ಪೊಲೀಸರ ಆಯುಧ ಪ್ರದರ್ಶನಕ್ಕಿರುವುದಲ್ಲ: ಸಂಸತ್ತಿನಲ್ಲಿ ಪ್ರತಿಧ್ವನಿಸಿದ ತೆಲಂಗಾಣ ಎನ್‌ಕೌಂಟರ್

Update: 2019-12-06 17:24 GMT

ಹೊಸದಿಲ್ಲಿ, ಡಿ. 6: ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ನಡೆಸಿರುವ ಬಗ್ಗೆ ಶುಕ್ರವಾರ ಸಂಸತ್ತಿನಲ್ಲಿ ವ್ಯಾಪಕ ಚರ್ಚೆ ನಡೆಯಿತು. ಅಪರಾಧ ನಡೆದ ಸ್ಥಳದಲ್ಲಿ ತನಿಖೆ ನಡೆಸಲು ತೆರಳಿದ ಸಂದರ್ಭ ದಾಳಿ ನಡೆಸಿ, ಆಯುಧಗಳನ್ನು ಕಿತ್ತುಕೊಂಡ ಆರೋಪಿಗಳನ್ನು ಗುಂಡು ಹಾರಿಸಿ ಹತ್ಯೆಗೈದ ತೆಲಂಗಾಣ ಪೊಲೀಸರ ಕಾರ್ಯದ ಬಗ್ಗೆ ಸಂಸದರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ಆರೋಪಿಗಳನ್ನು ಗುಂಡು ಹಾರಿಸಿ ಹತ್ಯೆಗೈದಿರುವ ಪೊಲೀಸರ ನಡೆಯನ್ನು ಬಿಜೆಪಿಯ ಮೀನಾಕ್ಷಿ ಲೇಖಿ ಪ್ರಶಂಸಿಸಿದರು. ‘‘ಪೊಲೀಸರಿಗೆ ನೀಡಿದ ಆಯುಧ ಪ್ರದರ್ಶನಕ್ಕೆ ಇರುವುದಲ್ಲ’’ ಎಂದು ಅವರು ಹೇಳಿದ್ದಾರೆ. ಅದಕ್ಕಿಂತ ಮೊದಲು ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸಂಸದ ಸುಗತೊ ರಾಯ್, ತಾನು ಎನ್‌ಕೌಂಟರ್‌ಗೆ ಬೆಂಬಲ ನೀಡುವುದಿಲ್ಲ. ನ್ಯಾಯದಾನ ವ್ಯವಸ್ಥೆಯನ್ನು ತ್ವರಿತಗೊಳಿಸಬೇಕಾದ ಅಗತ್ಯ ಇದೆ. ಹೈದರಾಬಾದ್‌ನಲ್ಲಿ ಅವರು ಅದನ್ನು ಎನ್‌ಕೌಂಟರ್ ಎಂದು ಕರೆಯುತ್ತಾರೆ. ಜನರು ಫೇಸ್‌ಬುಕ್‌ನಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ. ನಾನು ಎನ್‌ಕೌಂಟರ್ ಅನ್ನು ಬೆಂಬಲಿಸಲಾರೆ. ಆದರೆ, ಜನರು ಅತ್ಯಾಚಾರಿಗಳನ್ನು ಥಳಿಸಿ ಹತ್ಯೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ತ್ವರಿತವಾಗಿ ನ್ಯಾಯ ದೊರಕಿದರೆ, ಜನರು ಈ ರೀತಿ ಆಗ್ರಹಿಸಲಾರರು ಎಂದು ರಾಯ್ ಹೇಳಿದ್ದಾರೆ.

 ಶಿವಸೇನೆಯ ಅರವಿಂದ್ ಸಾವಂತ್, ಕಾನೂನು ವ್ಯವಸ್ಥೆ ನಿಧಾನವಾಗಿರದಿದ್ದರೆ, ಇದು ನಡೆಯುತ್ತಿರಲಿಲ್ಲ. ನಿರ್ಭಯಾ ಪ್ರಕರಣ 7 ವರ್ಷ ತೆಗೆದುಕೊಂಡಿತು ಎಂದರು. ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಸ್ಮೃತಿ ಇರಾನಿ, ಕಾಂಗ್ರೆಸ್‌ನಂತಹ ಪಕ್ಷಗಳು ಅತ್ಯಾಚಾರವನ್ನು ರಾಜಕೀಯಗೊಳಿಸುತ್ತಿವೆ. ನಾನು ಯಾರೊಬ್ಬರ ಹೆಸರು ಹೇಳಲಾರೆ. ಆದರೆ, ಪಕ್ಷ ಈ ಅತ್ಯಾಚಾರವನ್ನು ಪಶ್ಚಿಮಬಂಗಾಳದ ಪಂಚಾಯತ್ ಚುನಾವಣೆಯ ಆಯುಧವನ್ನಾಗಿ ಬಳಸುತ್ತಿದೆ ಎಂದರು.

ತನ್ನ ಕಠಿಣ ಹೇಳಿಕೆಯಲ್ಲಿ ಉತ್ತರಪ್ರದೇಶದ ಆಪ್ನಾದಳದ ಸಂಸದೆ ಅನುಪ್ರಿಯಾ ಪಟೇಲ್, ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಐವರು ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದನ್ನು ಉಲ್ಲೇಖಿಸಿದರು. ಇದು ಉತ್ತರಪ್ರದೇಶ ಹಾಗೂ ತೆಲಂಗಾಣದ ಸಮಸ್ಯೆ ಅಲ್ಲ. ಇಡೀ ದೇಶ ಸಮಸ್ಯೆ. ಅತ್ಯಾಚಾರಿಗಳಿಗೆ ವ್ಯವಸ್ಥೆ ಬಗ್ಗೆ ಭಯವಿಲ್ಲ. ನಿರ್ಭಯ ಪ್ರಕರಣದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಿಲ್ಲ ಎಂದು ಪಟೇಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News