ಈರುಳ್ಳಿ ಬೆಲೆ ದ್ವಿಶತಕದತ್ತ ದಾಪುಗಾಲು

Update: 2019-12-06 03:41 GMT

ಹೊಸದಿಲ್ಲಿ, ಡಿ.6: ದೇಶದಲ್ಲಿ ಈರುಳ್ಳಿ ಬೆಲೆ ಗಗನಮುಖಿಯಾಗಿ ಮುಂದುವರಿದಿದ್ದು, ಪಣಜಿಯಲ್ಲಿ ಗುರುವಾರ ಪ್ರತಿ ಕೆ.ಜಿ.ಗೆ 165 ರೂಪಾಯಿ ಬೆಲೆ ದಾಖಲಾಗಿದೆ. ದೇಶದ ಕೆಲವೆಡೆ ಪ್ರತಿ ಕೆ.ಜಿ. ಈರುಳ್ಳಿಗೆ 180 ರೂಪಾಯಿ ಗರಿಷ್ಠ ಬೆಲೆ ದಾಖಲಾಗಿತ್ತು ಎಂದು ಹೇಳಲಾಗಿದೆ.

ಸರ್ಕಾರ ಕನಿಷ್ಠ 35 ಸಾವಿರ ಟನ್ ಆಮದು ಈರುಳ್ಳಿಯನ್ನು ಮುಂದಿನ ವಾರದ ವೇಳೆಗೆ ಪಡೆಯುವ ನಿರೀಕ್ಷೆ ಇದ್ದು, ದೇಶಾದ್ಯಂತ ಎಲ್ಲ ಮಂಡಿಗಳಲ್ಲಿ ದೇಶೀಯ ಈರುಳ್ಳಿ ಲಭ್ಯತೆ ಹೆಚ್ಚುವ ವರೆಗೂ ಬೆಲೆಏರಿಕೆ ಪ್ರವೃತ್ತಿ ಮುಂದುವರಿಯುವ ಸಾಧ್ಯತೆ ಇದೆ.

ಪ್ರಸಕ್ತ ಹಂಗಾಮಿನಲ್ಲಿ ಈರುಳ್ಳಿ ಬೆಳೆ ಶೇಕಡ 26ರಷ್ಟು ಕುಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ನೇತೃತ್ವದ ಸಚಿವರ ತಂಡ ಪರಿಸ್ಥಿತಿಯ ಪರಾಮರ್ಶೆ ನಡೆಸಿದೆ. ಸರ್ಕಾರಿ ಹಾಗೂ ಖಾಸಗಿ ವಲಯ ಈರುಳ್ಳಿ ಆಮದು ಮಾಡಿಕೊಳ್ಳಲು ಮುಂದಾಗಿದ್ದರೂ, ಅಗತ್ಯತೆಯನ್ನು ಪೂರೈಸಲು ಇದು ಸಾಕಾಗುತ್ತಿಲ್ಲ. ಆದರೆ ಲಭ್ಯತೆ ಹೆಚ್ಚಿದಲ್ಲಿ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಕಳೆದ ಹತ್ತು ದಿನಗಳಲ್ಲಿ ದೆಹಲಿಯಲ್ಲಿ ಈರುಳ್ಳಿ ಬೆಲೆ 76 ರೂಪಾಯಿಗಳಿಂದ 94 ರೂಪಾಯಿಗೆ, ಮುಂಬೈನಲ್ಲಿ 89 ರೂಪಾಯಿಯಿಂದ 120 ರೂಪಾಯಿಗೆ, ಚೆನ್ನೈನಲ್ಲಿ 59 ರೂಪಾಯಿಯಿಂದ 120 ರೂಪಾಯಿಗೆ, ಕೊಲ್ಕತ್ತಾದಲ್ಲಿ 90ರಿಂದ 120 ರೂಪಾಯಿಗೆ ಹಾಗೂ ಪಣಜಿಯಲ್ಲಿ 100ರಿಂದ 165 ರೂಪಾಯಿಗೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News