ಮಧುಮೇಹಿಗಳಲ್ಲಿ ದೃಷ್ಟಿ ಕಳೆದುಕೊಳ್ಳುವ ಅಪಾಯ: ಇದರಿಂದ ಪಾರಾಗುವುದು ಹೇಗೆ ?

Update: 2019-12-01 12:45 GMT

ಮಧುಮೇಹಿಗಳು ಇತರರಿಗೆ ಹೋಲಿಸಿದರೆ ಅಂಧತ್ವಕ್ಕೆ ಗುರಿಯಾಗುವ ಸಾಧ್ಯತೆ 25 ಪಟ್ಟು ಹೆಚ್ಚಿರುತ್ತದೆ ಎನ್ನುತ್ತಾರೆ ತಜ್ಞರು. ವಿವಿಧ ಕಣ್ಣಿನ ಕಾಯಿಲೆಗಳು ಮಧುಮೇಹದೊಂದಿಗೆ ಗುರುತಿಸಿಕೊಂಡಿವೆ. ವಯಸ್ಕರಲ್ಲಿ ಅಂಧತ್ವಕ್ಕೆ ಪ್ರಮುಖ ಕಾರಣಗಳಲ್ಲಿ ಮಧುಮೇಹವೂ ಒಂದಾಗಿದೆ. ಮಧುಮೇಹಿಗಳ ರಕ್ತದಲ್ಲಿಯ ಹೆಚ್ಚಿನ ಸಕ್ಕರೆ ಮಟ್ಟವು ಕಣ್ಣಿನ ಅಕ್ಷಿಪಟಲಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಡಯಾಬಿಟಿಕ್ ರೆಟಿನೋಪತಿ,ಮ್ಯಾಕ್ಯುಲರ್ ಎಡಿಮಾ, ಕ್ಯಾಟರಾಕ್ಟ್ ಮತ್ತು ಗ್ಲುಕೋಮಾಕ್ಕೆ ಕಾರಣವಾಗುತ್ತದೆ.

ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆಗಳು ಕಣ್ಣುಗಳು ಸೇರಿದಂತೆ ಶರೀರದ ವಿವಿಧ ಭಾಗಗಳಿಗೆ ಹಾನಿಯನ್ನುಂಟು ಮಾಡುತ್ತವೆ. ರಕ್ತದಲ್ಲಿಯ ಅಧಿಕ ಸಕ್ಕರೆ ಮಟ್ಟವು ನಾವು ಹೊರಜಗತ್ತನ್ನು ನೋಡುವಂತೆ ಮಾಡುವ ಅಕ್ಷಿಪಟಲಕ್ಕೆ ಹಾನಿಯನ್ನುಂಟು ಮಾಡುತ್ತದೆ. ಕಣ್ಣಿನಲ್ಲಿ ಹೆಚ್ಚಿನ ಒತ್ತಡವು ಗ್ಲಾಕೋಮಾಕ್ಕೆ ಕಾರಣವಾಗುತ್ತದೆ ಮತ್ತು ಕೆಲವೊಮ್ಮೆ ಕಣ್ಣಿನ ಒಂದು ಭಾಗವು ಅಕ್ಷಿಪಟಲದ ಮೇಲೆ ಬೆಳಕನ್ನು ಕೇಂದ್ರೀಕರಿಸಲು ನೆರವಾಗುವ ಮಸೂರದ ಮೇಲೆ ಮೋಡ ಮುಸುಕಿದಂತೆ ಮಾಡುತ್ತದೆ ಮತ್ತು ಇದು ಕ್ಯಾಟರಾಕ್ಟ್ ಅಥವಾ ಮೋತಿಬಿಂದುವನ್ನು ಉಂಟು ಮಾಡುತ್ತದೆ. ಮಧುಮೇಹ ಇಂತಹ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ.

ಹೆಚ್ಚಿನ ಜನರಿಗೆ ಮಧುಮೇಹದ ಈ ಗಂಭೀರ ಪರಿಣಾಮಗಳು ಮತ್ತು ಕಣ್ಣಿನ ಸಮಸ್ಯೆಗಳ ಹೆಚ್ಚಿನ ಅಪಾಯದ ಬಗ್ಗೆ ಅರಿವಿರುವುದಿಲ್ಲ ಎನ್ನುವುದನ್ನು ವೈದ್ಯಕೀಯ ಅಧ್ಯಯನಗಳು ತೋರಿಸಿವೆ. ರಕ್ತದಲ್ಲಿಯ ಸಕ್ಕರೆ ಮಟ್ಟ,ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಮೂಲಕ ಈ ಸಮಸ್ಯೆಗಳನ್ನು ನಿಭಾಯಿಸಬಹುದು ಮತ್ತು ತಡೆಗಟ್ಟಬಹುದು ಎನ್ನುವುದು ಸಮಾಧಾನಕರ ಸಂಗತಿಯಾಗಿದೆ. ಅಗತ್ಯ ಕ್ರಮಗಳನ್ನು ಅನುಸರಿಸುವ ಮತ್ತು ತಿಂಗಳಿಗೊಮ್ಮೆ ಕಣ್ಣಿನ ಸಮಗ್ರ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮಧುಮೇಹದ ಹಾನಿಕಾರಕ ಪರಿಣಾಮಗಳಿಗೆ ಕಡಿವಾಣ ಹಾಕಬಹುದು.

ಡಯಾಬಿಟಿಕ್ ರೆಟಿನೋಪತಿ ಬಗ್ಗೆ ಆರಂಭದಲ್ಲಿಯೇ ಕಾಳಜಿ ವಹಿಸಿದರೆ ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಗುಣಪಡಿಸಬಹುದಾಗಿದೆ. ಹಾನಿಕಾರಕ ವಿಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ದೃಷ್ಟಿಯು ಮಸುಕಾದರೆ ಅದನ್ನು ಔಷಧಿಗಳಿಂದ ಅಥವಾ ಕನ್ನಡಕವನ್ನು ಬದಲಿಸುವ ಮೂಲಕ ನಿವಾರಿಸಿಕೊಳ್ಳಬಹುದು.

ಮಧುಮೇಹದಿಂದ ಬಳುತ್ತಿರುವ ಮಹಿಳೆಯರು ಗರ್ಭಧಾರಣೆಗೆ ಮುನ್ನ ಕಣ್ಣಿನ ಸಮಗ್ರ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ.

 ಟೈಪ್ 1 ಮತ್ತು ಟೈಪ್ 2 ಮಧುಮೇಹಗಳಿಗೆ ಚಿಕಿತ್ಸೆ ಪಡೆಯದಿದ್ದರೆ ಅಥವಾ ನಿಯಂತ್ರಿಸದಿದ್ದರೆ ಮೂತ್ರಪಿಂಡಗಳು, ಕಣ್ಣುಗಳು,ನರಗಳು ಮತ್ತು ಇತರ ಅಂಗಗಳಿಗೆ ಹಾನಿಯುಂಟಾಗುವ ಅಪಾಯವಿದೆ. ದೃಷ್ಟಿಯ ಸಣ್ಣ ಸಮಸ್ಯೆಯಿಂದ ಆರಂಭಗೊಂಡು ಅಂತಿಮವಾಗಿ ರೋಗಿಯು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳಬಹುದು. ಹೀಗಾಗಿ ಮಧುಮೇಹಿಗಳು ದೃಷ್ಟಿ ಮಸುಕಾದರೆ ಅಥವಾ ಇತರ ದೃಷ್ಟಿ ಬದಲಾವಣೆಗಳು ಕಂಡು ಬಂದರೆ ಯಾವುದೇ ಸಂದರ್ಭದಲ್ಲಿಯೂ ಅದನ್ನು ಕಡೆಗಣಿಸಕೂಡದು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಮತ್ತು ಜೀವನಶೈಲಿಯನ್ನು ಬದಲಿಸಿಕೊಳ್ಳದಿದ್ದರೆ ಅಂಧತ್ವವನ್ನು ಅನುಭವಿಸಬೇಕಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News