ನನ್ನ ತಂದೆ ಅಸಾಧಾರಣ ಧೈರ್ಯಶಾಲಿ ಆದರೆ…: ಕೇಂದ್ರವನ್ನು ಟೀಕಿಸಿದ ರಾಹುಲ್ ಬಜಾಜ್ ಕುರಿತು ಪುತ್ರ ರಾಜೀವ್

Update: 2019-12-02 17:24 GMT

 ಹೊಸದಿಲ್ಲಿ,ನ.22: ಮೋದಿ ಸರಕಾರದ ವಿರುದ್ಧ ಖ್ಯಾತ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅಸಮಾಧಾನ ವ್ಯಕ್ತಪಡಿಸಿ, ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರ ಪುತ್ರ ರಾಜೀವ್ ಬಜಾಜ್ ಅವರು, ‘ನನ್ನ ತಂದೆ ಅಸಾಧಾರಣ ಧೈರ್ಯಶಾಲಿ’ ಎಂದು ಬಣ್ಣಿಸಿದ್ದಾರೆ. ‘‘ಆದರೆ ಅವರೊಂದಿಗೆ ಧ್ವನಿಗೂಡಿಸಲು ಉದ್ಯಮರಂಗದ ಯಾರೂ ಮುಂದೆ ಬರುತ್ತಿಲ್ಲ ಹಾಗೂ ಅವರು ತಮಗೆ ಅನುಕೂಲಕರವಾಗುವಂತೆ ಬದಿಯಲ್ಲಿದ್ದುಕೊಂಡು ಹುರಿದುಂಬಿಸುತ್ತಿರುತ್ತಾರೆ’’ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ

ರಾಹುಲ್ ಬಜಾಜ್ ಅವರು ಶನಿವಾರ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ದೇಶದಲ್ಲಿ ಪ್ರಸಕ್ತ ಭೀತಿಯ ವಾತಾವರಣವಿದ್ದು, ಜನರು ಸರಕಾರವನ್ನು ಟೀಕಿಸಲು ಭಯಪಡುತ್ತಿದ್ದಾರೆ ಎಂದಿದ್ದರು. ಸರಕಾರವು ಯಾವುದೇ ಟೀಕೆಯನ್ನು ಒಪ್ಪಿಕೊಳ್ಳುತ್ತದೆಯೆಂಬ ಆತ್ಮವಿಶ್ವಾಸದ ಕೊರತೆ ಭಾರತೀಯ ಉದ್ಯಮಪತಿಗಳನ್ನು ಕಾಡುತ್ತಿದೆ ಎಂದು ಹೇಳಿದ್ದರು.

ಇಕನಾಮಿಕ್ ಟೈಮ್ಸ್ ಪತ್ರಿಕೆಗೆ ಇಂದು ನೀಡಿದ ಸಂದರ್ಶನದಲ್ಲಿ ರಾಜೀವ್ ಬಜಾಜ್ ಅವರು, ತನ್ನ ತಂದೆಯು ಅವರ ಮನಸ್ಸಿನಲ್ಲಿದ್ದುದನ್ನು ಹೇಳುವುದಕ್ಕೆ ಯಾವತ್ತೂ ಹಿಂಜರಿಯುತ್ತಿರಲಿಲ್ಲವೆಂದು ಪ್ರಶಂಸಿಸಿದ್ದಾರೆ. ಆದರೆ ‘‘ ಸೂಕ್ಷ್ಮವಾದ ಮತ್ತು ವಸ್ತುನಿಷ್ಠ’ ವಿಷಯವನ್ನು ಅವರು ಸೂಕ್ತವಾದ ವೇದಿಕೆಯಲ್ಲಿ ಎತ್ತಿದ್ದಾರೆಯೇ ಎಂಬ ಬಗ್ಗೆ ತನಗೆ ಖಾತರಿಯಿಲ್ಲವೆಂದು ರಾಜೀವ್ ಹೇಳಿದ್ದಾರೆ.

‘‘ನನ್ನ ತಂದೆ ಇಂತಹ ಅವಕಾಶ ದೊರೆತಾಗ ಅದನ್ನು ಸಂಭ್ರಮಿಸುತ್ತಾರೆ. ಆದ ಕಾರ್ಪೋರೇಟ್ ವಲಯದ ಸಾಧಕರ ಸಾಧನೆಯನ್ನು ಸಂಭ್ರಮಿಸುವಂತಹ ಸಾರ್ವಜನಿಕ ಸಮಾರಂಭದಲ್ಲಿ ಇಂತಹ ಸಂವೇದನಕಾರಿ ವಿಷಯವನ್ನು ಪ್ರಸ್ತಾವಿಸುವುದು ಔಚಿತ್ಯಪೂರ್ಣವೇ ಎಂಬುದು ನನಗೆ ಖಾತರಿಯಿಲ್ಲ’’ ಎಂದವರು ಹೇಳಿದ್ದಾರೆ.

ತನ್ನ ತಂದೆಯ ದಿಟ್ಟತನವನ್ನು ರಾಜೀವ್ ಬಜಾಜ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ ಆದರೆ, ‘ಧೈರ್ಯವೆಂಬುದು ಕೆಲವೊಮ್ಮೆ ಭಂಡತನವೂ ಆದಾಗ ಬದುಕು ಕಠಿಣವಾಗಬಹುದು’ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ತನಗೆ ಕೇಂದ್ರ ಸರಕಾರದ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಹೆಚ್ಚಿನ ಒಡನಾಟವಿಲ್ಲವೆಂದು ಸ್ಪಷ್ಟಪಡಿಸಿದ ರಾಜೀವ್ ಬಜಾಜ್ ನಗದು ಅಮಾನ್ಯತೆಯ ನ್ನು ವಿರೋಧಿಸಿ 2017ರ ಫೆಬ್ರವರಿಯಲ್ಲಿ ಮಾತನಾಡಿದ್ದಕ್ಕಾಗಿ ತಾನು ತೀವ್ರವಾಗಿ ಟೀಕೆಗೊಳಗಾಗಿದ್ದೆ ಎಂದವರು ಹೇಳಿದ್ದಾರೆ.

ತನ್ನ ಹೇಳಿಕೆಯ ಬಗ್ಗೆ ಉದ್ಯಮರಂಗದ ಹಲವಾರು ಮಂದಿ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದರಾದರೂ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ನೀತಿ ಆಯೋಗದ ಅಧ್ಕಕ್ಷ ಅಮಿತಾಭ್ ಕಾಂತ್ ಅವರು, ಕಳೆದ 8 ವರ್ಷಗಳಿಂದ ಕೇಂದ್ರದ ಒಪ್ಪಿಗೆಗೆ ಕಾಯುತ್ತಿದ್ದ ಬಜಾಜ್ ಆಟೋ ಸಂಸ್ಥೆಯ ವಾಹನ ಕ್ಯೂಟ್‌ಗೆ ತಕ್ಷಣವೇ ಅನುಮೋದನೆ ನೀಡಿದ್ದರು ಎಂದು ರಾಜೀವ್ ಬಜಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News