ಮಹಿಳೆಯರಿಗೊಂದು ಎಚ್ಚರಿಕೆಯ ಗಂಟೆ: ನೀವು ಬಳಸುವ ಮೇಕಪ್ ಉತ್ಪನ್ನಗಳಲ್ಲಿ ‘ಸೂಪರ್ ‌ಬಗ್’ಗಳಿರಬಹುದು

Update: 2019-12-04 15:13 GMT
ಸಾಂದರ್ಭಿಕ ಚಿತ್ರ

ಮೇಕಪ್‌ಗೆ ಒಗ್ಗಿಕೊಂಡಿರುವ ಮಹಿಳೆಯರು ಖಂಡಿತ ಈ ಲೇಖನವನ್ನು ಓದಬೇಕು. ಕೆಲವೊಮ್ಮೆ ನಾವು ಬಳಸುವ ಉತ್ಪನ್ನಗಳು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತವೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಈಗಾಗಲೇ ಬಳಕೆಯಲ್ಲಿರುವ ಲಿಪ್‌ಸ್ಟಿಕ್,ಕಾಡಿಗೆ,ಬ್ಯೂಟಿ ಬ್ಲೆಂಡರ್‌ನಂತಹ ಮೇಕಪ್ ಉತ್ಪನ್ನಗಳಲ್ಲಿ ‘ಸೂಪರ್‌ಬಗ್’ಗಳು ಅಂದರೆ ಆ್ಯಂಟಿ ಬಯಾಟಿಕ್‌ಗಳಿಗೂ ಬಗ್ಗದ ಸೂಕ್ಷಜೀವಿಗಳು ಇರುತ್ತವೆ ಎನ್ನುವುದನ್ನು ಸಂಶೋಧನೆಗಳು ಸಿದ್ಧಪಡಿಸಿವೆ.

ಬ್ಲೆಂಡರ್ ಗಳು ಮತ್ತು ಬ್ರಷ್‌ಗಳಂತಹ ಕೆಲವು ನಿಯಮಿತವಾಗಿ ಬಳಕೆಯಾಗುವ ಉತ್ಪನ್ನಗಳಲ್ಲಿ ಮಾರಣಾಂತಿಕವಾದ ಸೂಪರ್‌ಬಗ್‌ಗಳು ಇರುವುದು ಬ್ರಿಟನ್‌ನ ಆ್ಯಸ್ಟನ್ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದ್ದು,ಅಧ್ಯಯನ ವರದಿಯು ‘ಜರ್ನಲ್ ಆಫ್ ಅಪ್ಲೈಡ್ ಮೈಕ್ರೋಬಯಾಲಜಿ’ಯಲ್ಲಿ ಪ್ರಕಟಗೊಂಡಿದೆ. ಈ ಉತ್ಪನ್ನಗಳನ್ನು ತೆರೆದ ಸ್ಥಳದಲ್ಲಿಡುವುದರಿಂದ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಇವು ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಶಸ್ತ ತಾಣಗಳಾಗುತ್ತವೆ. ಈ ವಸ್ತುಗಳು ಯಾವುದೇ ಎಕ್ಸ್‌ಪೈರಿ ದಿನಾಂಕ ಹೊಂದಿರುವುದಿಲ್ಲ ಎಂದು ನಾವು ಭಾವಿಸಿರುತ್ತೇವೆ. ಆದರೆ ಇವು ಎಕ್ಸ್‌ಪೈರಿ ಅಥವಾ ಮುಗಿತಾಯ ದಿನಾಂಕವನ್ನು ಹೊಂದಿರುತ್ತವೆ. ಈ ದಿನಾಂಕದ ನಂತರವೂ ಇವುಗಳನ್ನು ಬಳಸುವುದು ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣಗಳಲ್ಲೊಂದಾಗಿದೆ.

ಸಂಶೋಧಕರು ಅಧ್ಯಯನಕ್ಕೊಳಪಡಿಸಿದ ಮೇಕಪ್ ಉತ್ಪನ್ನಗಳ ಪೈಕಿ ಶೇ.90ರಷ್ಟುಉತ್ಪನ್ನಗಳು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದವು. ಇವುಗಳಲ್ಲಿ ಮಲ ಮಾಲಿನ್ಯದೊಂದಿಗೆ ಗುರುತಿಸಿಕೊಂಡಿರುವ ಇ.ಕೋಲಿಯಂತಹ ಬ್ಯಾಕ್ಟೀರಿಯಾಗಳೂ ಇದ್ದವು. ವ್ಯಕ್ತಿ ಇಂತಹ ಉತ್ಪನ್ನಗಳ ಬಳಕೆಯನ್ನು ಮುಂದುವರಿಸಿದರೆ ಚರ್ಮದ ಸೋಂಕಿನಿಂದ  ಹಿಡಿದು ರಕ್ತವು ವಿಷಮಯವಾಗುವವರೆಗಿನ ಸಮಸ್ಯೆಗಳಿಂದ ನರಳಬೇಕಾಗಬಹುದು. ಇವುಗಳಲ್ಲಿರುವ ಬ್ಯಾಕ್ಟೀರಿಯಾಗಳು ನಿರೀಕ್ಷೆಗಿಂತ ಹೆಚ್ಚಿನ ಹಾನಿಯನ್ನು ಮಾಡುವುದರಿಂದ ದುರ್ಬಲ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವವರು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

ಮೇಕಪ್ ಉತ್ಪನ್ನಗಳ ಬಳಕೆ ಮತ್ತು ಅವುಗಳ ಸ್ವಚ್ಛತೆಯ ಬಗ್ಗೆ ಗ್ರಾಹಕರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು,ಜೊತೆಗೆ ತಯಾರಿಕೆ ಕಂಪನಿಗಳೂ ಉತ್ಪನ್ನದ ಮೇಲೆ ಬಳಕೆ ಮತ್ತು ಸ್ವಚ್ಛತೆ ಸೂಚನೆಗಳನ್ನೂ ಒದಗಿಸಬೇಕು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.

ಇತರ ಉತ್ಪನ್ನಗಳಿಗೆ ಹೋಲಿಸಿದರೆ ಫೌಂಡೇಷನ್ ಲೇಪನಕ್ಕೆ ಮತ್ತು ಮೇಕಪ್‌ನ್ನು ಬ್ಲೆಂಡ್ ಮಾಡಲು ವ್ಯಾಪಕವಾಗಿ ಬಳಕೆಯಾಗುವ ಬ್ಯೂಟಿ ಬ್ಲೆಂಡರ್‌ಗಳು ಅತ್ಯಂತ ಹೆಚ್ಚಿನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತವೆ ಎನ್ನುವುದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಇವು ಶೇ.93ರಷ್ಟು ಮಾರಣಾಂತಿಕ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ.

ಬ್ಯೂಟಿ ಬ್ಲೆಂಡರ್‌ಗಳನ್ನು ನಿಯಮಿತವಾಗಿ ತೊಳೆದು ಚೆನ್ನಾಗಿ ಒಣಗಿಸುವ ಕುರಿತು ಮತ್ತು ಮೇಕಪ್ ಸಾಮಗ್ರಿಗಳನ್ನು ಅವುಗಳ ಎಕ್ಸ್‌ಪೈರಿ ದಿನಾಂಕದ ನಂತರವೂ ಬಳಸುವ ಕೆಡುಕುಗಳ ಬಗ್ಗೆ ಬಳಕೆದಾರರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮೇಕಪ್ ಉತ್ಪನ್ನಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಹಲವಾರು ಕಾರಣಗಳಿವೆ. ಬಳಕೆಯ ಬಳಿಕ ಮೇಕಪ್ ಉತ್ಪನ್ನಗಳನ್ನು ಸರಿಯಾಗಿ ಮುಚ್ಚದೇ ಹಾಗೆಯೇ ಬಿಡುವುದು,ಬಳಕೆಯ ಸಂದರ್ಭ ಮೇಕಪ್ ಬ್ರಷ್,ಸ್ಪಾಂಜ್,ಬ್ಯೂಟಿ ಬ್ಲೆಂಡರ್ ಇತ್ಯಾದಿಗಳು ನೆಲಕ್ಕೆ ಬೀಳುವುದು,ಬ್ಲೆಂಡರ್‌ಗಳು ಮತ್ತು ಬ್ರಷ್‌ಗಳನ್ನು ಬಳಕೆಯ ಬಳಿಕ ತೊಳೆಯದಿರುವುದು,ಒದ್ದೆಯಾದ ಬ್ಲೆಂಡರ್‌ನ್ನು ಹಾಗೆಯೇ ಬಿಡುವುದು,ಎಕ್ಸ್‌ಪೈರಿ ದಿನಾಂಕದ ನಂತರವೂ ಉತ್ಪನ್ನಗಳನ್ನು ಬಳಸುವುದು ಇವು ಇಂತಹ ಕೆಲವು ಪ್ರಮುಖ ಕಾರಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News