ಅಧಿಕಾರ ಮುಂದುವರಿಕೆಗಾಗಿ ಮಾಹಿತಿ ತಿರುಚುವಿಕೆ

Update: 2019-12-04 05:38 GMT

ವಿಶ್ವದ ಹಲವು ಭಾಗಗಳಲ್ಲಿರುವ ಸಮಾಜ ವಿಜ್ಞಾನ ಸಂಶೋಧಕರು ಭಾರತ ಸರಕಾರದ ಅಂಕಿ ಸಂಖ್ಯೆಗಳು ದತ್ತಾಂಶಗಳು ಅವ್ಯವಸ್ಥೆಯ ಆಗರವಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಸರಕಾರ ತನಗೆ, ತನ್ನ ಆಡಳಿತಕ್ಕೆ ಪೂರಕವಲ್ಲದ ಗ್ರಾಹಕರ ಖರ್ಚು ಸಂಬಂಧಿ ದತ್ತಾಂಶಗಳನ್ನು ನಿರಾಕರಿಸಿತು. ಆ ಮೊದಲು 2017ರ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಪ್ರಕಟಿಸಿದ ದತ್ತಾಂಶಗಳನ್ನು ವಿಳಂಬಿಸಿ ಆ ಬಳಿಕ ಬಿಡುಗಡೆ ಮಾಡಿತು. ದೇಶದಲ್ಲಿನ ನಿರುದ್ಯೋಗ ದತ್ತಾಂಶಗಳಿಂದ ಸಾರ್ವಜನಿಕರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಕೂಡ ಅದು ಪ್ರಯತ್ನಿಸಿತು. ಮಹಾತ್ಮಾ ಗಾಂಧಿಯವರ ಹತ್ಯೆಯಂತಹ ಘಟನೆಗಳಿಗೆ ಸಂಬಂಧಿಸಿದ ವಾಸ್ತವಗಳನ್ನು ತಿರುಚುವ ಪ್ರಯತ್ನಗಳು ಕೂಡ ನಡೆದವು.

ಆಧುನಿಕ ಕಾಲದ ದಮನಕಾರಿ ಪ್ರಭುತ್ವಗಳು ತಾವು ಅಧಿಕಾರದಲ್ಲುಳಿಯಲು, ತಮ್ಮ ಅಧಿಕಾರ ಮುಂದುವರಿಯುವಂತೆ ಮಾಡಲು ಮಾಹಿತಿಯನ್ನು ತಿರುಚುವುದು ನಮಗೆಲ್ಲ ತಿಳಿದಿದೆ. ಆದರೆ ಇದು ಭವಿಷ್ಯದಲ್ಲಿ ಏನಾಗಬಹುದು? ಏನು ಕಾದಿದೆ? ಎಂಬುದರ ಕೇವಲ ಒಂದು ಸೂಚನೆ ಇರಬಹುದು. ಇತ್ತೀಚೆಗೆ ನಡೆದಿರುವ ಸಂಶೋಧನೆಗಳು ಈ ಅನುಮಾನವನ್ನು ಬಲಪಡಿಸುತ್ತವೆ.

ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಆರ್ಟುರಸ್ ರೊಜನಸ್ ಮತ್ತು ಡೆನಿಸ್ ಸ್ಟುಕಲ್ ರಶ್ಯದಲ್ಲಿ ಸರಕಾರದಿಂದ ನಿಯಂತ್ರಿತವಾದ ಟಿವಿ ಹೇಗೆ ಆರ್ಥಿಕ ವಾಸ್ತವಗಳನ್ನು, ಸತ್ಯಗಳನ್ನು (ವಿಶೇಷವಾಗಿ ಅವು ತನಗೆ ಅನುಕೂಲಕರವಾಗಿಲ್ಲ ದಿದ್ದಾಗ) ಸೆನ್ಸಾರ್ ಮಾಡುತ್ತದೆಂಬುದನ್ನು ದಾಖಲಿಸಿದ್ದಾರೆ.

ಅವರು ರಶ್ಯದ ಅತ್ಯಂತ ಬೃಹತ್ತಾದ ಸರಕಾರಿ-ನಿಯಂತ್ರಿತ ಟಿವಿ ಜಾಲದಲ್ಲಿ ಪ್ರಸಾರವಾದ ದೈನಂದಿನ ವಾರ್ತಾ ವರದಿಗಳನ್ನು ಅಧ್ಯಯನ ಮಾಡಿದ್ದಾರೆ. ಸುದ್ದಿ ಕೆಟ್ಟದಾಗಿದ್ದಾಗ ಅದನ್ನು ನೇರವಾಗಿ ಸೆನ್ಸಾರ್ ಮಾಡುವುದಿಲ್ಲ; ಬದಲಾಗಿ ಅದು ಜಾಗತಿಕವಾದ ಬಾಹ್ಯ ಅಂಶಗಳಿಗೆ, ವಾಸ್ತವಗಳಿಗೆ ಸಂಬಂಧಿಸಿದ ವಾಸ್ತವವೆಂದು ತೋರಿಸಲಾಗುತ್ತದೆ; ಅದಕ್ಕೆ ತಾನು ಕಾರಣವಲ್ಲ ಎನ್ನುವಂತೆ ಬಿಂಬಿಸಲಾಗುತ್ತದೆ. ಆದರೆ ಸುದ್ದಿ ಒಳ್ಳೆಯ ಸುದ್ದಿಯಾಗಿದ್ದರೆ, ಸರಕಾರಕ್ಕೆ ಅನುಕೂಲಕರವಾಗಿದ್ದರೆ ಆಗ ಅದನ್ನು ವ್ಯವಸ್ಥಿತವಾಗಿ ದೇಶದ ರಾಜಕಾರಣಿಗಳ ಸಾಧನೆ ಎಂಬಂತೆ ಬಿಂಬಿಸಲಾಗುತ್ತದೆ. ಅರ್ಥಶಾಸ್ತ್ರಜ್ಞರಾದ ಸರ್ಗೆಯಿ ಗುರೀವ್ ಮತ್ತು ಡೇನಿಯಲ್ ಟ್ರೀಸ್‌ಮನ್ ಅವರು ರೊಜನಸ್ ಮತ್ತು ಸ್ಟುಕಲ್ ಅವರ ಅಭಿಪ್ರಾಯಗಳನ್ನು ಪುಷ್ಟೀಕರಿಸಿದ್ದಾರೆ. ಇವರ ಪ್ರಕಾರ ಹಳೆಯ ಕಾಲದ ನೇರ ಸರ್ವಾಧಿಕಾರಿಗಳಿಗಿಂತ ಮಾಹಿತಿ ತಿರುಚುವಿಕೆಯ ಮೂಲಕ ತಮ್ಮ ಅಧಿಕಾರ ಮುಂದುವರಿಸುವ ಸರ್ವಾಧಿಕಾರಿಗಳು ಭಿನ್ನವಾಗಿ ಕಾರ್ಯಾಚರಿಸುತ್ತಾರೆ. ಈ ಆಧುನಿಕ ಸರ್ವಾಧಿಕಾರಿಗಳು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಅಧಿಕಾರ ನಡೆಸುತ್ತಾರೆ. ತಮ್ಮ ಮುಖವಾಡ ಬಯಲಾಗದಂತೆ ಮಾಹಿತಿಯನ್ನು, ದತ್ತಾಂಶಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ; ತಂತ್ರಗಾರಿಕೆಯ ಮಾಹಿತಿಯನ್ನು ಉತ್ಪಾದಿಸುವ ವ್ಯವಸ್ಥೆ ಮಾಡುತ್ತಾರೆ.

ಮಾಹಿತಿ ಸರ್ವಾಧಿಕಾರಿಗಳ ಉದಯಕ್ಕೆ, ಅವರ ಪ್ರಾಬಲ್ಯಕ್ಕೆ ತಂತ್ರಜ್ಞಾನದ ವ್ಯಾಪಕವಾದ ಹರಡುವಿಕೆ, ಬಳಕೆ ಮತ್ತು ಸಾಮಾಜಿಕ ಜಾಲತಾಣ ಒಂದು ಮುಖ್ಯ ಕಾರಣವಾಗಿದೆ. ಮಾಹಿತಿ ಸರ್ವಾಧಿಕಾರಿಗೆ ಒಂದು ಉದಾಹರಣೆ ಪೆರುವಿನ ಆಲ್ಬರ್ಟ್ ಫ್ಯುಜಿಮೊರಿ. ಇವರು ತನ್ನ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ವ್ಲಾಡಿಮಿರೊ ಮೊಂಟೆಸಿನೊಸ್‌ರನ್ನು ಟೆಲಿವಿಷನ್ ಸ್ಟೇಷನ್‌ಗಳಿಗೆ ಮಿಲಿಯಗಟ್ಟಲೆ ಡಾಲರ್ ಲಂಚ ನೀಡಲು ಬಳಸಿಕೊಂಡರು. ಇವರ ಉದ್ದೇಶ: ಸತ್ಯ ಹೇಳುವ ಮೀಡಿಯಾದ ಪ್ರಚಾರವನ್ನು, ಪ್ರಸಾರವನ್ನು ವಿಕೃತಗೊಳಿಸುವುದು.

ಗುರೀವ್ ಮತ್ತು ಟ್ರೀಸ್‌ಮನ್ ಹೇಳುವ ಪ್ರಕಾರ ಮಾಹಿತಿ ಆಧಾರಿತ ಸರ್ವಾಧಿಕಾರದ ಒಂದು ಪರಿಣಾಮವೆಂದರೆ ಅಂತಹ ದೇಶಗಳಲ್ಲಿ ನೇರ ರಾಜಕೀಯ ಹತ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ. ಇಂತಹ ಹತ್ಯೆಗಳಿಗೆ ಬದಲಾಗಿ ತನ್ನ ವಿರೋಧಿಗಳನ್ನು, ಭಿನ್ನಮತೀಯರನ್ನು, ಅಲ್ಪಕಾಲಿಕ ಜೈಲುವಾಸಕ್ಕೆ ತಳ್ಳುವ ಒಂದು ವಾತಾವರಣ ಸೃಷ್ಟಿಯಾಗುತ್ತದೆ. ಹೀಗೆ, ರಾಜಕೀಯೇತರ ಕಾರಣಗಳಿಗಾಗಿ ಭಿನ್ನಮತೀಯರನ್ನು ಜೈಲಿಗೆ ತಳ್ಳುವುದರ ಉದ್ದೇಶ ಹೆದರಿಕೆಯ ಒಂದು ವಾತಾವರಣವನ್ನು ಸೃಷ್ಟಿಸುವುದು.

ಮಾಹಿತಿ ಮೂಲಕ ನಡೆಯುವ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಸಮಾನವಾದ ಒಂದು ಸ್ಥಿತಿಯ ಭ್ರಮೆಯನ್ನು ಸೃಷ್ಟಿಸುತ್ತದೆ. ಗುರೀವ್ ಮತ್ತು ಟ್ರೀಸ್‌ಮನ್ ಇದು ಎರಡು ಅಂಶಗಳನ್ನು ಆಧರಿಸಿರುತ್ತದೆ ಎನ್ನುತ್ತಾರೆ: ಒಂದು, ಮಾಹಿತಿ ಪಡೆದ ಗಣ್ಯ ವರ್ಗದ (ಇಲೈಟ್) ಗಾತ್ರ; ಎರಡು, ಸರಕಾರ ಮಾಧ್ಯಮಗಳ ಮೇಲೆ ಹೊಂದಿರುವ ನಿಯಂತ್ರಣ. ದೇಶದ ಬೆಳವಣಿಗೆಯ ವೇಗ ಹೆಚ್ಚಿದಂತೆ ಗಣ್ಯ ವರ್ಗದ ಗಾತ್ರವೂ ದೊಡ್ಡದಾಗುತ್ತದೆ. ಇಂತಹ ಪ್ರಕರಣಗಳಲ್ಲಿ, ಪ್ರಜಾಪ್ರಭುತ್ವ ಅಥವಾ ಪ್ರಜಾಸತ್ತಾತ್ಮಕ ಆಳ್ವಿಕೆಯನ್ನು ನಿರೀಕ್ಷಿಸಲಾಗುತ್ತದೆ. ಅದೇನಿದ್ದರೂ, ಮಾಹಿತಿ ಆಧಾರಿತ ಸರ್ವಾಧಿಕಾರಿಗಳು ಅಧಿಕಾರದಲ್ಲಿ ಮುಂದುವರಿಯುತ್ತಾರೆ.

ಭಾರತವು ಮಾಹಿತಿ ಮೂಲಕ ನಿಯಂತ್ರಿತವಾದ ಒಂದು ಏಕವ್ಯಕ್ತಿ ಕೇಂದ್ರಿತ ಅಥವಾ ಒಂದು ಗುಂಪಿನ ಕೈಯಲ್ಲಿ ಕೇಂದ್ರಿತವಾದ ಸರ್ವಾಧಿಕಾರದ (ಇನ್ಫರ್ಮೇಷನ್ ಆಟ್ರೊಕ್ರಸಿ) ಕಡೆಗೆ ಸಾಗುತ್ತಿದೆಯಾದರೆ, ಹಲವು ಆತಂಕಕಾರಿ ಪ್ರಶ್ನೆಗಳು ಎದುರಾಗುತ್ತವೆ. ಭವಿಷ್ಯದಲ್ಲಿ ಪ್ರಜಾಪ್ರಭುತ್ವದಿಂದ ಹಿಂದೆ ಸರಿಯ ಬೇಕಾಗಬಹುದೇ? ಎಂಬ ಪ್ರಶ್ನೆಯ ಸುತ್ತ ಏಳುವ ಪ್ರಶ್ನೆಗಳಿವು. ಈ ದಿಕ್ಕಿನಲ್ಲಿ ದೇಶವನ್ನು ಎಳೆದೊಯ್ಯುವ ಶಕ್ತಿಗಳ ಅಧ್ಯಯನ ನಡೆಸಬೇಕಾಗಿದೆ ಮತ್ತು ಪ್ರಾಯಶಃ ಈ ಶಕ್ತಿಗಳನ್ನು ಎದುರಿಸಬೇಕಾಗಿದೆ, ಇವುಗಳಿಗೆ ಸವಾಲೊಡ್ಡಬೇಕಾಗಿದೆ.

(ಲೇಖಕರು ಸ್ಟಾನ್‌ಫರ್ಡ್ ವಿಶ್ವವಿದ್ಯಾನಿಲಯದ ಹೂವರ್ ಇನ್‌ಸ್ಟಿಟ್ಯೂಷನ್‌ನಲ್ಲಿ ವಿಸಿಟಿಂಗ್ ಫೆಲೊ ಆಗಿದ್ದಾರೆ)

(ಕೃಪೆ: ದಿ ಹಿಂದೂ)

Writer - ಚಿರಂತನ್ ಚಟರ್ಜಿ

contributor

Editor - ಚಿರಂತನ್ ಚಟರ್ಜಿ

contributor

Similar News