ಘನತೆ ಕಳೆದುಕೊಂಡ ಚುನಾವಣಾ ಪ್ರಚಾರ

Update: 2019-12-04 05:33 GMT

ರಾಜ್ಯದ ಹದಿನೈದು ವಿಧಾನ ಸಭಾ ಮತಕ್ಷೇತ್ರಗಳ ಉಪಚುನಾವಣೆಯ ಅಬ್ಬರದ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಹಿತ್ತಲ ಬಾಗಿಲ ಮೂಲಕ ಅಸ್ತಿತ್ವಕ್ಕೆ ಬಂದ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ಅಳಿವು ಉಳಿವನ್ನು ನಿರ್ಧರಿಸುವುದೆನ್ನಲಾದ ಈ ಚುನಾವಣೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ನವೆಂಬರ್ ತಿಂಗಳಲ್ಲಿ ಪ್ರಾರಂಭವಾದ ಪ್ರಚಾರ ಕಾರ್ಯ ಕಳೆದ ತಿಂಗಳ ಕೊನೆಯ ವಾರ ರಂಗೇರಿತ್ತು. ವೈಯಕ್ತಿಕ ಟೀಕೆ, ಆರೋಪ, ಪ್ರತ್ಯಾರೋಪ ಚುನಾವಣೆಯಲ್ಲಿ ಸಹಜ. ಆದರೆ ಈ ಬಾರಿ ಅದು ಸಭ್ಯತೆಯ ಎಲ್ಲೆಯನ್ನು ದಾಟಿ ನೀತಿ ಸಂಹಿತೆ ಉಲ್ಲಂಘನೆಯವರೆಗೆ ಹೋಯಿತು. ಈ ಕುರಿತು ಬಂದಿರುವ ಮಾಧ್ಯಮ ವರದಿಗಳನ್ನು ಆಧರಿಸಿ ಮುಖ್ಯ ಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿ. ಶ್ರೀ ರಾಮುಲು ಸೇರಿ ಕೆಲವರ ವಿರುದ್ಧ ಚುನಾವಣಾ ಆಯೋಗವು ಎಫ್‌ಐಆರ್ ದಾಖಲಿಸಿದೆ.

ಈ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಎಷ್ಟು ಹತಾಶರಾಗಿದ್ದಾರೆಂದರೆ ಸೋಲಿನ ಭೀತಿಯಿಂದ ಕೊನೆಯ ಗಳಿಗೆಯಲ್ಲಿ ಜಾತಿ ಭಾವನೆ ಕೆರಳಿಸಿ ಮತ ಯಾಚನೆಗೆ ಮುಂದಾದರು. ಸ್ವತಃ ಮುಖ್ಯ ಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನ ಮಾನದ ಘನತೆ ಹಾಗೂ ಸಾಂವಿಧಾನಿಕ ಪಾವಿತ್ರ್ಯವನ್ನು ಮರೆತು ‘‘ಈ ಚುನಾವಣೆಯಲ್ಲಿ ವೀರಶೈವ, ಲಿಂಗಾಯತರ ಒಂದೇ ಒಂದು ಮತ ಬಿಜೆಪಿ ಅಭ್ಯರ್ಥಿಗಳನ್ನು ಬಿಟ್ಟು ಬೇರೆ ಕಡೆ ಹೋಗಬಾರದು’’ ಎಂದು ಗೋಕಾಕದ ಬಹಿರಂಗ ಸಭೆಯಲ್ಲಿ ಹೇಳಿದರು. ಇದರ ಮೂಲಕ ಇತರ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಮತ ತಮಗೆ ಬೇಕಾಗಿಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದರು. ಈ ಬಗ್ಗೆ ಚುನಾವಣಾ ಆಯೋಗ ಅವರ ವಿರುದ್ಧ ನೀತಿ ಸಂಹಿತೆ ಪ್ರಕರಣ ದಾಖಲಿಸಿಕೊಂಡಿದೆ.

ಯಡಿಯೂರಪ್ಪನವರ ಮೇಲೆ ಎಫ್‌ಐಆರ್ ದಾಖಲಾದ ನಂತರವಾದರೂ ಬಿಜೆಪಿ ನಾಯಕರು ತಿದ್ದಿಕೊಳ್ಳಬಹುದಾಗಿತ್ತು. ಆದರೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಹೊಸಪೇಟೆಯ ವೀರಶೈವ, ಲಿಂಗಾಯತ ಸಮಾಜದ ಪ್ರಚಾರ ಸಭೆಯಲ್ಲಿ ಮಾತಾಡುತ್ತ ‘‘ವೀರಶೈವ, ಲಿಂಗಾಯತ ಸಮಾಜದವರ ಮತಗಳು ಬಿಜೆಪಿ ಹೊರತುಪಡಿಸಿ ಅನ್ಯಪಕ್ಷದ ಅಭ್ಯರ್ಥಿಗೆ ಬೀಳಬಾರದು. ಒಂದು ವೇಳೆ ವೀರಶೈವರು ಬೇರೆಯವರಿಗೆ ಮತ ಹಾಕಿದರೆ ಯಡಿಯೂರಪ್ಪಅವರ ಕೆನ್ನೆಗೆ ಹೊಡೆದಂತೆ, ಕಲ್ಲು ಹೊಡೆದು ಅವಮಾನಿಸಿದಂತೆ’’ ಎಂದು ಪ್ರಚೋದನಕಾರಿ ಮಾತುಗಳನ್ನಾಡಿದರು. ಇದು ನೀತಿ ಸಂಹಿತೆಯ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಈ ವರೆಗೆ ಮಾಧುಸ್ವಾಮಿ ಉತ್ತಮ ಸಂಸದೀಯ ಪಟು, ನೀತಿ, ನಿಯಮಗಳನ್ನು ಬಲ್ಲವರು ಎಂಬ ಅಭಿಪ್ರಾಯ ಸಾಮಾನ್ಯವಾಗಿತ್ತು. ಈಗ ಅಂಥವರ ಬಾಯಲ್ಲಿ ಇಂಥ ಮಾತುಗಳು! ಪ್ರಜಾಪ್ರಭುತ್ವದಲ್ಲಿ ಜಾತಿ, ಧರ್ಮದ ಹೆಸರನ್ನು ಬಳಸಿ ಮತ ಯಾಚನೆ ಮಾಡುವುದು ಕಾನೂನಿಗೆ ವಿರುದ್ಧ ಎಂದು ಗೊತ್ತಿದ್ದರೂ ಈ ರೀತಿಯಲ್ಲಿ ಮತ ಕೇಳುವುದನ್ನು ನೋಡಿದರೆ ಕುಸಿಯುತ್ತಿರುವ ನಮ್ಮ ಸಾರ್ವಜನಿಕ ಹಾಗೂ ರಾಜಕೀಯ ಬದುಕಿನ ಗುಣಮಟ್ಟದ ಬಗ್ಗೆ ಆತಂಕ ಉಂಟಾಗುತ್ತದೆ.

ಹನ್ನೆರಡನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ತಾರತಮ್ಯವನ್ನು ಧಿಕ್ಕರಿಸಿ ಬಂಡೆದ್ದ ಬಸವಣ್ಣನವರ ಹೆಸರನ್ನು ಹೇಳಿಕೊಳ್ಳುವ ಲಿಂಗಾಯತ ಸಮಾಜ ಎಂದೂ ಅತಿರೇಕದಿಂದ ವರ್ತಿಸಿಲ್ಲ. ಆದರೆ ಸಂಘಪರಿವಾರದ ಹಿನ್ನೆಲೆಯಿಂದ ಬಂದ ಬಿಜೆಪಿ ನಾಯಕರು ತಮ್ಮ ಸ್ವಾರ್ಥ ಸಾಧನೆಗಾಗಿ ಸರ್ವರೊಂದಿಗೆ ಬೆರೆತು ಬಾಳುತ್ತಾ ಬಂದ ಈ ಸಮುದಾಯದಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಚಳವಳಿ ನಡೆದಾಗ ಅದನ್ನು ಬಲವಾಗಿ ವಿರೋಧಿಸಿದ್ದ ಯಡಿಯೂರಪ್ಪಮುಂತಾದ ಬಿಜೆಪಿ ನಾಯಕರಿಗೆ ಈಗ ತಮ್ಮ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತರ ಮತಗಳು ಬೇಕಾಗಿವೆ. ಅದಕ್ಕಾಗಿ ಚುನಾವಣಾ ನೀತಿ ಸಂಹಿತೆಯನ್ನು ಧಿಕ್ಕರಿಸಿ ಲಂಗು ಲಗಾಮಿಲ್ಲದ ಪ್ರಚಾರ ಕಾರ್ಯ ನಡೆಸಿದರು. ಇದನ್ನೇ ಬೇರೆಯವರು ಮಾಡಿದರೆ ಜಾತಿವಾದ ಎಂದು ಕರೆಯುವವರು ಆಡುತ್ತಿರುವ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ.

 ಬಿಜೆಪಿಯ ಕೇಂದ್ರ ಸರಕಾರದ ಆಡಳಿತ ವೈಫಲ್ಯ, ಆರ್ಥಿಕ ಹಿಂಜರಿತ, ಬೆಲೆ ಏರಿಕೆ ಇವುಗಳನ್ನು ಮುಚ್ಚಿಕೊಂಡು ಮತ್ತೆ ಜಯ ಸಾಧಿಸಲು ಬಿಜೆಪಿ ನಾಯಕರಿಗೆ ಜಾತಿ, ಧರ್ಮಗಳ ದುರ್ಬಳಕೆ ಅನಿವಾರ್ಯವಾದಂತೆ ಕಾಣುತ್ತದೆ. ಇಂಥ ಪ್ರಚೋದಕ ಹೇಳಿಕೆಗಳ ಜೊತೆಗೆ ಹಸಿ ಸುಳ್ಳನ್ನೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ ನಲವತ್ತು ಸಾವಿರ ಕೋಟಿ ರೂಪಾಯಿ ಕೇಂದ್ರದ ಅನುದಾನವನ್ನು ಸಂರಕ್ಷಿಸಿ ವಾಪಸು ಕಳಿಸಲು ದೇವೇಂದ್ರ ಫಡ್ನವೀಸ್ ಅವರನ್ನು ಮೂರು ದಿನಗಳ ಮಟ್ಟಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ನೀಡಿದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತು. ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಕೋಲಾಹಲವಾಗಿ ಕೊನೆಗೆ ಫಡ್ನವೀಸ್ ಅವರೇ ಸ್ಪಷ್ಟೀಕರಣ ನೀಡಿ ಹೆಗಡೆ ಆರೋಪವನ್ನು ತಳ್ಳಿ ಹಾಕಿದರು.

ರಾಜಕೀಯ ನಾಯಕರು ಯಾವುದೇ ಪಕ್ಷದವರಾಗಿರಲಿ ಭಾಷಣ ಮಾಡುವಾಗ ಮೈ ಮೇಲೆ ಎಚ್ಚರವಿರಬೇಕು. ಕ್ಷಣಿಕ ಲಾಭಕ್ಕಾಗಿ, ಸ್ವಾರ್ಥ ಸಾಧನೆಗಾಗಿ ಅಸಭ್ಯ ವಾದ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುವಂಥ ಹೇಳಿಕೆಗಳನ್ನು ನೀಡುವುದು ಸರಿಯಲ್ಲ.

ಅಧಿಕಾರಕ್ಕಾಗಿ ಒಮ್ಮೆ ಹಿಂದುತ್ವದ ಉನ್ಮಾದ ಕೆರಳಿಸುವುದು, ‘ಹಿಂದೂ ಒಂದು’ ಎನ್ನುವುದು, ಇನ್ನೊಮ್ಮೆ ವೋಟಿಗಾಗಿ ವೀರಶೈವ-ಲಿಂಗಾಯತ ಎನ್ನುವುದು ರಾಜಕೀಯ ಅನೈತಿಕತೆಯ ಪರಮಾವಧಿಯಲ್ಲದೆ ಬೇರೇನೂ ಅಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News