ಅಜಿತ್ ಪವಾರ್ ಬಿಜೆಪಿ ಸಖ್ಯ ಬೆಳೆಸಲು ಕಾಂಗ್ರೆಸ್ ಕಾರಣ!

Update: 2019-12-04 04:12 GMT

ಹೊಸದಿಲ್ಲಿ, ಡಿ.4: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು 72 ಗಂಟೆಗಳ ಕಾಲ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಅವರ ಅಚ್ಚರಿಯ ನಡೆಗೆ ಏನು ಕಾರಣ ಎಂಬ ರಹಸ್ಯ ಕೊನೆಗೂ ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷದ ಜತೆಗಿನ ಮಾತುಕತೆ ಸುದೀರ್ಘವಾದದ್ದು ಹಾಗೂ ಒಪ್ಪಂದ ಮಾತುಕತೆಯಲ್ಲಿ ಬಿಸಿಬಿಸಿ ಚರ್ಚೆಯಾದ ಕಾರಣದಿಂದ ಬೇಸತ್ತು ಅಳಿಯ ಈ ನಿರ್ಧಾರಕ್ಕೆ ಬಂದರು ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

ಕಾಂಗ್ರೆಸ್ ಜತೆಗಿನ ಮಾತುಕತೆ ಇಷ್ಟು ಸುಧೀರ್ಘವಾಗಿರುವ ಕಾರಣದಿಂದ ಸರ್ಕಾರ ರಚನೆ ಸಾಧ್ಯವಿಲ್ಲ ಹಾಗೂ ಮಾತುಕತೆಯಲ್ಲಿ ಶಿವಸೇನೆ ಭಾಗಿಯಾಗಿಲ್ಲ ಎಂಬ ಕಾರಣದಿಂದ ಅಜಿತ್ ಈ ನಿರ್ಧಾರ ಕೈಗೊಂಡಿದ್ದಾಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಅಜಿತ್ ಪವಾರ್ ಅವರು ದೇವೇಂದ್ರ ಫಡ್ನವೀಸ್ ಜತೆಗೆ ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ಇತ್ತಾದರೂ, ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುತ್ತಾರೆ ಎಂಬ ಕಲ್ಪನೆ ಇರಲಿಲ್ಲ ಎಂದು ಹಿರಿಯ ಮುತ್ಸದ್ದಿ ಹೇಳಿದರು.

ನವೆಂಬರ್ 22ರಂದು ಸಚಿವರ ಖಾತೆ ಹಂಚಿಕೆ ಸಂಬಂಧ ಕಾಂಗ್ರೆಸ್ ಮುಖಂಡರ ಜತೆ ನಡೆದ ಬಿಸಿಬಿಸಿ ಚರ್ಚೆ ಹಾಗೂ ಮರುದಿನ ಮುಂಜಾನೆ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಗ್ಗೆ ಉಲ್ಲೇಖಿಸಿದ ಅವರು, "ಇಂಥ ಬಿಸಿಬಿಸಿ ಚರ್ಚೆಯಿಂದ ಅಜಿತ್ ತೀರಾ ಅಸಮಾಧಾನಗೊಂಡಿದ್ದರು. ಕಾಂಗ್ರೆಸ್ ಪಕ್ಷ ಹೆಚ್ಚುವರಿ ಖಾತೆಗಳನ್ನು ಕೇಳಿತ್ತು. ನಾನು ಸಭೆಯಿಂದ ಹೊರನಡೆದೆ. ಅಜಿತ್ ಕೂಡಾ ಹೊರನಡೆದರು. ಮುಂದಿನ ದಿನಗಳಲ್ಲಿ ಹೇಗೆ ಜತೆಯಗಿ ಕಾರ್ಯನಿರ್ವಹಿಸಬಹುದು ಎನ್ನುವುದು ತಿಳಿಯದಾಗಿದೆ ಎಂದು ಸಹೋದ್ಯೋಗಿಗಳಿಗೆ ಹೇಳಿದರು. ಆ ಬಳಿಕ ರಾತ್ರಿ ಅವರು ದೇವೇಂದ್ರ ಫಡ್ನವೀಸ್ ಜತೆ ಮಾತುಕತೆ ನಡೆಸಿದರು" ಎಂದು ಬಹಿರಂಗಪಡಿಸಿದ್ದಾರೆ.

ಸರ್ಕಾರ ರಚನೆ ಸಂಬಂಧ ಅಜಿತ್, ಬಿಜೆಪಿ ಜತೆ ಮಾತುಕತೆ ನಡೆಸಲು ತಮ್ಮ ಕೃಪಾಕಟಾಕ್ಷ ಇತ್ತು ಎಂಬ ವದಂತಿಗಳನ್ನು ಶರದ್ ಪವಾರ್ ತಳ್ಳಿಹಾಕಿದರು. ಶಿವಸೇನೆ ಜತೆ ಕೆಲಸ ಮಾಡುವುದು ಬಿಜೆಪಿ ಜತೆ ಕೆಲಸ ಮಾಡುವುದಕ್ಕಿಂತ ಸುಲಭ. ಆಡಳಿತದಲ್ಲಿ ಶಿವಸೇನೆ ಹಿಂದುತ್ವ ಅನುಸರಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News