ರೈತರಿಗೆ ಬೆಲೆ ತರದ ಈರುಳ್ಳಿ ಬೆಲೆಯೇರಿಕೆ

Update: 2019-12-02 05:42 GMT

ಒಂದು ಕಾಲದಲ್ಲಿ ಕೃಷಿಯೆಂದರೆ ರೈತ ‘ಮಳೆಯ ಜೊತೆಗೆ ನಡೆಸುವ ಜೂಜಾಟ’ ಎಂಬ ಮಾತಿತ್ತು. ಆದರೆ ಇಂದಿನ ದಿನಗಳಲ್ಲಿ ಆ ಮಾತು ಅರ್ಥ ಕಳೆದುಕೊಂಡಿದೆ. ಆತ ಮಳೆಯ ಜೊತೆಗಿನ ಜೂಜಾಟದಲ್ಲಿ ಗೆದ್ದರೂ ನಷ್ಟವನ್ನೇ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಭಾರತದ ಪಾಲಿನ ರೈತರಿಗೆ ಕೃಷಿಯೆಂದರೆ ‘ಮಧ್ಯವರ್ತಿಗಳ ಜೊತೆಗೆ ನಡೆಸುವ ಜೂಜಾಟ’ ಮತ್ತು ಈ ಜೂಜಾಟದಲ್ಲಿ ಶಕುನಿಗಳನ್ನೇ ಮೀರಿಸುವ ಮಧ್ಯವರ್ತಿಗಳಿರುವುದರಿಂದ, ರೈತ ಪ್ರತಿಬಾರಿಯೂ ಸೋಲಬೇಕಾಗುತ್ತದೆ. ಮಳೆಯ ಜೊತೆಗೆ ಜೂಜಾಟವೇ ಆಗಿದ್ದರೆ, ಮಳೆ ಸುರಿದು ಯಥೇಚ್ಛ ಬೆಳೆ ತೆಗೆದ ರೈತರೆಲ್ಲ ಶ್ರೀಮಂತರ ಪಟ್ಟಿಗೆ ಸೇರಬೇಕಾಗಿತ್ತು. ಯಾವಾಗ ಮಳೆ ಬಂದು ಭಾರೀ ಬೆಳೆ ರೈತನ ಕೈ ಸೇರುತ್ತದೆಯೋ ಆಗಲೂ ಆತ ಕಣ್ಣೀರಿಟ್ಟಿದ್ದೇ ಹೆಚ್ಚು. ಹಲವು ತಿಂಗಳು ಕಷ್ಟ ಪಟ್ಟು ಬೆಳೆದ ಟೊಮೆಟೊ, ಮೆಣಸಿನಕಾಯಿ, ಈರುಳ್ಳಿ ಇತ್ಯಾದಿಗಳನ್ನು ಸೂಕ್ತ ಬೆಲೆ ಸಿಗದೇ ಅದನ್ನು ಬೀದಿಗೆ ಎಸೆದು ಕಣ್ಣೀರಿಡುವ ರೈತರ ಫೋಟೋಗಳನ್ನು ನಾವು ಪತ್ರಿಕೆಗಳಲ್ಲಿ ಆಗಾಗ ನೋಡುತ್ತೇವೆ.

ನಗರಗಳಲ್ಲಿ ಟೊಮೆಟೋವನ್ನು ಕೆ.ಜಿ.ಗೆ 20 ರೂಪಾಯಿಗೆ ಕೊಳ್ಳುತ್ತಿದ್ದರೆ, ಅತ್ತ ರೈತನ ಬಳಿಯಿಂದ ಮಧ್ಯವರ್ತಿಗಳು ಕ್ವಿಂಟಲ್‌ಗೆ 20 ರೂಪಾಯಿಗೆ ಕೇಳುತ್ತಾನೆ. ಇಡೀ ವರ್ಷ ಕೃಷಿ ಮಾಡಿ, ಪೋಷಿಸಿ, ಬೆಳೆಸಿದ ಕೃಷಿಯನ್ನು ಚಿಲ್ಲರೆ ಹಣಕ್ಕೆ ಮಧ್ಯವರ್ತಿ ಕೇಳುವಾಗ ರೈತರ ಹೊಟ್ಟೆಗೆ ಬೆಂಕಿ ಬಿದ್ದಂತಾಗುವುದಿಲ್ಲವೆ? ಬೆಳೆದ ವೆಚ್ಚ ಬಿಡಿ, ಕನಿಷ್ಠ ಮಾರುಕಟ್ಟೆಗೆ ಸಾಗಿಸಿದ ವೆಚ್ಚವೂ ರೈತರ ಕೈಗೆ ಸಿಗದ ಪ್ರಕರಣಗಳು ನಮ್ಮ ಮುಂದಿವೆ. ಬೀದಿಯಲ್ಲಿ ಎಸೆದ ಟೊಮೆಟೊಗಳನ್ನು ದನ ತಿನ್ನುವ ಛಾಯಾಚಿತ್ರಗಳು ಈ ದೇಶದ ರೈತನ ದೈನೇಸಿ ಸ್ಥಿತಿಗೆ ಹಿಡಿದ ಕನ್ನಡಿ. ರೈತರ ದುಃಖ ಇಷ್ಟಕ್ಕೇ ಮುಗಿಯುವುದಿಲ್ಲ. ಕೆಲವೇ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಟೊಮೆಟೊ ಬೆಲೆ ಏರಿರುತ್ತದೆ. ರೈತರು ಮಾರಾಟ ಮಾಡುವ ಹೊತ್ತಿಗೆ ಯಾರಿಗೂ ಬೇಡವಾದ ಟೊಮೆಟೋ ನಗರಗಳಲ್ಲಿ ಗ್ರಾಹಕರು ಕೊಳ್ಳುವಾಗ ಮಾತ್ರ ದುಬಾರಿಯಾಗುವುದುು ಹೇಗೆ? ಈ ಒಗಟನ್ನು ಬಿಡಿಸಲು ಯಾವ ಆರ್ಥಿಕ ತಜ್ಞರಿಂದಲೂ ಈವರೆಗೆ ಸಾಧ್ಯವಾಗಿಲ್ಲ.

 ಕೆಲವು ತಿಂಗಳ ಹಿಂದೆ ರೈತನೊಬ್ಬ ತಾನು ಬೆಳೆದ ಈರುಳ್ಳಿಗೆ ಮಧ್ಯವರ್ತಿಗಳಿಂದ ಸಿಕ್ಕಿದ ದರವನ್ನು ಹೇಳುತ್ತಾ ಕಣ್ಣೀರು ಸುರಿಸುತ್ತಿದ್ದ. ಆದರೆ ಇದೀಗ ನೋಡಿದರೆ ದೇಶಾದ್ಯಂತ ಈರುಳ್ಳಿಯ ಬೆಲೆ ಕೆ.ಜಿ.ಗೆ ನೂರು ರೂಪಾಯಿ ದಾಟಿದೆ. ವಿಪರ್ಯಾಸವೆಂದರೆ ಈ ಏರಿಕೆಯಾದ ಈರುಳ್ಳಿಯ ದರವನ್ನು ಮುಂದಿಟ್ಟುಕೊಂಡು ರಾಜಕಾರಣಿಗಳು ಮೂರ್ಖ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಇದೇ ರೀತಿಯಲ್ಲಿ ಬೆಲೆಯೇರಿಕೆಯಾಗಿದ್ದಾಗ ‘‘ಬೆಲೆಯೇರಿಕೆಯಾದರೆ ಅದರಿಂದ ರೈತರ ಬದುಕು ಉತ್ತಮವಾಗುತ್ತದೆ. ಅವರ ಬದುಕನ್ನು ಮೇಲೆತ್ತುತ್ತದೆ’’. ಆದರೆ ಈರುಳ್ಳಿಗೆ ಕೆ.ಜಿ.ಗೆ 100 ರೂ. ದಾಟಿದ ಕಾರಣಕ್ಕಾಗಿ ಸಂತೋಷ ವ್ಯಕ್ತಪಡಿಸಿದ ಒಬ್ಬನೇ ಒಬ್ಬ ರೈತ ನಮ್ಮ ನಡುವೆ ಇಲ್ಲ. ಯಾಕೆಂದರೆ, ಅವನಲ್ಲಿ ಮಾರುವುದಕ್ಕೆ ಈರುಳ್ಳಿಯೇ ಇಲ್ಲ. ಆ ಈರುಳ್ಳಿಯೆಲ್ಲ ಮಧ್ಯವರ್ತಿಗಳ ಪಾಲಾಗಿವೆ. ಕೃಷಿಗಾಗಿ ಒಂದು ಹನಿ ಬೆವರನ್ನೂ ಸುರಿಸದ ಮಧ್ಯವರ್ತಿಗಳು ಈರುಳ್ಳಿ ಬೆಲೆಯೇರಿಕೆಯಿಂದ ಕೋಟಿ ಕೋಟಿ ರೂಪಾಯಿ ಬಾಚುತ್ತಿದ್ದಾರೆ. ಈರುಳ್ಳಿ ಬೆಲೆಯೇರಿಕೆಗೆ ರಾಜಕಾರಣಿಗಳು ಬೇರೆ ಬೇರೆ ಕಾರಣಗಳನ್ನು ನೀಡುತ್ತಿದ್ದಾರೆ. ಮುಖ್ಯವಾಗಿ ಇತ್ತೀಚೆಗೆ ಸುರಿದ ಭಾರೀ ಮಳೆ, ಅತಿವೃಷ್ಟಿಯಿಂದಾಗಿ ಬೆಳೆ ನಾಶವಾಗಿರುವುದೇ ಈರುಳ್ಳಿ ಬೆಲೆಯೇರಿಕೆಗೆ ಕಾರಣ ಎನ್ನುವುದು ಅವರ ಅಭಿಪ್ರಾಯ. ಇದು ಸಂಪೂರ್ಣ ನಿರಾಕರಿಸುವಂತಹದೇನೂ ಅಲ್ಲ. ಈ ಬಾರಿ ಉತ್ತರ ಕರ್ನಾಟಕವೂ ಸೇರಿದಂತೆ ಈರುಳ್ಳಿ ಬೆಳೆಯುವ ಪ್ರಮುಖ ಪ್ರದೇಶಗಳು ಅತಿವೃಷ್ಟಿಗೀಡಾದವು. ಬೆಳೆ ಸಂಪೂರ್ಣ ಹಾಳಾದವು. ಹಾಗೆಂದು ರಾಜಕಾರಣಿಗಳು ಇದನ್ನು ಜೋರು ದನಿಯಲ್ಲಿ ಹೇಳುವುದು, ಈರುಳ್ಳಿ ದರವನ್ನು ಸಮರ್ಥಿಸುವ ಸಂದರ್ಭದಲ್ಲಿ ಮಾತ್ರ. ‘ಈರುಳ್ಳಿ ಬೆಳೆ ಹಾನಿಯಿಂದಾಗಿ ಬೀದಿ ಪಾಲಾದ ರೈತರಿಗೆ ಏನು ಕೊಟ್ಟಿರಿ?’ ಎಂಬ ಪ್ರಶ್ನೆ ಬಂದಾಗ ಕೇಂದ್ರದ ನಾಯಕರು ವೌನ ತಾಳುತ್ತಾರೆ. ನೆರೆಯಿಂದ ಸಂತ್ರಸ್ತರಾಗಿರುವ ರೈತರಿಗೆ ಕರ್ನಾಟಕದಲ್ಲಿ ಇನ್ನೂ ಪರಿಹಾರ ತಲುಪಿಲ್ಲ. ಆದರೆ ಈ ಹಿಂದೆಯೂ ಈರುಳ್ಳಿ ದರ ವಿಪರೀತವಾಗಿ ಏರಿಕೆಯಾಗಿ ಸರಕಾರಗಳನ್ನು ನಡುಗಿಸಿತ್ತು ಎನ್ನುವುದನ್ನು ನಾವು ಗಮನಿಸಬೇಕು.

ವಾಜಪೇಯಿ ನೇತೃತ್ವದ ಸರಕಾರವಿದ್ದಾಗ, ಈರುಳ್ಳಿ ಬೆಲೆಯೇರಿಕೆ ಸರಕಾರದ ಪಾಲಿಗೆ ಬೆದರಿಕೆಯಾಗಿ ಪರಿವರ್ತನೆಗೊಂಡಿತ್ತು. ಈರುಳ್ಳಿಯ ಕಾಳದಾಸ್ತಾನು, ಬೆಲೆಯೇರಿಕೆಗೆ ಮುಖ್ಯ ಕಾರಣ ಎನ್ನುವುದನ್ನು ಅಂದಿನ ಪ್ರಧಾನಿ ವಾಜಪೇಯಿಯವರು ಬಹಿರಂಗವಾಗಿಯೇ ಹೇಳಿದ್ದರು ಮತ್ತು ಕಾಳಸಂತೆಕೋರರ ಮೇಲೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಈ ಬಾರಿ ಬರೇ ದಿಲ್ಲಿಯಲ್ಲಿ ಮಾತ್ರ ಈರುಳ್ಳಿ ಬೆಲೆಯೇರಿಕೆಯಾಗಿರುವುದಲ್ಲ. ಇಡೀ ದೇಶದಲ್ಲೇ ಈರುಳ್ಳಿ ಜನರಿಗೆ ಕಣ್ಣೀರನ್ನು ತರಿಸುತ್ತಿದೆ. ದಕ್ಷಿಣ ಭಾರತಕ್ಕೆ ಈರುಳ್ಳಿ ಈ ಪರಿಯ ಕಣ್ಣೀರು ತರಿಸಿದ್ದು ಇದೇ ಮೊದಲು. ಬೆಂಗಳೂರು, ಮಂಗಳೂರು ನಗರಗಳಲ್ಲಿ ಈ ಮಟ್ಟಿಗೆ ಈರುಳ್ಳಿಯ ದರ ಏರಿರಲಿಲ್ಲ. ಖೇದಕರ ಸಂಗತಿಯೆಂದರೆ, ಸರಕಾರ ಈರುಳ್ಳಿಯ ದರ ಏರಿಕೆಯನ್ನು ಒಂದು ಸಮಸ್ಯೆಯಾಗಿಯೇ ಕಂಡಿಲ್ಲ. ಯಾಕೆಂದರೆ ಸರಕಾರದೊಳಗಿರುವ ಕೆಲವು ಶಕ್ತಿಗಳು ‘ಈರುಳ್ಳಿ, ಬೆಳ್ಳುಳ್ಳಿಯಂತಹ ಬಳಕೆಯನ್ನೇ ನಿರಾಕರಿಸುವ’ ಒಲವನ್ನು ಹೊಂದಿವೆ. ರುಚಿಗೆ ಮಾತ್ರವಲ್ಲ, ದೇಹದ ಆರೋಗ್ಯಕ್ಕೂ ಪೂರಕವಾಗಿರುವ ಔಷಧೀಯ ಗುಣಗಳಿರುವ ಈರುಳ್ಳಿ, ಬೆಳ್ಳುಳ್ಳಿಯನ್ನು ತಮ್ಮ ವೈಯಕ್ತಿಕ ನಂಬಿಕೆಯ ಕಾರಣದಿಂದ, ‘ಅವು ತಾಮಸ ಗುಣವನ್ನು ಉದ್ಧೀಪಿಸುತ್ತವೆೆ, ಅವುಗಳನ್ನು ಬಳಸಬಾರದು’ ಎನ್ನುವ ಮೂಢರು ಸರಕಾರದೊಳಗಿದ್ದಾರೆ. ಆದುದರಿಂದಲೇ ಅವರಿಗೆ ಈರುಳ್ಳಿ ದರ ಏರಿಕೆ ಸಮಸ್ಯೆಯಾಗಿಲ್ಲ. ಈಗಾಗಲೇ ದೇಶದ ಆಹಾರ ಪದ್ಧತಿಯ ಮೇಲೆ ಹಸ್ತಕ್ಷೇಪ ಪ್ರಯತ್ನಗಳು ನಡೆಯುತ್ತಿವೆ. ಈರುಳ್ಳಿ ಬೆಲೆಯೇರಿಕೆಯ ಮೂಲಕ, ನಿಧಾನಕ್ಕೆ ಜನರು ಈರುಳ್ಳಿಯನ್ನೇ ಬಳಸದಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದು ಬಯಸುವವರಿದ್ದಾರೆ. ಏರುತ್ತಿರುವ ಈರುಳ್ಳಿಯ ನಿಯಂತ್ರಣದಲ್ಲಿ ಸರಕಾರ ವಿಫಲವಾಗಿರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು. ಈರುಳ್ಳಿ ರಫ್ತನ್ನು ತಡೆದಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಆದರೆ ಅಕ್ರಮವಾಗಿ ಈರುಳ್ಳಿ ರಫ್ತಾಗುತ್ತಲೇ ಇದೆ ಎಂದು ವ್ಯಾಪಾರಿಗಳು ಅಲವತ್ತುಕೊಳ್ಳುತ್ತಿದ್ದಾರೆ. ದೇಶದ ಆರ್ಥಿಕತೆಯೇ ಕುಸಿದು ಕೂತಿರುವಾಗ ಈರುಳ್ಳಿಯ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರು ಎಂಬ ಸ್ಥಿತಿ ನಮ್ಮ ಅರ್ಥ ಸಚಿವರದ್ದಾಗಿದೆ.

ಕನಿಷ್ಠ ಈ ದರ ಏರಿಕೆಯಿಂದ ರೈತರ ಬದುಕಾದರೂ ಹಸನಾಗಿದ್ದರೆ ಅದನ್ನು ನಾವು ಒಪ್ಪಬಹುದಾಗಿತ್ತು. ದೇಶದ ಬಹುಸಂಖ್ಯಾತ ರೈತರಲ್ಲಿ ದಾಸ್ತಾನು ವ್ಯವಸ್ಥೆಯಿಲ್ಲ. ಶೀತಲೀಕರಣ ಕೊಠಡಿಗಳಿಲ್ಲ. ಆದರೆ ಇವೆಲ್ಲವನ್ನೂ ಕೃಷಿಯಲ್ಲಿ ಯಾವ ರೀತಿಯಲ್ಲೂ ಪಾಲುದಾರರಾಗಿರದ ಮಧ್ಯವರ್ತಿಗಳು ಹೊಂದಿದ್ದಾರೆ. ಆದುದರಿಂದಲೇ, ಬೆಲೆಯೇರಿಕೆಯ ಲಾಭವನ್ನು ಅವರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ರೈತರು ಮತ್ತು ಗ್ರಾಹಕರ ನಡುವಿನ ಮಧ್ಯವರ್ತಿಗಳನ್ನು ಇಲ್ಲವಾಗಿಸುವ ಕುರಿತಂತೆ ಹಲವು ದಶಕಗಳಿಂದ ಸರಕಾರ ಮಾತನಾಡುತ್ತಲೇ ಬಂದಿದೆಯಾದರೂ ಅದರಲ್ಲಿ ಯಶಸ್ವಿಯಾಗಿಲ್ಲ. ಇಂದು ಈರುಳ್ಳಿಗೆ ಒದಗಿದ್ದು ನಾಳೆ ಇನ್ನಿತರ ಕೃಷಿ ಬೆಳೆಗಳಿಗೆ ಸಂಭವಿಸಬಹುದು. ಈ ನಿಟ್ಟಿನಲ್ಲಿ ಸರಕಾರ ರೈತರೊಂದಿಗೆ ನೇರವಾಗಿ ಸಂವಹನ ನಡೆಸಬೇಕಾಗಿದೆ. ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಐಟಿ ಅಧಿಕಾರಿಗಳನ್ನು ಛೂಬಿಡಲು ತೋರಿಸಿದ ಉತ್ಸಾಹವನ್ನು ಕಾಳದಂಧೆಕೋರರ ವಿರುದ್ಧವೂ ಸರಕಾರ ತೋರಿಸಿದರೆ ಬಚ್ಚಿಟ್ಟ ಈರುಳ್ಳಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡು ನಿಧಾನಕ್ಕೆ ಬೆಲೆ ಇಳಿಕೆಯಾಗಬಹುದೇನೋ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News