ಹಿಟ್ ಆ್ಯಂಡ್ ರನ್: ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ್ಯು

Update: 2019-12-03 03:44 GMT

ವಾಷಿಂಗ್ಟನ್: ಅಮೆರಿಕದ ಟೆನ್ನೆಸೀ ಯಲ್ಲಿ ಕೃತಜ್ಞತೆಯ ರಾತ್ರಿ (ಥ್ಯಾಂಕ್ಸ್ ಗಿವಿಂಗ್ ನೈಟ್) ನಡೆದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಘಟನೆಗೆ ಕಾರಣವಾದ ಪಿಕ್‌ಅಪ್ ಟ್ರಕ್ ಮಾಲಕ ಪೊಲೀಸರಿಗೆ ಆ ಬಳಿಕ ಶರಣಾಗಿದ್ದಾನೆ.

ಜ್ಯೂಡಿ ಸ್ಟ್ಯಾನ್ಲಿ (23) ಮತ್ತು ವೈಭವ್ ಗೋಪಿಸೆಟ್ಟಿ (26) ಮೃತಪಟ್ಟ ಭಾರತೀಯ ವಿದ್ಯಾರ್ಥಿಗಳು. ಇವರು ಅಮೆರಿಕದ ಟೆನ್ನೆಸೀ ಸ್ಟೇಟ್ ಯುನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದು, ಕೃಷಿ ವಿಜ್ಞಾನ ಕಾಲೇಜಿನಲ್ಲಿ ಆಹಾರ ವಿಜ್ಞಾನ ಪದವಿ ಪಡೆಯುತ್ತಿದ್ದರು ಎಂದು ವಿವಿ ಪ್ರಕಟಣೆ ಹೇಳಿದೆ. ನವೆಂಬರ್ 28ರ ರಾತ್ರಿ ದಕ್ಷಿಣ ನ್ಯಾಷವಿಲ್ಲೆ ಎಂಬಲ್ಲಿ ನಡೆದ ಅಪಘಾತದಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

"ಟೆನ್ನೆಸ್ಸೀ ವಿವಿ ಕುಟುಂಬವು ಕೃತಜ್ಞತೆಯ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರು ಭಾರತದ ವಿದ್ಯಾರ್ಥಿಗಳಾಗಿದ್ದರು. ಸ್ಟ್ಯಾನ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರೆ ಗೋಪಿಸೆಟ್ಟಿ ಡಾಕ್ಟರೇಟ್ ಮಾಡುತ್ತಿದ್ದರು" ಎಂದು ವಿವಿಯ ಅಧಿಕೃತ ಪ್ರಕಟಣೆ ಹೇಳಿದೆ.

ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ನಿಸ್ಸಾನ್ ಸೆಂಟ್ರಾ ವಾಹನಕ್ಕೆ ಪಿಕ್‌ಅಪ್ ಟ್ರಕ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪೊಲೀಸರು ಆರೋಪಿಗೆ ಲುಕ್‌ಔಟ್ ನೋಟಿಸ್ ಹೊರಡಿಸಿದ ಬಳಿಕ ಆರೋಪಿ ಶರಣಾಗಿದ್ದಾನೆ. ವಿದ್ಯಾರ್ಥಿಗಳು ಮಹತ್ವಾಕಾಂಕ್ಷಿ, ಅಮಾಯಕ ಹಾಗೂ ಕಠಿಣ ಪರಿಶ್ರಮಿಗಳಾಗಿದ್ದು, ಅದ್ಭುತ ಭವಿಷ್ಯ ಹೊಂದಿದ್ದರು ಎಂದು ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಪ್ರೊ. ಭರತ್ ಪೊಖ್ರಿಯಾಲ್ ಹೇಳಿದ್ದಾರೆ.

ಮೃತ ವಿದ್ಯಾರ್ಥಿಗಳ ಅಂತ್ಯಸಂಸ್ಕಾರಕ್ಕಾಗಿ ಗೋಫಂಡ್‌ಮಿ ಪೇಜ್ ಮೂಲಕ ವಿವಿ ವಿದ್ಯಾರ್ಥಿಗಳು 42 ಸಾವಿರ ಡಾಲರ್ ಸಂಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News