×
Ad

ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.03 ಲಕ್ಷ ಕೋಟಿ ರೂಪಾಯಿ

Update: 2019-12-01 23:08 IST
Photo: PTI

ಹೊಸದಿಲ್ಲಿ, ಡಿ. 1: ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹ ನವೆಂಬರ್‌ನಲ್ಲಿ 1.03 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

  2017ರಲ್ಲಿ ಅನುಷ್ಠಾನಗೊಳಿಸಿದ ಬಳಿಕ 2019ರ ನವೆಂಬರ್‌ನಲ್ಲಿ ಮೂರನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಇದಕ್ಕಿಂತ ಮೊದಲು 2019ರ ಎಪ್ರಿಲ್ ಹಾಗೂ 2019ರ ಮಾರ್ಚ್‌ನಲ್ಲಿ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿತ್ತು.

 2019 ನವೆಂಬರ್‌ನಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) 19,592 ಕೋಟಿ ರೂಪಾಯಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) 27,144 ಕೋಟಿ ರೂಪಾಯಿ ಸಂಗ್ರಹವಾಗಿದೆ.

 2019 ನವೆಂಬರ್‌ನಲ್ಲಿ ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) 49,028 ಕೋಟಿ ರೂಪಾಯಿ (ಆಮದಿನಿಂದ ಸಂಗ್ರಹವಾದ 20,948 ಕೋಟಿ ರೂಪಾಯಿ ಸೇರಿ) ಸಂಗ್ರಹವಾಗಿದೆ. ಸೆಸ್ 7,727 ಕೋಟಿ ರೂಪಾಯಿ ಸಂಗ್ರಹವಾಗಿದೆ.

 ಎರಡು ತಿಂಗಳ ಋಣಾತ್ಮಕ ಬೆಳವಣಿಗೆಯ ಬಳಿಕ ಜಿಎಸ್‌ಟಿಯ ಆದಾಯ ಏರಿಕೆಯಾಗಿರುವುದು ಕಂಡು ಬಂದಿದೆ. 2019 ಅಕ್ಟೋಬರ್‌ನಲ್ಲಿ ಜಿಎಸ್‌ಜಿ ಸಂಗ್ರಹ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 5.3 ಇಳಿಕೆಯಾಗಿದೆ. 2019 ಸೆಪ್ಟಂಬರ್‌ನಲ್ಲಿ 91,916 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇಂದು 2018ರ ಫೆಬ್ರವರಿಯ ನಂತರ ಸಂಗ್ರಹವಾದ ಅತಿ ಕಡಿಮೆ ಜಿಎಸ್‌ಟಿ.

ಈ ಹಿಂದೆ 2019ರ ಎಪ್ರಿಲ್ (1.13 ಲಕ್ಷ ಕೋಟಿ ರೂಪಾಯಿ) ಹಾಗೂ ಮಾರ್ಚ್‌ನಲ್ಲಿ (1.06 ಲಕ್ಷ ಕೋಟಿ ರೂಪಾಯಿ) ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಜುಲೈ 2017ರಲ್ಲಿ ಅನುಷ್ಠಾನಗೊಳಿಸಿದ ಬಳಿಕ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂಪಾಯಿ ದಾಟಿರುವುದು ಇದು 8ನೇ ಬಾರಿ. ಕೊನೆಯ ಬಾರಿ 2017 ಜುಲೈಯಲ್ಲಿ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂಪಾಯಿ ದಾಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News