ಅಮೆರಿಕದಾದ್ಯಂತ ಭಾರೀ ಹಿಮ ಬಿರುಗಾಳಿ

Update: 2019-12-03 17:23 GMT

ನ್ಯೂಯಾರ್ಕ್, ಡಿ. 3: ಅಮೆರಿಕದಾದ್ಯಂತ ಹಿಮ ಬಿರುಗಾಳಿ ಬೀಸುತ್ತಿದ್ದು, ಸೋಮವಾರ ದೇಶದ ಈಶಾನ್ಯ ಭಾಗಕ್ಕೆ ಅಪ್ಪಳಿಸಿದೆ.

ನ್ಯೂಯಾರ್ಕ್ ಗವರ್ನರ್ ಆ್ಯಂಡ್ರೂ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ ಹಾಗೂ ನ್ಯಾಶನಲ್ ಗಾರ್ಡ್‌ನ 300 ಸದಸ್ಯರನ್ನು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಿದ್ದಾರೆ.

ಸೋಮವಾರ ಮಧ್ಯಾಹ್ನದ ವೇಳೆಗೆ ಈ ವಲಯದ ವಿಮಾನ ಸಂಚಾರ ವ್ಯತ್ಯಯಗೊಂಡಿತು. ಅಮೆರಿಕದಾದ್ಯಂತ 4,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದು ಅಥವಾ ವಿಳಂಬಗೊಳಿಸಲಾಗಿದ್ದು, ಅವುಗಳ ಪೈಕಿ ಹೆಚ್ಚಿನ ವ್ಯತ್ಯಯಗಳು ವಲಯದ ನೆವಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ನ್ಯೂಯಾರ್ಕ್, ಬೋಸ್ಟನ್, ಫಿಲಡೆಲ್ಫಿಯ, ಶಿಕಾಗೊ ಮತ್ತು ವಾಶಿಂಗ್ಟನ್ ವಿಮಾನ ನಿಲ್ದಾಣಗಳಲ್ಲಿ ಸಂಭವಿಸಿವೆ.

ಆರಂಭದಲ್ಲಿ ಒಮ್ಮೆ ಮಳೆ ಸುರಿದರೆ ಒಮ್ಮೆ ಹಿಮಪಾತವಾಗುತ್ತಿತ್ತು. ಆದರೆ, ಮಧ್ಯಾಹ್ನದ ಬಳಿಕ ಹಿಮಪಾತವೇ ನಿರಂತರವಾಗಿ ನಡೆಯಿತು. ನ್ಯೂಯಾರ್ಕ್ ಮತ್ತು ಬೋಸ್ಟನ್‌ಗಳಲ್ಲಿ ಸಂಜೆಯ ವೇಳೆಗೆ 4ರಿಂದ 6 ಇಂಚು ಹಿಮ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.

ನ್ಯೂಯಾರ್ಕ್, ಪೆನ್ಸಿಲ್ವೇನಿಯ, ವಾಯುವ್ಯ ನ್ಯೂಜರ್ಸಿ, ಕನೆಕ್ಟಿಕಟ್, ಮ್ಯಾಸಚೂಸಿಟ್ಸ್, ದಕ್ಷಿಣ ವರ್ಮಂಟ್, ದಕ್ಷಿಣ ನ್ಯೂ ಹ್ಯಾಂಪ್‌ಶೈರ್ ಮತ್ತು ಮೇನ್ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಲಿದೆ ಎಂದು ಮುನ್ಸೂಚನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News