ಫ್ರಾನ್ಸ್ ಸರಕಿಗೆ 100 ಶೇ. ದಂಡನಾ ತೆರಿಗೆ: ಅಮೆರಿಕ

Update: 2019-12-03 17:11 GMT

ವಾಶಿಂಗ್ಟನ್, ಡಿ. 3: ಫ್ರಾನ್ಸ್‌ನ ಡಿಜಿಟಲ್ ಸರ್ವಿಸಸ್ ಟ್ಯಾಕ್ಸ್‌ಗೆ ಪ್ರತಿಯಾಗಿ ಆ ದೇಶದಿಂದ ಆಮದು ಮಾಡಿಕೊಳ್ಳುವ 2.4 ಬಿಲಿಯ ಡಾಲರ್ (ಸುಮಾರು 17,205 ಕೋಟಿ ರೂಪಾಯಿ) ಸರಕುಗಳ ಮೇಲೆ 100 ಶೇಕಡವರೆಗೆ ತೆರಿಗೆ ವಿಧಿಸುವುದಾಗಿ ಅಮೆರಿಕ ಸೋಮವಾರ ಬೆದರಿಕೆ ಹಾಕಿದೆ.

ಫ್ರಾನ್ಸ್‌ನ ವೈನ್, ಮೊಸರು ಮತ್ತು ರೋಕ್‌ಫೋರ್ಟ್ ಚೀಸ್ ಮುಂತಾದ ವಸ್ತುಗಳು ಮಧ್ಯ ಜನವರಿ ವೇಳೆಗೆ ಅಮೆರಿಕದ ದಂಡನಾತ್ಮಕ ತೆರಿಗೆಗೆ ಗುರಿಯಾಗುವ ಸಾಧ್ಯತೆಯಿದೆ. ಫ್ರಾನ್ಸ್‌ನ ಡಿಜಿಟಲ್ ಸರ್ವಿಸಸ್ ತೆರಿಗೆಯು ಗೂಗಲ್, ಆ್ಯಪಲ್, ಫೇಸ್‌ಬುಕ್ ಮತ್ತು ಅಮೆಝಾನ್ ಮುಂತಾದ ಅಮೆರಿಕದ ತಂತ್ರಜ್ಞಾನ ಕಂಪೆನಿಗಳ ಮೇಲೆ ದಂಡನಾತ್ಮಕ ತೆರಿಗೆಯನ್ನು ಹೇರುತ್ತದೆ ಎಂಬ ನಿರ್ಧಾರಕ್ಕೆ ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ಬಂದ ಬಳಿಕ ಫ್ರಾನ್ಸ್‌ನ ಉತ್ಪನ್ನಗಳಿಗೆ ದಂಡನಾತ್ಮಕ ತೆರಿಗೆ ವಿಧಿಸಲು ಅಮೆರಿಕ ಮುಂದಾಗಿದೆ.

ಆಸ್ಟ್ರಿಯ, ಇಟಲಿ ಮತ್ತು ಟರ್ಕಿ ದೇಶಗಳು ವಿಧಿಸುತ್ತಿರುವ ಇಂಥದೇ ತೆರಿಗೆಗಳ ಬಗ್ಗೆಯೂ ತನಿಖೆ ನಡೆಸುವ ಬಗ್ಗೆ ಅಮೆರಿಕ ಪರಿಶೀಲನೆ ನಡೆಸುತ್ತಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಝರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಮೆರಿಕದ ಬೆದರಿಕೆಯ ವಿರುದ್ಧ ಹೋರಾಡಲು ಐರೋಪ್ಯ ಒಕ್ಕೂಟ ಸಿದ್ಧ: ಫ್ರಾನ್ಸ್

ಫ್ರಾನ್ಸ್‌ನ ಉತ್ಪನ್ನಗಳ ಆಮದಿನ ಮೇಲೆ ತೆರಿಗೆ ವಿಧಿಸುವುದಾಗಿ ಅಮೆರಿಕ ಹಾಕಿರುವ ಬೆದರಿಕೆಯ ವಿರುದ್ಧ ಹೋರಾಡಲು ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟ ಸಿದ್ಧವಾಗಿದೆ ಎಂದು ಫ್ರಾನ್ಸ್ ಸರಕಾರದ ಸಚಿವರು ಮಂಗಳವಾರ ಹೇಳಿದ್ದಾರೆ.

ಫ್ರಾನ್ಸ್‌ನ ನೂತನ ಡಿಜಿಟಲ್ ಸರ್ವಿಸಸ್ ತೆರಿಗೆಗೆ ಪ್ರತಿಯಾಗಿ ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳುವ ಶಾಂಪೇನ್, ಕೈಚೀಲಗಳು, ಚೀಸ್ ಮತ್ತು ಇತರ ಉತ್ಪನ್ನಗಳಿಗೆ ದಂಡನಾತ್ಮಕ ತೆರಿಗೆ ವಿಧಿಸುವುದಾಗಿ ಅಮೆರಿಕ ಹಾಕಿರುವ ಬೆದರಿಕೆಗೆ ಫ್ರಾನ್ಸ್ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.

ಅಮೆರಿಕದ ಪ್ರಸ್ತಾವಗಳು ‘ಅಸ್ವೀಕಾರಾರ್ಹ’ ಎಂಬುದಾಗಿ ಫ್ರಾನ್ಸ್‌ನ ಹಣಕಾಸು ಸಚಿವ ಬ್ರೂನೊ ಲೆ ಮೇಯ ಬಣ್ಣಿಸಿದರು.

‘‘ಹೊಸದಾಗಿ ಅಮೆರಿಕ ದಿಗ್ಬಂಧನಗಳನ್ನು ವಿಧಿಸಿದರೆ, ಅದಕ್ಕೆ ಪ್ರತ್ಯುತ್ತರ ನೀಡಲು ಐರೋಪ್ಯ ಒಕ್ಕೂಟ ಸನ್ನದ್ಧವಾಗಿದೆ’’ ರೇಡಿಯೊ ಕ್ಲಾಸಿಕ್‌ನೊಂದಿಗೆ ಮಾತನಾಡಿದ ಅವರು ಹೇಳಿದರು.

ಸುಡ್ ರೇಡಿಯೊದೊಂದಿಗೆ ಮಾತನಾಡಿದ ಫ್ರಾನ್ಸ್‌ನ ಸಹಾಯಕ ಹಣಕಾಸು ಸಚಿವ ಆ್ಯಗ್ನೆಸ್ ಪ್ಯಾನಿಯರ್ ರುನಚೆರ್, ಈ ವಿಷಯದಲ್ಲಿ ಅಮೆರಿಕದ ವಿರುದ್ಧ ಹೋರಾಡಲು ಫ್ರಾನ್ಸ್ ಸಿದ್ಧವಾಗಿದೆ ಎಂದರು. ಫ್ರಾನ್ಸ್ ತನ್ನ ಡಿಜಿಟಲ್ ತೆರಿಗೆ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News