ಅಯೋಧ್ಯೆ ತೀರ್ಪಿನ ಮರುಪರಿಶೀಲನೆ ಕೋರಿ ಸುಪ್ರೀಂಗೆ ಮೊದಲ ಅರ್ಜಿ ಸಲ್ಲಿಕೆ

Update: 2019-12-02 18:03 GMT

ಹೊಸದಿಲ್ಲಿ,ಡಿ.2: ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಇಡೀ 2.77 ಎಕರೆ ನಿವೇಶನವನ್ನು ರಾಮ ಲಲ್ಲಾಗೆ ನೀಡಿರುವ ನ.9ರ ತೀರ್ಪಿನ ಪುನರ್ ಪರಿಶೀಲನೆಯನ್ನು ಕೋರಿ ಜಮೀಯತ್ ಉಲಮಾ-ಎ-ಹಿಂದ್ (ಜೆಯುಎಚ್) ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಮತ್ತು ಮೂಲ ಕಕ್ಷಿದಾರ ಎಂ.ಸಾದಿಕ್ ಅವರ ಕಾನೂನುಬದ್ಧ ವಾರಸುದಾರ ಮೌಲಾನಾ ಸೈಯದ್ ಅಷದ್ ರಶೀದಿ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.

 ದಾಖಲೆಗಳಲ್ಲಿಯ ತಪ್ಪುಗಳು ತೀರ್ಪಿನಲ್ಲಿ ನುಸುಳಿವೆ,ಹೀಗಾಗಿ ಸಂವಿಧಾನದ ವಿಧಿ 137ರಡಿ ತೀರ್ಪಿನ ಪುನರ್‌ಪರಿಶೀಲನೆ ಅಗತ್ಯವಾಗಿದೆ ಎಂದು ರಶೀದಿ ಅವರು ತನ್ನ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

ಕಕ್ಷಿಗಳ ನಡುವೆ ಸಮತೋಲನದ ಪರಿಹಾರವನ್ನು ರೂಪಿಸುವ ಪ್ರಯತ್ನದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಿಂದು ಕಕ್ಷಿದಾರರ ಅಕ್ರಮಗಳನ್ನು ಕ್ಷಮಿಸಿದೆ ಮತ್ತು ಮುಸ್ಲಿಂ ಕಕ್ಷಿದಾರರಿಗೆ ಐದು ಎಕರೆ ವಿಸ್ತೀರ್ಣದ ನಿವೇಶನವನ್ನು ಕೊಡಮಾಡಿದೆ. ನಿವೇಶನಕ್ಕಾಗಿ ಮುಸ್ಲಿಂ ಕಕ್ಷಿದಾರರು ಕೋರಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಿರುವ ಅವರು,ತಾನು ನ್ಯಾಯಾಲಯದ ಇಡೀ ತೀರ್ಪನ್ನು ಪ್ರಶ್ನಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜೆಯುಎಚ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಅವರು,ಬಹುಸಂಖ್ಯಾತ ಮುಸ್ಲಿಮರು ಪುನರ್‌ಪರಿಶೀಲನೆ ಅರ್ಜಿ ಸಲ್ಲಿಕೆಯನ್ನು ಬಯಸಿದ್ದಾರೆ ಮತ್ತು ಸಮುದಾಯದ ಕೆಲವೇ ಜನರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.

ಮಂದಿರವನ್ನು ನಾಶಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎನ್ನುವುದು ಈ ಪ್ರಕರಣದಲ್ಲಿ ಮುಖ್ಯ ವಾದವಾಗಿತ್ತು. ಮಂದಿರವನ್ನು ನಾಶಗೊಳಿಸಿದ ಬಳಿಕ ಮಸೀದಿಯನ್ನು ನಿರ್ಮಿಸಲಾಗಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಹೀಗಾಗಿ ನಿವೇಶನದ ಮೇಲೆ ಮುಸ್ಲಿಮರ ಹಕ್ಕು ಸಾಬೀತಾಗಿತ್ತು,ಆದರೆ ಅಂತಿಮ ತೀರ್ಪು ವಿರುದ್ಧವಾಗಿದೆ. ತೀರ್ಪು ಅರ್ಥಕ್ಕೆ ನಿಲುಕುತ್ತಿಲ್ಲ,ಹೀಗಾಗಿ ನಾವು ಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.

ತೀರ್ಪಿನ ಮರುಪರಿಶೀಲನೆಯನ್ನು ಕೋರಿ ತಾನು ಡಿ.9ರಂದು ಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News