ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಶೂಟೌಟ್: ಗುಂಡಿನ ದಾಳಿಗೆ ಇಬ್ಬರು ಬಲಿ, ಒಬ್ಬನಿಗೆ ತೀವ್ರ

Update: 2019-12-05 17:42 GMT

ಲಾಸ್‌ಏಂಜೆಲ್ಸ್, ಡಿ.5: ಹವಾಯಿಯ ಇತಿಹಾಸ ಪ್ರಸಿದ್ಧ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಬುಧವಾರ ಅಮೆರಿಕದ ಯೋಧನೊಬ್ಬ ಮನಬಂದಂತೆ ಗುಂಡು ಹಾರಿಸಿ ಇಬ್ಬರನ್ನು ಹತ್ಯೆಗೈದು, ಇನ್ನೊಬ್ಬನನ್ನು ಗಾಯಗೊಳಿಸಿದ್ದಾನೆ. ಆನಂತರ ತನಗೆ ತಾನೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತಪಟ್ಟವರಿಬ್ಬರೂ ರಕ್ಷಣಾ ಇಲಾಖೆಯ ನಾಗರಿಕ ಸೇವಾ ಉದ್ಯೋಗಿಗಳೆಂದು ತಿಳಿದುಬಂದಿದೆ. ಗುಂಡೇಟಿನಿಂದ ಗಾಯಗೊಂಡಿರುವ ವ್ಯಕ್ತಿಯ ಸ್ಥಿತಿ ಸ್ಥಿರವಾಗಿದ್ದು ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಸ್ಥಳೀಯ ಕಾಲಮಾನ ಬುಧವಾರ ಮಧ್ಯಾಹ್ನ 2:30ರ ವೇಳೆಗೆ ಶೂಟೌಟ್ ನಡೆದಿದ್ದಾಗಿ ತಿಳಿದುಬಂದಿದೆ. ಘಟನೆಯ ಬಳಿಕ ಸುಮಾರು ಒಂದು ತಾಸಿಗೂ ಅಧಿಕ ಸಮಯದವರೆಗೆ ನೌಕಾನೆಲೆಯನ್ನು ಮುಚ್ಚುಗಡೆಗೊಳಿಸಲಾಗಿತ್ತೆಂದು ಅಧಿಕೃತ ಮೂಲಗಳು ತಿಳಿಸಿವೆ.

ಗುಂಡುಹಾರಾಟ ನಡೆಸಿದಾತ ಅಮೆರಿಕ ನೌಕಾಪಡೆಯ ಯೋಧನೆಂದು ಗುರುತಿಸಲಾಗಿರುವುದಾಗಿ ಪರ್ಲ್‌ ಹಾರ್ಬರ್ ನೌಕಾನೆಲೆ ಟ್ವೀಟ್ ಮಾಡಿದೆ.

ಶೂಟೌಟ್ ಘಟನೆಯ ಬಗ್ಗೆ ತನಿಖೆಗೆ ಆಜ್ಞಾಪಿಸಲಾಗಿದೆಯೆಂದು ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಾಯುಪಡೆ ಮುಖ್ಯಸ್ಥ ಬಧೌರಿಯಾ ಪಾರು

ಹೊಸದಿಲ್ಲಿ,ಡಿ.2: ಹವಾಯಿಯ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಬುಧವಾರ ನಡೆದ ಶೂಟ್‌ಔಟ್ ವೇಳೆ, ಸಮೀಪದಲ್ಲೇ ಇದ್ದ ಭಾರತೀಯ ವಾಯುಪಡೆ ವರಿಷ್ಠ ಆರ್.ಕೆ.ಎಸ್.ಬಧೌರಿಯಾ ಹಾಗೂ ಅವರ  ತಂಡದ ಇತರ ಅಧಿಕಾರಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ.

ಶೂಟೌಟ್ ನಡೆದ ವೇಳೆ ಬಧೌರಿಯಾ ಹಾಗೂ ಭಾರತೀಯ ವಾಯುಪಡೆ ತಂಡದ ಪ್ರತಿನಿಧಿಗಳು ಪರ್ಲ್‌ ಹಾರ್ಬರ್ ನೌಕಾನೆಲೆಯ ಸಮೀಪದಲ್ಲೇ ಇರುವ ಹಿಕ್‌ಹ್ಯಾಮ್ ವಾಯುನೆಲೆಯಲ್ಲಿ ಇದ್ದುದಾಗಿ ಅವು ಹೇಳಿವೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಮೂಲಗಳು ಹೇಳಿವೆ.

 ಬದೌರಿಯಾ ಹಾಗೂ ವಾಯುಪಡೆ ಅಧಿಕಾರಿಗಳ ತಂಡವು ನೌಕಾನೆಲೆಯಲ್ಲಿ ನಡೆಯುತ್ತಿರುವ ಪೆಸಿಫಿಕ್ ವಾಯುಪಡೆ ಮುಖ್ಯಸ್ಧರ ಸಮಾವೇಶದಲ್ಲಿ ಪಾಲ್ಗೊಳ್ಳಲು ಪರ್ಲ್‌ ಹಾರ್ಬರ್ ನೌಕಾನೆಲೆಗೆ ಆಗಮಿಸಿದ್ದರು. ಈ ಸಮಾವೇಶದಲ್ಲಿ 21 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇಂತಹ ಸಂದರ್ಭದಲ್ಲೇ ಗುಂಡಿನ ದಾಳಿ ನಡೆದಿರುವುದು ಅಮೆರಿಕವನ್ನು ತೀವ್ರ ಮುಜುಗರಕ್ಕೀಡುಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News