ಆರ್‌ಬಿಐ, ಚು.ಆಯೋಗ ಮಾತ್ರವಲ್ಲ, ಕಾನೂನು ಸಚಿವಾಲಯವೂ ಚುನಾವಣಾ ಬಾಂಡ್‌ಗಳನ್ನು ವಿರೋಧಿಸಿತ್ತು!

Update: 2019-12-05 14:04 GMT

ಹೊಸದಿಲ್ಲಿ,ಡಿ.5: ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡಲು ಚುನಾವಣಾ ಬಾಂಡ್‌ಗಳನ್ನು ಹೊರಡಿಸುವುದಕ್ಕೆ ಆರ್‌ಬಿಐ,ಚುನಾವಣಾ ಆಯೋಗದ ಜೊತೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯವೂ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಎನ್ನ್ನುವುದು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ವಿತ್ತ ಸಚಿವಾಲಯದಿಂದ ಪಡೆದುಕೊಂಡಿರುವ ದಾಖಲೆಗಳು ಬಹಿರಂಗಗೊಳಿಸಿವೆ. ಚುನಾವಣಾ ಬಾಂಡ್‌ಗಳಲ್ಲಿ ಸಿಂಹಪಾಲು ಆಡಳಿತಾರೂಢ ಬಿಜೆಪಿಗೆ ಲಭಿಸಿದೆ.

ವಿತ್ತ ಸಚಿವಾಲಯವು 2018,ಜ.2ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಚುನಾವಣಾ ಬಾಂಡ್‌ಗಳು ಪ್ರಾಮಿಸರಿ ನೋಟ್‌ಗಳಾಗಿವೆ ಎಂದು ಹೇಳಿತ್ತು. ಇದನ್ನು ಆಕ್ಷೇಪಿಸಿದ್ದ  ಕಾನೂನು ಸಚಿವಾಲಯವು ಎರಡು ಕಾರಣಗಳಿಂದಾಗಿ ಚುನಾವಣಾ ಬಾಂಡ್‌ಗಳನ್ನು ಪ್ರಾಮಿಸರಿ ನೋಟ್‌ಗಳ ರೂಪದಲ್ಲಿ ಮಾರಾಟ ಮಾಡಕೂಡದು ಎಂದು ಹೇಳಿತ್ತು. ಚುನಾವಣಾ ಬಾಂಡ್ ಪ್ರಾಮಿಸರಿ ನೋಟ್‌ನ ಅರ್ಹತೆ ಹೊಂದಿಲ್ಲ ಮತ್ತು ಅದನ್ನು ಕರೆನ್ಸಿಯಾಗಿ ಬಳಸಬಹುದು ಎಂಬ ಕಾರಣಗಳನ್ನು ಅದು ನೀಡಿತ್ತು.

ಚುನಾವಣಾ ಬಾಂಡ್ ಗಳು ದಾನಿಯ ಅಥವಾ ಸ್ವೀಕರಿಸುವವರ ಹೆಸರುಗಳನ್ನು ಹೊಂದಿರುವುದಿಲ್ಲವಾದ್ದರಿಂದ ಅಂತಿಮವಾಗಿ ರಾಜಕೀಯ ಪಕ್ಷವೊಂದರ ಕೈಸೇರುವ ಮುನ್ನ ಅದು ಹಲವಾರು ಕೈಗಳನ್ನು ಬದಲಿಸಬಹುದು.

 ಹಿಂದಿನ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಚಲಾಯಿಸಲ್ಪಟ್ಟ ಮತಗಳ ಕನಿಷ್ಠ ಶೇ.1ರಷ್ಟು ಮತಗಳನ್ನು ಪಡೆದ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿವೆ ಎಂದು ವಿತ್ತ ಸಚಿವಾಲಯವು ಅಧಿಸೂಚನೆಯಲ್ಲಿ ಪ್ರಸ್ತಾಪಿಸಿತ್ತು. ಇದನ್ನು ಆಕ್ಷೇಪಿಸಿದ್ದ ಕಾನೂನು ಸಚಿವಾಲಯವು ಈ ಪ್ರಸ್ತಾವವು ಜನ ಪ್ರಾತಿನಿಧ್ಯ ಕಾಯ್ದೆ,1951ರ ಕಲಂ 29ಬಿಗೆ ಅನುಗುಣವಾಗಿಲ್ಲ. ಹೀಗಾಗಿ ಯಾವುದೇ ರಾಜಕೀಯ ಪಕ್ಷವು ಯಾವುದೇ ವ್ಯಕ್ತಿ ಅಥವಾ ಕಂಪನಿಯು ಸ್ವ ಇಚ್ಛೆಯಿಂದ ನೀಡುವ ಯಾವುದೇ ದೇಣಿಗೆ ಮೊತ್ತವನ್ನು ಸ್ವೀಕರಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಆದರೆ ಸರಕಾರವು ಈ ಪ್ರಸ್ತಾವವನ್ನು ಕೈಬಿಡುವ ಬದಲು ಜನ ಪ್ರಾತಿನಿಧ್ಯ ಕಾಯ್ದೆ,1951ರ ಕಲಂ 29ಬಿಗೆ ತಿದ್ದುಪಡಿಯನ್ನು ತರುವ ಮೂಲಕ ಚುನಾವಣಾ ಬಾಂಡ್‌ಗಳ ಲಾಭಗಳನ್ನು ಕೆಲವೇ ರಾಜಕೀಯ ಪಕ್ಷಗಳಿಗೆ ಸೀಮಿತಗೊಳಿಸಿತ್ತು.

ಚುನಾವಣಾ ಬಾಂಡ್‌ಗಳನ್ನು ವಿತರಿಸುವ ಹೊಣೆಯನ್ನು ಎಸ್‌ಬಿಐಗೆ ವಹಿಸಲಾಗಿದ್ದು,ಕೇಂದ್ರ ಸರಕಾರವು ಈ ಬಾಂಡ್‌ಗಳ ವೆಚ್ಚವನ್ನು ಎಸ್‌ಬಿಐಗೆ ಮರುಪಾವತಿಸುವುದನ್ನು ಕಾನೂನು ಸಚಿವಾಲಯವು ಆಕ್ಷೇಪಿಸಿತ್ತು. ಮೇ 2019ರವರೆಗೆ ಕೇಂದ್ರವು ಬಾಂಡ್‌ಗಳ ಮಾರಾಟಕ್ಕೆ ಕಮಿಷನ್ ರೂಪದಲ್ಲಿ 3.24 ಕೋ.ರೂ.ಗಳನ್ನು ಎಸ್‌ಬಿಐಗೆ ಪಾವತಿಸಿರುವುದನ್ನು ಆರ್‌ಟಿಐ ದಾಖಲೆಗಳು ಬಹಿರಂಗಗೊಳಿಸಿವೆ.

ಭಾರದ್ವಾಜ್ ಅವರು ಆರ್‌ಟಿಐ ಕಾಯ್ದೆಯಡಿ ಪಡೆದುಕೊಂಡಿದ್ದ ಸರಕಾರಿ ದಾಖಲೆಗಳ ವಿಶ್ಲೇಷಣೆಯು ಈ ವಿಷಯಗಳನ್ನು ಬೆಳಕಿಗೆ ತಂದಿವೆ.

ಆಗಿನ ವಿತ್ತಸಚಿವ ಅರುಣ್ ಜೇಟ್ಲಿ ಅವರು 2018,ಜ.2ರಂದು ಚುನಾವಣಾ ಬಾಂಡ್‌ಗಳ ಕುರಿತು ಸಂಸತ್ತಿನಲ್ಲಿ ಹೇಳಿಕೆಯನ್ನು ನೀಡಲು ಉದ್ದೇಶಿಸಿದ್ದರು. ಇದಕ್ಕೆ ಪೂರ್ವಭಾವಿಯಾಗಿ ಆಗಿನ ಹಣಕಾಸು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸುಭಾಷಚಂದ್ರ ಗರ್ಗ್ ಅವರ ಅಧ್ಯಕ್ಷತೆಯಲ್ಲಿ ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಎಸ್‌ಬಿಐ ಕಾನೂನು ಅಧಿಕಾರಿಗಳ ಸಭೆಯು ನಡೆದಿತ್ತು. ಅಚ್ಚರಿಯ ವಿಷಯವೆಂದರೆ ಈ ಸಭೆಯಲ್ಲಿ ಕಾನೂನು ಸಚಿವಾಲಯವು ತನ್ನೆಲ್ಲ ಆಕ್ಷೇಪಗಳನ್ನು ಹಿಂದೆಗೆದುಕೊಂಡಿತ್ತು. ಇದಕ್ಕೆ ಕಾರಣಗಳನ್ನು ಸಭೆಯ ನಡಾವಳಿಗಳಲ್ಲಿ ಉಲ್ಲೇಖಿಸಿಲ್ಲ.

ಚುನಾವಣಾ ಬಾಂಡ್‌ಗಳನ್ನು ಆಕರ್ಷಕವಾಗಿಸಲು ಸರಕಾರವು ಕಾನೂನು ಸಚಿವಾಲಯದ ಆಕ್ಷೇಪವಿದ್ದರೂ ಅವುಗಳಿಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿಯನ್ನು ನೀಡಿತ್ತು ಎನ್ನುವುದೂ ಬೆಳಕಿಗೆ ಬಂದಿದೆ.

ಆರ್‌ ಬಿಐನಿಂದ ಹಿಡಿದು ಚುನಾವಣಾ ಆಯೋಗ ಮತ್ತು ಕಾನೂನು ಸಚಿವಾಲಯದವರೆಗೆ ಚುನಾವಣಾ ಬಾಂಡ್ ಯೋಜನೆಯಲ್ಲಿ ಭಾಗಿಯಾದ ಪ್ರತಿಯೊಂದು ಸಂಸ್ಥೆಯೂ ಸರಕಾರವು ಯೋಜನೆಯನ್ನು ಜಾರಿಗೊಳಿಸುತ್ತಿರುವ ರೀತಿಯ ಬಗ್ಗೆ ಆಕ್ಷೇಪಗಳನ್ನೆತ್ತಿದ್ದವು. ಆದರೆ ಕಾನೂನುಗಳನ್ನು ತಿದ್ದುಪಡಿಗೊಳಿಸುವ ಮೂಲಕ ಅಥವಾ ಈ ಆಕ್ಷೇಪಗಳನ್ನು ಕಡೆಗಣಿಸುವ ಮೂಲಕ ಚುನಾವಣಾ ಬಾಂಡ್‌ಗಳನ್ನು ಹೊರಡಿಸಲು ಸರಕಾರವು ತನ್ನ ಮೂಗಿಗೆ ನೇರವಾಗಿ ನಡೆದುಕೊಂಡಿತ್ತು.

ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದ ಮೇಲೆಯೇ ಈಗ ಎಲ್ಲ ಆಶಯಗಳು ಕೇಂದ್ರಿಯವಾಗಿವೆ. ಕೊನೆಯ ವಿಚಾರಣೆ ಎಪ್ರಿಲ್ 2019ರಲ್ಲಿ ನಡೆದಿದ್ದು,ಮುಂದಿನ ವಿಚಾರಣೆ ಜ.2020ರಲ್ಲಿ ನಡೆಯುವ ನಿರೀಕ್ಷೆಯಿದೆ.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News