ಮೆಕ್ಸಿಕೊ ಗಡಿಯಲ್ಲಿ ಶೂಟೌಟ್‌ಗೆ ಕನಿಷ್ಠ 14 ಬಲಿ

Update: 2019-12-03 05:03 GMT

ಮೆಕ್ಸಿಕೊಸಿಟಿ, ಡಿ.1: ಮೆಕ್ಸಿಕೊದಲ್ಲಿ ಅಮೆರಿಕದ ಗಡಿಗೆ ತಾಗಿಕೊಂಡಿರುವ ಪಟ್ಟಣವೊಂದರಲ್ಲಿ ಶಂಕಿತ ಮಾದಕದ್ರವ್ಯ ಕಳ್ಳಸಾಗಣೆದಾರರು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಮದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಅಮೆರಿಕದ ಗಡಿಯಿಂದ ಕೇವಲ 60 ಕಿ.ಮೀ. ದೂರದಲ್ಲಿರುವ ಮೆಕ್ಸಿಕೊದ ಉತ್ತರ ಭಾಗದ ರಾಜ್ಯ ಕೊವಾಹುಲಿಯಾದಲ್ಲಿರುವ ವಿಲ್ಲಾ ಯೂನಿಯನ್ ಪಟ್ಟಣದಲ್ಲಿ ಈ ಶೂಟೌಟ್ ನಡೆದಿದೆ. ಹಲವಾರು ವಾಹನಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾದ ಪ್ರಯಾಣಿಕರು ಸಂಚರಿಸುತ್ತಿರುವುದನ್ನು ಪತ್ತೆಹಚ್ಚಿದ್ದರು. ಅವರನ್ನು ತಡೆಯಲು ಯತ್ನಿಸಿದಾಗ ಭುಗಿಲೆದ್ದ ಗುಂಡಿನ ಕಾಳಗದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆಂದು ಮೆಕ್ಸಿಕೊ ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ನಾಲ್ವರು ಪೊಲೀಸರಾಗಿದ್ದಾರೆ. ಏಳು ಮಂದಿ ಶಂಕಿತ ಕ್ರಿಮಿನಲ್‌ಗಳು ಹಾಗೂ ಇತರ ಮೂರು ಅಪರಿಚಿತ ಶವಗಳು ರಸ್ತೆ ಬದಿಯಲ್ಲಿ ಬಿದ್ದಿರುವುದು ಕಂಡುಬಂದಿದೆಯೆಂದು ವರದಿಗಳು ತಿಳಿಸಿವೆ.

 ಗುಂಡಿನ ಕಾಳಗದಲ್ಲಿ ಆರು ಮಂದಿ ಪೊಲೀಸ್ ಅಧಿಕಾರಿಗಳು ಕೂಡಾ ಗಾಯಗೊಂಡಿದ್ದಾರೆಂದು ಕೊಹುಲಿಯಾದ ಗವರ್ನರ್ ಮಿಗುಯೆಲ್ ಆ್ಯಂಜೆಲ್ ರಿಕ್ಯುಲ್ಮೆ ಅವರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗುಂಡಿನ ಕಾಳಗದ ಬಳಿಕ ಒಂದು ಮಗು ಸೇರಿದಂತೆ ಹಲವಾರು ಮಂದಿ ನಾಪತ್ತೆಯಾಗಿದ್ದಾರೆಂದು ಸರಕಾರದ ಮೂಲಗಳು ಇಳಿಸಿವೆ.

ಪೊಲೀಸರು ಕಾರ್ಯಾಚರಣೆಯಲ್ಲಿ 12 ಟ್ರಕ್‌ಗಳನ್ನು ಹಾಗೂ ಹಲವಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮೆಕ್ಸಿಕೊಂದಲ್ಲಿರುವ ಡ್ರಗ್ಸ್ ದಂಧೆಕೋರರ ಅಡಗುದಾಗಣದ ಮೇಲೆ ಅಮೆರಿಕವು ಗಡಿಯಾಚೆಗಿನ ದಾಳಿ ಕಾರ್ಯಾಚರಣೆ ನಡೆಸುವುದಕ್ಕೆ ಆಸ್ಪದ ನೀಡುವುದಿಲ್ಲವೆಂದು ಮೆಕ್ಸಿಕೊದ ನಾಯಕ ಆ್ಯಂಡ್ರೆಸ್ ಮ್ಯಾನುಯೆಲ್ ಲೊಪೆಝ್ ಒಬ್ರಡೊರ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News