ಅತ್ಯಾಚಾರ ಪ್ರಕರಣಗಳ ಕ್ಷಿಪ್ರ ವಿಚಾರಣೆಗೆ 15 ರಾಜ್ಯಗಳಲ್ಲಿ ತ್ವರಿತಗತಿ ನ್ಯಾಯಾಲಯಗಳೇ ಇಲ್ಲ!

Update: 2019-12-08 03:45 GMT

ಹೊಸದಿಲ್ಲಿ: ದೇಶದಲ್ಲಿ ಅಮಾನುಷ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ, 15 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ತ್ವರಿತಗತಿ ನ್ಯಾಯಾಲಗಳಿಲ್ಲ. ಕೇಂದ್ರ ಸರ್ಕಾರ ಪದೇ ಪದೇ ಈ ಸಂಬಂಧ ನೆನಪೋಲೆ ಕಳುಹಿಸಿದ್ದರೂ ರಾಜ್ಯಗಳು ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲೈಂಗಿಕ ಹಲ್ಲೆ ಪ್ರಕರಣ ಹಾಗೂ ಪೋಕ್ಸೋ ಪ್ರಕರಣಗಳ ಕ್ಷಿಪ್ರ ವಿಚಾರಣೆಗಾಗಿ ತ್ವರಿತಗತಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಕುರಿತ ಕೇಂದ್ರದ ಪ್ರಸ್ತಾವಕ್ಕೆ ಈ ರಾಜ್ಯಗಳು ಸ್ಪಂದಿಸಲೂ ಇಲ್ಲ ಎಂದು ಹೇಳಲಾಗಿದೆ. 

ದೇಶದಲ್ಲಿ ವಿವಿಧ ಕೆಳಹಂತದ ನ್ಯಾಯಾಲಯಗಳಲ್ಲಿ ಬಾಕಿ ಇರುವ 1,66,882 ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 1023 ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಗೆ ಈ ವರ್ಷದ ಜುಲೈನಲ್ಲಿ ಪ್ರಕ್ರಿಯೆ ಆರಂಭಿಸಿತ್ತು. ನವೆಂಬರ್ 13ರಂದು ಸುಪ್ರೀಂಕೋರ್ಟ್ ಕೂಡಾ 1.60 ಲಕ್ಷ ಪೋಕ್ಸೋ ಪ್ರಕರಣಗಳ ಕ್ಷಿಪ್ರ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆಗೆ ಆದೇಶ ನೀಡಿತ್ತು.

1023 ತ್ವರಿತಗತಿ ವಿಶೇಷ ನ್ಯಾಯಾಲಯಗಳ ಪೈಕಿ 389 ನ್ಯಾಯಾಲಯಗಳನ್ನು ಕೇವಲ ಪೋಕ್ಸೋ ಪ್ರಕರಣಗಳ ವಿಚಾರಣೆಗಾಗಿಯೇ ಮೀಸಲಿಡಲು ನಿರ್ಧರಿಸಲಾಗಿತ್ತು. ಈ ನ್ಯಾಯಾಲಯಗಳು ಕನಿಷ್ಠ ಮೂರು ತಿಂಗಳಲ್ಲಿ 41-42 ಪ್ರಕರಣಗಳ ವಿಚಾರಣೆ ನಡೆಸಿ ವರ್ಷದಲ್ಲಿ 165 ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಸೂಚಿಸಲಾಗಿತ್ತು.

ಇದಾದ ನಾಲ್ಕು ತಿಂಗಳಲ್ಲಿ ಕೇವಲ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಕೇಂದ್ರದ ಜತೆ ಕೈಜೋಡಿಸಿವೆ. ನ್ಯಾಯಾಲಯ ಸ್ಥಾಪನೆಗೆ ಕಾನೂನು ಸಚಿವಾಲಯ 100 ಕೋಟಿ ರೂಪಾಯಿ ಪೈಕಿ 89.1 ಕೋಟಿ ರೂಪಾಯಿ ಮೊದಲ ಕಂತು ಬಿಡುಗಡೆ ಮಾಡಿವೆ ಎಂದು ಮೂಲಗಳು ಹೇಳಿವೆ.

ಅತ್ಯಾಚಾರ ಪ್ರಕರಣಗಳಿಗೆ ಕುಖ್ಯಾತವಾಗಿರುವ ಉತ್ತರ ಪ್ರದೇಶ ಹಾಗೂ ತೆಲಂಗಾಣ ಕೇಂದ್ರದ ಪ್ರಸ್ತಾವಕ್ಕೆ ಸ್ಪಂದಿಸಿಲ್ಲ. ಜಾರ್ಖಂಡ್, ತ್ರಿಪುರಾ, ನಾಗಲ್ಯಾಂಡ್, ಉತ್ತರಾಖಂಡ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಮಣಿಪುರ, ಕೇರಳ, ಕರ್ನಾಟಕ, ಗುಜರಾತ್, ಛತ್ತೀಸ್‍ಗಢ, ಹರ್ಯಾಣ ಮತ್ತು ದಿಲ್ಲಿ ಮಾತ್ರ ಇದುವರೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆಗೆ ಆಸಕ್ತಿ ತೋರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News