕ್ಷಿಸುತ್ತವೆ. ಆದ್ದರಿಂದ ಭಾರತದ ಪ್ರಜಾತಾಂತ್ರಿಕ ಸಂಸ್ಥೆಗಳು ಮೂಲಭೂತ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು.

ಕೃಪೆ: Economic and Political Weekly

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News