ದತ್ತಾಂಶ ರಾಷ್ಟ್ರೀಯ ಆಸ್ತಿ : ಸ್ವದೇಶಿ ಜಾಗರಣ್ ಮಂಚ್

Update: 2019-12-08 18:47 GMT

ಹೊಸದಿಲ್ಲಿ, ಡಿ.9: ದತ್ತಾಂಶ(ಡೇಟಾ)ವು ರಾಷ್ಟ್ರೀಯ ಆಸ್ತಿಯಾಗಿದ್ದು ಅದನ್ನು ಸುರಕ್ಷಿತವಾಗಿ ಇರಿಸಬೇಕು ಎಂದು ಆರೆಸ್ಸೆಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್(ಎಸ್‌ಜೆಎಂ) ಹೇಳಿದೆ.

ದತ್ತಾಂಶ ಸಾರ್ವಭೌಮತ್ವ ಮತ್ತು ದತ್ತಾಂಶ ರಾಷ್ಟ್ರೀಯತೆ ಇಂದಿನ ಅಗತ್ಯವಾಗಿದ್ದು ಪರ್ಯಾಯ ಪಾವತಿ ವ್ಯವಸ್ಥೆಗಳಾದ ಸಾಮಾಜಿಕ ಮಾಧ್ಯಮ ವೇದಿಕೆ ಹಾಗೂ ಸೇವಾ ಸಮೂಹಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದು ಎಸ್‌ಜೆಎಂ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ.

ದೇಶದಲ್ಲಿ ಉತ್ಪಾದನೆಯಾಗಿರುವ ಡೇಟಾಗಳು ರಾಷ್ಟ್ರದ ಆಸ್ತಿಯಾಗಿದ್ದು ಇದನ್ನು ಸೂಕ್ತವಾಗಿ ರಕ್ಷಿಸಿಡಬೇಕು. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವ್ಯಾಪಾರ ಮಾತುಕತೆ ಸಂದರ್ಭ ದತ್ತಾಂಶ ಸಾರ್ವಭೌಮತ್ವಕ್ಕೆ ಧಕ್ಕೆಯಾಗಬಾರದು ಎಂದು ಎಸ್‌ಜೆಎಂನ ಸಹ ಸಂಯೋಜಕ ಅಶ್ವನಿ ಮಹಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದತ್ತಾಂಶ ಭಾರತದ ಭೌಗೋಳಿಕ ವ್ಯಾಪ್ತಿಯೊಳಗೇ ಇರಬೇಕು ಮತ್ತು ಇವನ್ನು ಇಲ್ಲಿಯೇ ಕಂಪ್ಯೂಟರ್‌ನಲ್ಲಿ ಶೇಖರಿಸಿಡಬೇಕು. ಭಾರತ ತನ್ನದೇ ಆದ ಕಂಪ್ಯೂಟರ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರಬೇಕು.

ಮಾಹಿತಿ ಕದಿಯುವ ಆ್ಯಪ್‌ಗಳನ್ನು ಗುರುತಿಸಿ ಇದರ ವಿರುದ್ಧ ಸರಕಾರ ಜಾಗರೂಕತೆ ವಹಿಸಬೇಕು. ಇಂತಹ ಆ್ಯಪ್‌ಗಳನ್ನು ಬಳಸಿ ಮಾಹಿತಿ ಕದಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಾಜನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News