ಕೇಂದ್ರದಿಂದ 75 ಲಕ್ಷ ಜನರಿಗೆ ಸ್ವಾತಂತ್ರ್ಯ ನಿರಾಕರಣೆ: ಪಿ. ಚಿದಂಬರಂ

Update: 2019-12-08 17:36 GMT
PTI

ಹೊಸದಿಲ್ಲಿ, ಡಿ. 8: ಕಾಶ್ಮೀರ ಕಣಿವೆಯಲ್ಲಿ 75 ಲಕ್ಷ ಜನರಿಗೆ ಸ್ವಾತಂತ್ರ್ಯ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ರವಿವಾರ ಆರೋಪಿಸಿದ್ದಾರೆ ಹಾಗೂ ಕೇಂದ್ರ ಸರಕಾರವಾನ್ನು ಪ್ರತಿಗಾಮಿ ಎಂದು ಕರೆದಿದ್ದಾರೆ.

ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ 106 ದಿನಗಳ ಕಾಲ ಜೈಲಿನಲ್ಲಿದ್ದು ಬಿಡುಗಡೆಗೊಂಡ ಬಳಿಕ ಮೊದಲ ಬಾರಿ ಇಲ್ಲಿಗೆ ಆಗಮಿಸಿದ ಚಿದಂಬರಂ, ಸ್ವಾತಂತ್ರ್ಯ ದ ಗಾಳಿ ಉಸಿರಾಡಲು ತುಂಬಾ ಸಂತಸವಾಗುತ್ತಿದೆ ಎಂದರು.

‘‘ದೇಶದ ಹಲವು ಭಾಗಗಳಲ್ಲಿ ಸ್ವಾತಂತ್ರ್ಯವನ್ನು ಕಸಿಯಲಾಗಿದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ಇದೆಲ್ಲವನ್ನು ಮರೆಯಲು ಸಾಧ್ಯವಿಲ್ಲ’’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಾಶ್ಮೀರ ಕಣಿವೆಯಲ್ಲಿ 75 ಲಕ್ಷ ಜನರು ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಒಬ್ಬರಿಗೆ ಸ್ವಾತಂತ್ರ ನಿರಾಕರಿಸಿದರೆ, ಎಲ್ಲರಿಗೂ ಸ್ವಾತಂತ್ರ್ಯ ನಿರಾಕರಿಸಿದಂತೆ ಎಂದು ಅವರು ಹೇಳಿದರು.

 ಸ್ವಾತಂತ್ರ್ಯವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ನಿಮ್ಮದು ನನ್ನದು ಹಾಗೂ ನನ್ನದು ನಿಮ್ಮದು. ನಾನು ನಿಮ್ಮ ಸ್ವಾತಂತ್ರವನ್ನು ಸಂರಕ್ಷಿಸಲು ಸಾಧ್ಯವಾಗದೇ ಇದ್ದರೆ, ನೀವು ನನ್ನ ಸ್ವಾತಂತ್ರ್ಯವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ದಕ್ಷಿಣ ಭಾರತದಂತೆ ಹಾಗೂ ನಿರ್ದಿಷ್ಟವಾಗಿ ತಮಿಳುನಾಡಿನಂತೆ ಬಿಜೆಪಿಯನ್ನು ವಿರೋಧಿಸುವ ಪ್ರಜ್ಞೆಯನ್ನು ರಾಷ್ಟ್ರದ ಉಳಿದ ಭಾಗ ಬೆಳೆಸಿಕೊಂಡರೆ, ದೇಶ ನಿಜವಾಗಿಯೂ ಸ್ವಾತಂತ್ರ ಪಡೆಯಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News