ಈ ದಶಕವು ಮಾನವ ಇತಿಹಾಸದ ಅತ್ಯಂತ ಬಿಸಿ ದಶಕ : ವಿಶ್ವಸಂಸ್ಥೆ ವರದಿ

Update: 2019-12-03 17:37 GMT

ಮ್ಯಾಡ್ರಿಡ್ (ಸ್ಪೇನ್), ಡಿ. 3: ಈ ದಶಕವು ಮಾನವ ಇತಿಹಾಸದ ಅತ್ಯಂತ ಬಿಸಿಯ ದಶಕವಾಗಿದೆ ಎಂದು ವಿಶ್ವಸಂಸ್ಥೆಯು ಮಂಗಳವಾರ ತನ್ನ ವಾರ್ಷಿಕ ವಿಶ್ಲೇಷಣಾ ವರದಿಯೊಂದರಲ್ಲಿ ತಿಳಿಸಿದೆ.

ಈ ವರ್ಷದಲ್ಲಿ ಈ ವರೆಗಿನ ಜಾಗತಿಕ ಸರಾಸರಿ ಉಷ್ಣತೆಯು ಕೈಗಾರಿಕಾ ಪೂರ್ವದ ಉಷ್ಣತೆಗಿಂತ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ವಿಶ್ವ ಹವಾಮಾನ ಸಂಘಟನೆ (ಡಬ್ಲುಎಂಒ) ಹೇಳಿದೆ. ಪರಿಸ್ಥಿತಿ ಹೀಗೆಯೇ ಸಾಗಿದರೆ, 2019, ಈವರೆಗೆ ದಾಖಲಾದ ಅತ್ಯಂತ ಬಿಸಿ 3 ವರ್ಷಗಳ ಪೈಕಿ ಒಂದಾಗಲಿದೆ.

ಭೂಮಿಯಡಿ ದೊರಕುವ ಇಂಧನಗಳನ್ನು ಸುಡುವುದು, ಮೂಲಸೌಕರ್ಯಗಳನ್ನು ನಿರ್ಮಿಸುವುದು, ಬೆಳೆಗಳನ್ನು ಬೆಳೆಯುವುದು ಮತ್ತು ಸರಕುಗಳ ಸಾಗಣೆ ಮುಂತಾದ ಚಟುವಟಿಕೆಗಳಿಂದ ಉಂಟಾಗುವ ಮಾನವ ನಿರ್ಮಿತ ಮಾಲಿನ್ಯದಿಂದಾಗಿ 2019 ಅತ್ಯಂತ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯಾದ ವರ್ಷವಾಗುವುದರಲ್ಲಿದೆ ಹಾಗೂ ಇದು ಇನ್ನಷ್ಟು ಶಾಖವನ್ನು ಹಿಡಿದಿಡುತ್ತದೆ ಎಂದು ಡಬ್ಲುಎಂಒ ತಿಳಿಸಿದೆ.

ತಾಪಮಾನವನ್ನು ಸೃಷ್ಟಿಸುವ ಅನಿಲಗಳು ಸೃಷ್ಟಿಸಿದ ಹೆಚ್ಚುವರಿ ಶಾಖದ 90 ಶೇಕಡದಷ್ಟನ್ನು ಸಾಗರಗಳು ಹೀರುತ್ತವೆ. ಹಾಗಾಗಿ, ಈಗ ಅವುಗಳ ಉಷ್ಣತೆಯು ಗರಿಷ್ಠ ಮಟ್ಟದಲ್ಲಿದೆ.

ಜಗತ್ತಿನ ಸಾಗರಗಳು ಈಗ 150 ವರ್ಷಗಳ ಹಿಂದಿನದಕ್ಕಿಂತ ಕಾಲು ಭಾಗ ಹೆಚ್ಚು ಆಮ್ಲೀಯವಾಗಿದೆ ಹಾಗೂ ಇದು ಸಾಗರ ಜೀವಿಗಳ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿದೆ ಎಂದು ಡಬ್ಲುಎಂಒ ವರದಿ ಹೇಳಿದೆ.

ಜಗತ್ತಿನ ನೂರಾರು ಕೋಟಿ ಜನರು ತಮ್ಮ ಆಹಾರ ಮತ್ತು ಉದ್ಯೋಗಗಳಿಗಾಗಿ ಸಾಗರಗಳನ್ನೇ ಅವಲಂಬಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News