ಪ್ರಾಬಲ್ಯ ಮುಂದುವರಿಸಿದ ಬ್ಯಾಡ್ಮಿಂಟನ್ ಆಟಗಾರರು

Update: 2019-12-05 18:28 GMT

ಪೊಖಾರ,ಡಿ.5: ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಶಟ್ಲರ್‌ಗಳು ತಮ್ಮ ಪ್ರಾಬಲ್ಯ ಮುಂದುವರಿಸಿದ್ದು, ಅಶ್ಮಿತಾ ಚಾಲಿಹಾ ಹಾಗೂ ಗಾಯತ್ರಿ ಗೋಪಿಚಂದ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.

ಗುರುವಾರ ಇಲ್ಲಿ ನಡೆದ ಮೊದಲ ಸೆಮಿ ಫೈನಲ್‌ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಅಶ್ಮಿತಾ ಶ್ರೀಲಂಕಾದ ಎದುರಾಳಿ ಅಚಿನಿ ರತ್ನಸಿರಿ ಅವರನ್ನು 21-5, 21-7 ಗೇಮ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಅಂತಿಮ-4ರ ಪಂದ್ಯದಲ್ಲಿ ಗಾಯತ್ರಿ ಶ್ರೀಲಂಕಾದ ಡಿಲ್ಮಿ ಡಿಯಾಸ್ ವಿರುದ್ಧ 21-17, 21-14 ಗೇಮ್‌ಗಳ ಅಂತರದಿಂದ ಗೆಲುವು ದಾಖಲಿಸಿದರು.

ಭಾರತ ಪುರುಷರ ಸಿಂಗಲ್ಸ್ ವಿಭಾಗದಲ್ಲೂ ಪಾರಮ್ಯ ಮೆರೆದಿದ್ದು ಆರ್ಯಮಾನ್ ಟಂಡನ್ ಹಾಗೂ ಸಿರಿಲ್ ವರ್ಮಾ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಅಗ್ರ ಶ್ರೇಯಾಂಕದ ಸಿರಿಲ್ ವರ್ಮಾ ಶ್ರೀಲಂಕಾದ ಡಿನುಕಾ ಕರುಣರತ್ನೆ ಅವರನ್ನು 21-9, 21-12 ನೇರ ಗೇಮ್‌ಗಳಿಂದ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಆರ್ಯಮಾನ್ ನೇಪಾಳದ ದ್ವಿತೀಯ ಶ್ರೇಯಾಂಕದ ರತ್ನಜಿತ್ ತಮಂಗ್‌ರನ್ನು 21-18, 14-21, 21-18 ಅಂತರದಿಂದ ಮಣಿಸಿದ್ದಾರೆ.

ಪುರುಷರ ಡಬಲ್ಸ್ ಸೆಮಿ ಫೈನಲ್‌ನಲ್ಲಿ ಕೃಷ್ಣ ಗರಗ ಹಾಗೂ ಧುೃವ ಕಪಿಲ ಪಾಕಿಸ್ತಾನದ ಜೋಡಿ ಮುಹಮ್ಮದ್ ಆತಿಖ್ ಹಾಗೂ ರಾಜಾ ಮುಹಮ್ಮದ್ ಹಸ್ನಿನ್‌ರನ್ನು 21-15, 21-07 ಗೇಮ್‌ಗಳ ಅಂತರದಿಂದ ಮಣಿಸಿದರು.

  ಕೃಷ್ಣ-ಧ್ರುವ ಜೋಡಿ ಫೈನಲ್‌ನಲ್ಲಿ ಶ್ರೀಲಂಕಾದ ಡಯಾಸ್ ಅಂಗೊಡ ಹಾಗೂ ಡಿ.ಥರಿಂಡು ಡುಲ್ಲಿವ್‌ರನ್ನು ಎದುರಿಸಲಿದ್ದಾರೆ. ಈ ಜೋಡಿ ನೇಪಾಳದ ಪ್ರಿನ್ಸ್ ದಹಾಲ್ ಹಾಗೂ ಪಿ.ಮಹಾರಾಜನ್‌ರನ್ನು 21-11, 21-19 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News