ಶೂಟಿಂಗ್‌ನಲ್ಲಿ ಮೆಹುಲಿ ಘೋಷ್‌ಗೆ ಚಿನ್ನ

Update: 2019-12-03 18:11 GMT

ಕಠ್ಮಂಡು, ಡಿ.3: ಇಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ದಕ್ಷಿಣ ಏಶ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 10 ಮೀ.ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್‌ಗಳು ಎಲ್ಲ 3 ಪದಕಗಳನ್ನು ಜಯಿಸಿ ಕ್ಲೀನ್‌ಸ್ವೀಪ್ ಸಾಧಿಸಿದ್ದಾರೆ.

ವಿಶ್ವ ದಾಖಲೆಗಿಂತ ಉತ್ತಮ ಸ್ಕೋರ್ ಗಳಿಸಿದ ಮೆಹುಲಿ ಘೋಷ್ ಚಿನ್ನದ ಪದಕ ಜಯಿಸಿದರು. ಆದರೆ, ಮೆಹುಲಿ ಸಾಧನೆಯನ್ನು ವಿಶ್ವ ದಾಖಲೆಯಾಗಿ ಪರಿಗಣಿಸಲ್ಪಡುತ್ತಿಲ್ಲ. ದಕ್ಷಿಣ ಏಶ್ಯನ್ ಗೇಮ್ಸ್‌ನ ಫಲಿತಾಂಶವನ್ನು ಅಂತರ್‌ರಾಷ್ಟ್ರೀಯ ಕ್ರೀಡಾ ಮಂಡಳಿ(ಐಎಸ್‌ಎಸ್‌ಎಫ್) ದಾಖಲೆಯ ಉದ್ದೇಶದಿಂದ ಗುರುತಿಸುತ್ತಿಲ್ಲ. ವಿಶ್ವಕಪ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗಳು, ಕೋಟಾ ಇವೆಂಟ್‌ಗಳನ್ನು ಮಾತ್ರ ಐಎಸ್‌ಎಸ್‌ಎಫ್ ದಾಖಲೆಯ ಉದ್ದೇಶಕ್ಕಾಗಿ ಪರಿಗಣಿಸುತ್ತದೆ. ಭಾರತ 10 ಮೀ.ಏರ್ ರೈಫಲ್ ಸ್ಪರ್ಧೆಯಲ್ಲಿ ಟೀಮ್ ಗೋಲ್ಡ್‌ನ್ನು ಗೆದ್ದುಕೊಂಡಿದೆ.

19ರ ಹರೆಯದ ಮೆಹುಲಿ ಫೈನಲ್‌ನಲ್ಲಿ 253.3 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದ್ದು, ಮೆಹುಲಿ ವಿಶ್ವದಾಖಲೆಗಿಂತ 0.4 ಅಂಕ ಹೆಚ್ಚಿಗೆ ಗಳಿಸಿದ್ದಾರೆ. ಭಾರತದ ಇನ್ನೋರ್ವ ಶೂಟರ್ ಅಪೂರ್ವಿ ಚಾಂಡೇಲ ಹೆಸರಿನಲ್ಲಿ ವಿಶ್ವ ದಾಖಲೆ(252.9)ಇದೆ. 250.8 ಅಂಕ ಗಳಿಸಿರುವ ಶ್ರೀಯಾಂಕಾ ಸದಂಗಿ ಬೆಳ್ಳಿ ಪದಕವನ್ನು ಜಯಿಸಿದರೆ, ಶ್ರೇಯಾ ಅಗರ್ವಾಲ್(227.2)ಕಂಚಿನ ಪದಕ ಜಯಿಸಿ ಭಾರತ ಮೂರು ಪದಕವನ್ನು ತನ್ನದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News