×
Ad

ಎನ್‌ಕೌಂಟರ್ ವರದಿ ಮಾಧ್ಯಮಗಳಿಗೆ ಸೋರಿಕೆ: ಛತ್ತೀಸ್‌ಗಡ ಸಿಎಂ ವಿರುದ್ಧ ಹಕ್ಕುಚ್ಯುತಿ ಸೂಚನೆ

Update: 2019-12-02 23:28 IST

ರಾಯಪುರ,ಡಿ.2: ದಕ್ಷಿಣ ಬಸ್ತರ್ ಪ್ರದೇಶದಲ್ಲಿ 2012ರಲ್ಲಿ ನಡೆದಿದ್ದ ಎನ್‌ಕೌಂಟರ್ ಕುರಿತು ತನಿಖೆಯನ್ನು ನಡೆಸಿದ್ದ ನ್ಯಾಯಾಂಗ ಆಯೋಗದ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಕ್ಕಾಗಿ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ ಬಾಘೇಲ್ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿಯು ಸೋಮವಾರ ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಿದೆ.

2012,ಜೂನ್ 28-29ರ ರಾತ್ರಿ ಬಿಜಾಪುರ ಜಿಲ್ಲೆಯ ಸಾರ್ಕೆಗುಡಾ ಹಾಗೂ ನೆರೆಯ ಸುಕ್ಮಾ ಜಿಲ್ಲೆಗೆ ಹೊಂದಿಕೊಂಡಿರುವ ಸಿಲ್ಗೆರ್ ಮತ್ತು ಚಿಮ್ಲಿಪೆಂಟಾ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ 17 ಜನರು ಕೊಲ್ಲಲ್ಪಟ್ಟಿದ್ದರು.

ಬಾಘೇಲ್ ನ್ಯಾಯಾಂಗ ತನಿಖೆ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಬೆನ್ನಿಗೇ ಹಿರಿಯ ಬಿಜೆಪಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ರಮಣ ಸಿಂಗ್ ಅವರು,ವರದಿಯಲ್ಲಿನ ಅಂಶಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿಕೆಯಾಗಿವೆ. ಸದನವು ಅಧಿವೇಶದಲ್ಲಿದ್ದಾಗ ಇಂತಹ ಮಹತ್ವದ ವರದಿಯನ್ನು ಹೇಗೆ ಸೋರಿಕೆ ಮಾಡಲಾಗಿದೆ? ವರದಿಯ ಬಗ್ಗೆ ಸದನದ ಸದಸ್ಯರಿಗೆ ಮಾಹಿತಿ ನೀಡಿ ಅದನ್ನು ಸದನದಲ್ಲಿ ಮಂಡಿಸಬೇಕಿತ್ತು. ಆದರೆ ನಾವು ವೃತ್ತಪತ್ರಿಕೆಗಳಿಂದ ಸುದ್ದಿಯನ್ನು ತಿಳಿಯುವಂತಾಗಿದೆ ಎಂದು ಹೇಳಿದರು.

ಆಯೋಗವು ವರದಿಯನ್ನು ಒಂದು ತಿಂಗಳ ಹಿಂದೆಯೇ ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು ಎಂದು ಸಿಂಗ್ ಮತ್ತು ಇತರ ಬಿಜೆಪಿ ಸದಸ್ಯರು ಪ್ರತಿಪಾದಿಸಿದರು.

ಮುಖ್ಯಮಂತ್ರಿಗಳು ಸದನವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ ಸಿಂಗ್,ಇದು ಸದಸ್ಯರ ಹಕ್ಕುಗಳನ್ನು ಉಲ್ಲಂಘಿಸಿದೆ ಮತ್ತು ವಿಧಾನಸಭೆಯ ನಿಂದನೆಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News