55 ವರ್ಷದ ಮಹಿಳೆಯ ಅತ್ಯಾಚಾರಗೈದು ಹತ್ಯೆ
ಹೊಸದಿಲ್ಲಿ, ಡಿ. 1: ಹೈದರಾಬಾದ್‌ನಲ್ಲಿ ಪಶು ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಉತ್ತರ ದಿಲ್ಲಿಯ ಗುಲಾಬಿಬಾಗ್‌ನಲ್ಲಿ ಶನಿವಾರ 55 ವರ್ಷದ ಮಹಿಳೆಯ ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿದೆ.
ಮಹಿಳೆ ಅಂಗಡಿಯೊಂದಲ್ಲಿ ಪೂಜೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾ ಅಲ್ಲೇ ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಆಗಮಿಸಿದ 75 ವರ್ಷದ ವೃದ್ಧ ಅಂಗಡಿ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನಗೊಂಡ ಒಳಗೆ ಪ್ರವೇಶಿಸಿದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದುದು ಕಂಡು ಬಂತು. ಅವರು ಆ ಪ್ರದೇಶದ ನಿವಾಸಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ದಿತು. ಆದರೆ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ವೈದ್ಯಕೀಯ ಪರೀಕ್ಷೆ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಸಾಬೀತುಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಅವಿವಾಹಿತೆಯಾಗಿದ್ದು, ಏಕಾಂಗಿಯಾಗಿ ಅಂಗಡಿಯಲ್ಲಿ ವಾಸಿಸುತ್ತಿದ್ದರು. ಸಮೀಪದ ಸಾರ್ವಜನಿಕ ಶೌಚಾಲಯವನ್ನು ಬಳಸುತ್ತಿದ್ದರು. ವೃದ್ಧ ಹೊರತುಪಡಿಸಿ ಬೇರೆ ಯಾರೂ ಆ ವೃದ್ಧೆಯನ್ನು ಗಮನಿಸುತ್ತಿರಲಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಹಾಗೂ ನೆರೆಯವರಿಂದ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಮಹಿಳೆಯ ಕುತ್ತಿಗೆಗೆ ದುಪ್ಪಟ್ಟ ಬಿಗಿದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಹತ್ಯೆ ನಡೆಸುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆತ ತಿಳಿಸಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಪೊಲೀಸ್ ಉಪ ಆಯುಕ್ತ (ಉತ್ತರ) ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.