ಅತ್ಯಾಚಾರದ ರಾಜಧಾನಿಯಾಗಿ ಬದಲಾಗುತ್ತಿರುವ ಭಾರತ: ರಾಹುಲ್ ಗಾಂಧಿ

Update: 2019-12-07 17:57 GMT
Photo: PTI

ತಿರುವನಂತಪುರ, ಡಿ. 7: ಭಾರತ ಜಗತ್ತಿನ ಅತ್ಯಾಚಾರದ ರಾಜಧಾನಿಯಾಗಿ ಬದಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ತನ್ನ ಕ್ಷೇತ್ರವಾದ ವಯನಾಡ್‌ನ ಸುಲ್ತಾನ್‌ಬತ್ತೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರಪ್ರದೇಶದ ಬಿಜೆಪಿ ಶಾಸಕ ಭಾಗಿಯಾಗಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ವೌನ ವಹಿಸಿರುವುದರ ಬಗ್ಗೆ ತರಾಟೆಗೆ ತೆಗೆದುಕೊಂಡರು.

 ‘‘ಭಾರತವನ್ನು ಜಗತ್ತಿನ ಅತ್ಯಾಚಾರದ ರಾಜಧಾನಿ ಎಂದು ಕರೆಯಲಾಗುತ್ತಿದೆ. ಭಾರತಕ್ಕೆ ಅದರ ಪುತ್ರಿಯರು ಹಾಗೂ ಸಹೋದರಿಯನ್ನು ನೋಡಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ವಿದೇಶಗಳು ಪ್ರಶ್ನಿಸುತ್ತಿವೆ. ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರೊಬ್ಬರು ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅದರ ಬಗ್ಗೆ ಇದುವರೆಗೆ ಒಂದೇ ಒಂದು ಮಾತನ್ನೂ ಆಡಿಲ್ಲ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 ‘‘ದೇಶಾದ್ಯಂತ ಹಿಂಸಾಚಾರ, ಕಾನೂನು ಉಲ್ಲಂಘನೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದನ್ನು ನೀವು ನೋಡುತ್ತಿರಬಹುದು. ಪ್ರತಿದಿನ ಮಹಿಳೆಯರ ಅತ್ಯಾಚಾರ, ಕಿರುಕುಳ ಹಾಗೂ ಥಳಿತದ ಬಗ್ಗೆ ನೀವು ಓದಿರುತ್ತೀರಿ. ಅಲ್ಪಸಂಖ್ಯಾತರ ಮೇಲೆ ಕೂಡ ದೌರ್ಜನ್ಯ ನಡೆಯುತ್ತಿದೆ. ದ್ವೇಷ ಭಾವನೆ ಹರಡುತ್ತಿದೆ’’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News