ರಾಷ್ಟ್ರೀಯತೆಯ ಗುಂಗಿನಲ್ಲಿ ಆಧುನಿಕ ಜಗತ್ತು

Update: 2019-12-09 03:36 GMT

           ದಿ| ಡಾ. ವಸು ಮಳಲಿ

ರಾಷ್ಟ್ರೀಯತೆಯ ಕಲ್ಪನೆಗೆ ಧರ್ಮ ಬೆರೆತರೆ ಮಾದಕ ದ್ರವ್ಯಗಳೆರಡನ್ನು ಬೆರೆಸಿ ಒಂದೇ ಬಾರಿಗೆ ಕುಡಿದಂತೆ. ಧರ್ಮವಾಗಲಿ ರಾಷ್ಟ್ರೀಯತೆಯಾಗಲಿ ಎರಡೂ ಮತ್ತೇರಿಸುವ ವಿಚಾರಗಳೆ. ಭಾರತ ಮಾತೆಯ ಕಲ್ಪನೆ ಹುಟ್ಟಲು ಕಾರಣವಾದವರೂ ಬ್ರಿಟಿಷರೇ ಎಂದರೆ ಸೋಜಿಗವೆನಿಸಬಹುದು. ರಾಷ್ಟ್ರೀಯತೆಯ ಚಿಂತನೆ ಆರಂಭವಾಗಿ ಇಲ್ಲಿಗೆ ಇನ್ನೂರ ಐವತ್ತು ವರ್ಷಗಳೇ ಸಂದಿವೆ. ಫ್ರಾನ್ಸ್‌ನ ಮಹಾಕ್ರಾಂತಿಯ ಸಂದರ್ಭದಲ್ಲಿ ಹೊಗೆಯಾಡಿದ ಈ ಚಿಂತನೆ ನೆಪೋಲಿಯನ್ನನ ಕಾಲಕ್ಕೆ ಹತ್ತಿ ಉರಿಯಿತು.

ಹುಬ್ಬಳ್ಳಿ ಸಮೀಪದ ಹಳ್ಳಿಯೊಂದರಲ್ಲಿ ಭಾರತ ಮಾತೆಗೆ ದೇವಾಲಯವನ್ನು ಕಟ್ಟಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಚಿಕ್ಕದಾದ ಗುಡಿಯೊಳಗೆ ಪೀಠದ ಮೇಲೆ ಪುಟ್ಟದಾದ ಪ್ರತಿಮೆಗಳು ಕಾಣುತ್ತವೆ. ಅದು ಭಾರತ ಮಾತೆಯ ವಿಗ್ರಹವಂತೆ. ಗೋಡೆಯ ಮೇಲೆ ಓಂ ಸಂಕೇತ, ಮುಂಭಾಗದಲ್ಲಿ ಕಾವಿ ಬಣ್ಣದ ಬಾವುಟ. ನೋಡಿದ ಕೂಡಲೇ ಯಾರಿಗಾದರೂ ಏನಿದು ದೇಶ ಪ್ರೇಮ ಎನಿಸದಿರದು. ನಿಧಾನವಾಗಿ ಗಮನಿಸಿದರೆ ಗೋಚರವಾಗುವುದು ಇವು ರಾಷ್ಟ್ರೀಯತೆಯ ಚಿಹ್ನೆಗಳಲ್ಲ ಅದನ್ನೂ ಮೀರಿದ ಹಿಂದೂ ಧಾರ್ಮಿಕ ಸಂಕೇತಗಳು. ಮತ್ತೊಂದು ಕಡೆ ಟಿವಿಯಲ್ಲಿ ನರೇಂದ್ರ ಮೋದಿಯ ಭಾಷಣಗಳ ಸರಮಾಲೆ. ಧರ್ಮ, ಸಂಸ್ಕೃತಿ, ರಾಷ್ಟ್ರಪ್ರೇಮ, ಅಭಿವೃದ್ಧಿ ಈ ಪದಗಳು ಪುಂಖಾನುಪುಂಖವಾಗಿ ಬರುತ್ತವೆ. ಸ್ವಾತಂತ್ರ ಬಂದು ಆರೇಳು ದಶಕಗಳಾದರೂ ನೂರು ವರ್ಷಗಳ ಹಿಂದಿನ ಮಾದರಿಗಳು ಇನ್ನು ಬದಲಾಗಲಿಲ್ಲವೇ?

ರಾಷ್ಟ್ರೀಯತೆಯ ಕಲ್ಪನೆಗೆ ಧರ್ಮ ಬೆರೆತರೆ ಮಾದಕ ದ್ರವ್ಯಗಳೆರಡನ್ನು ಬೆರೆಸಿ ಒಂದೇ ಬಾರಿಗೆ ಕುಡಿದಂತೆ. ಧರ್ಮವಾಗಲಿ ರಾಷ್ಟ್ರೀಯತೆಯಾಗಲಿ ಎರಡೂ ಮತ್ತೇರಿಸುವ ವಿಚಾರಗಳೆ. ಭಾರತ ಮಾತೆಯ ಕಲ್ಪನೆ ಹುಟ್ಟಲು ಕಾರಣವಾದವರೂ ಬ್ರಿಟಿಷರೇ ಎಂದರೆ ಸೋಜಿಗವೆನಿಸಬಹುದು. ರಾಷ್ಟ್ರೀಯತೆಯ ಚಿಂತನೆ ಆರಂಭವಾಗಿ ಇಲ್ಲಿಗೆ ಇನ್ನೂರ ಐವತ್ತು ವರ್ಷಗಳೇ ಸಂದಿವೆ. ಫ್ರಾನ್ಸ್‌ನಮಹಾಕ್ರಾಂತಿಯ ಸಂದರ್ಭದಲ್ಲಿ ಹೊಗೆಯಾಡಿದ ಈ ಚಿಂತನೆ ನೆಪೋಲಿಯನ್ನನ ಕಾಲಕ್ಕೆ ಹತ್ತಿ ಉರಿಯಿತು. ಹದಿನೆಂಟನೇ ಶತಮಾನದ ಫ್ರಾನ್ಸ್‌ನ ದಾರ್ಶನಿಕರು ಹೊಸ ರಾಜಕೀಯ ಆಲೋಚನೆಯನ್ನು ಹುಟ್ಟು ಹಾಕಿದರು. ಸರ್ವಾಧಿಕಾರಿಗಳ ದರ್ಪವನ್ನು ಪ್ರಶ್ನೆ ಮಾಡಿದರು. ಈ ಆಲೋಚನೆಗಳು ರಾಜತ್ವದ ವಿರುದ್ಧ ಫ್ರೆಂಚ್‌ನ ಜನತೆ ಸಂಘಟಿತರಾಗುವಂತೆ ಮಾಡಿತು.

 ಬ್ರಿಟಿಷ್ ವಸಾಹತುವಾಗಿದ್ದ ಅಮೆರಿಕ ತನ್ನ ತಾಯ್ನಿಡಿನ ವಸಾಹತು ನೀತಿಯನ್ನು ವಿರೋಧಿಸಿತು. ಅಮೆರಿಕ ವಸಾಹತು ಆಳ್ವಿಕೆಯನ್ನು ವಿರೋಧಿಸಿ ಹೋರಾಡಿದ ಮೊದಲಿಗರಾದರು. 1776ರಲ್ಲೇ ಅವರೊಂದು ರಾಷ್ಟ್ರವಾದರು. ಆನಂತರದಲ್ಲಿ ಘಟಿಸಿದ ಫ್ರೆಂಚ್ ಮಹಾಕ್ರಾಂತಿ ಯೂರೋಪಿನಲ್ಲಿ ಹೊಸ ಅಲೆಯನ್ನೇ ರೂಪಿಸಿತು. ಕ್ರಾಂತಿಯ ಶಿಶುವೆಂದು ಕರೆದುಕೊಂಡು ನೆಪೋಲಿಯನ್ ರಾಷ್ಟ್ರ ರಾಜ್ಯಗಳ ಕಲ್ಪನೆಯನ್ನು ರೂಢಿಗೆ ತರಲು ಸಹಾಯಕನಾದನು. ಮಹತ್ವಾಕಾಂಕ್ಷೆಯ ನೆಪೋಲಿಯನ್ ಯೂರೋಪಿನ ದಿಗ್ವಿಜಯದಲ್ಲಿ ಗೆದ್ದ ಪ್ರದೇಶಗಳನ್ನು ಭಾಷೆ ಹಾಗೂ ಜನಾಂಗದ ಆಧಾರದ ಮೇಲೆ ರಾಜ್ಯಗಳಾಗಿ ರೂಪಿಸಿದನು. ಜನಾಂಗ ಆಧಾರದ ಮೇಲೆ ಮೊದಲ ಬಾರಿಗೆ ಜರ್ಮನಿಯ ಒಂದು ರಾಜ್ಯವಾಗಿ ರೂಪಿಸಿದ್ದು, ಜರ್ಮನರಲ್ಲಿ ಮೂಡಿದ ಏಕತೆಯ ಭಾವನೆ ಆಸ್ಟ್ರಿಯದಿಂದ ಹೊರಬರಲು ಸಹಕಾರಿಯಾಯಿತು. ಇಂತಹ ರಾಷ್ಟ್ರೀಯ ಭಾವನೆಯನ್ನು ಬಿತ್ತುವ ಜಾಕೋಬಿನ್ ಸಂಘಕ್ಕೆ ಟಿಪ್ಪು ಸುಲ್ತಾನ್ ಸಹ ಸದಸ್ಯನಾಗಿದ್ದನು.

 ರಾಷ್ಟ್ರೀಯತೆಯ ವಿಚಾರ ಹದಿನೆಂಟು ಹತ್ತೊಂಬತ್ತನೆಯ ಶತಮಾನದ ನೂರಾರು ವಿದ್ವಾಂಸರ, ರಾಜಕೀಯ ಧುರೀಣರ ಭಾವುಕತೆಯನ್ನು ಬೆರೆತ ಬೌದ್ಧಿಕ ಕಸರತ್ತಾಗಿತ್ತು. ರೂಸೋ, ವಾಲ್ಟೈರ್ ಮಾಂಟೆಸ್ಕುರಂತಹ ದಾರ್ಶನಿಕರಿಂದ ಆರಂಭವಾದ ಚರ್ಚೆ, ಹಲವು ರೂಪಗಳನ್ನು ಪಡೆದು ಕಡೆಗೆ ಹಿಟ್ಲರ್ ಮುಸ್ಸೋಲಿನಿಯಂತಹ ಸರ್ವಾಧಿಕಾರಿಗಳ ಕೈಸೇರಿ ಆರ್ಭಟಿಸಿತು. ಇದೆಲ್ಲವೂ ಚರಿತ್ರೆಯ ಪಾಠ ಮಾತ್ರವಾಗಿದ್ದರೆ ಓದಿ ಮರೆಯಬಹುದಿತ್ತು. ಆದರೆ ರಾಷ್ಟ್ರದ ಕಲ್ಪನೆ ಭೂತಾಕಾರವಾಗಿ ಬೆಳೆದು ಆಧುನಿಕ ಕಾಲದ ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ನೆಲೆಗಟ್ಟಾಗಿ ಹೋಗಿದೆ. ಅಮೂರ್ತವಾದ ‘ರಾಷ್ಟ್ರ’ ಕಲ್ಪನೆ ಶ್ರೇಷ್ಠತೆಯ ಪಾವಿತ್ರದ ಅರ್ಥ ಪಡೆದುಕೊಂಡಿದೆ. ದಿನ ಬೆಳಗಾದರೆ ಬಗೆಹರಿಯುವ ಭಾರತ ಪಾಕಿಸ್ತಾನದ ಗಡಿ ಸಮಸ್ಯೆ, ಅನುಮಾನದ ವಿರಸ, ಆಗಾಗ ಸ್ಫೋಟಿಸುವ ಉಗ್ರರ ಬಾಂಬ್ ಧಾಳಿ ಇದು ರಾಷ್ಟ್ರೀಯತೆಯ ವಿಕೃತ ಕಲ್ಪನೆಗೆ ತೆರುತ್ತಿರುವ ಬೆಲೆ, ಆಧುನಿಕತೆ ಇಂತಹ ವಿಕಾರತೆಗಳನ್ನು ಹೊತ್ತು ಸಾಗುತ್ತಿರುವುದು ಮಾತ್ರ ವಿರೋಧಾಭಾಸದ ಸಂಗತಿ.

 ಭಾರತ ನಡೆಸಿದ ವಸಾಹತು ವಿರೋಧಿ ಸ್ವಾತಂತ್ರ ಹೋರಾಟವನ್ನು ರಾಷ್ಟ್ರೀಯ ಚಳವಳಿ (ನ್ಯಾಷನಲ್ ಮೂಮೆಂಟ್) ಎಂದೇ ಕರೆಯಲಾಗುತ್ತಿದೆ. 1857ರಲ್ಲಿ ಭಾರತೀಯ ರಾಜರೂ, ಸೈನಿಕರೂ, ಜಮೀನುದಾರರು ಎಲ್ಲರೂ ಒಟ್ಟಾಗಿ ನಾನಾ ಸಾಹೇಬ್, ಝಾನ್ಸಿ ಲಕ್ಷ್ಮೀ ಬಾಯಿ ಇವರ ನೇತೃತ್ವದಲ್ಲಿ ದಂಗೆ ಎದ್ದಾಗ ಅವರು ಮೊಗಲ್ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸಬೇಕೆಂದಿದ್ದರೇ ಹೊರತು ರಾಷ್ಟ್ರವಾಗಲು ಹೊರಟಿರಲಿಲ್ಲ. ಮೊಗಲ್ ದೊರೆ ಬಹದ್ದೂರ್ ಷಾ ಝಫರ್ ಏಕತೆಯ ಸಂಕೇತವಾಗಿದ್ದರು. ಸೈನ್ಯದಲ್ಲಿ ಹಿಂದೂ ಮುಸಲ್ಮಾನರೆಲ್ಲಾ ಒಂದಾಗಿ ಹೋರಾಡಿದ್ದರು.

  ಇದೇ ಹೊತ್ತಿಗೆ ಯೂರೋಪಿನಲ್ಲಿ ಆದ ಬೆಳವಣಿಗೆಯಲ್ಲಿ ಒಂದು ಭಾಷೆ, ಒಂದು ಜನಾಂಗ, ಒಂದು ಧರ್ಮಕ್ಕೆ ಸೇರಿದ ಜನ ಒಂದು ಪ್ರದೇಶದಲ್ಲಿ ಬದುಕಿದ್ದು ತಾವು ಒಂದು ಎಂಬ ಭಾವನೆಯನ್ನು ಹೊಂದುವುದನ್ನು ರಾಷ್ಟ್ರ ಎಂದು ವ್ಯಾಖ್ಯಾನಿಸತೊಡಗಿದ್ದರು. ತಲೆಮಾರುಗಳಿಂದ ತಾವು ಒಂದು ಸಮೂಹವಾಗಿ ಬದುಕಿದ ಆ ಭಾವವೇ ರಾಷ್ಟ್ರವೆಂದು ವಿವರಿಸಿದರು. ವಾಸ್ತವದಲ್ಲಿ ಫ್ರಾನ್ಸ್‌ನಲ್ಲಿದ್ದ ಉಪಭಾಷಿಕರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು. ಇಟಲಿ ಒಂದು ರಾಷ್ಟ್ರವಾಗಬೇಕೆಂದು ಏಕೀಕರಣ ಹೋರಾಟ ಆರಂಭವಾದಾಗ ಇಟಲಿ (ಇತಾಲಿಯ) ಎಂದರೇನೆಂದು ಎಷ್ಟೋ ಜನರಿಗೆ ತಿಳಿದೇ ಇರಲಿಲ್ಲ . ರಾಜನ ಹೊಸ ಹೆಂಡತಿಯ ಹೆಸರಿರಬೇಕೆಂದು ಕೇಳಿದವರೂ ಇದ್ದರು.

ನಾನಾ ಬಗೆಯ ಭಾಷೆ, ಬದುಕನ್ನು ಹೊಂದಿದ ಜನರನ್ನು ರಾಷ್ಟ್ರದ ಹೆಸರಲ್ಲಿ ಒಂದು ಗೂಡಿಸಿದರು. ಬಹುಶಃ ಧರ್ಮವೊಂದೇ ಅವರಿಗಿದ್ದ ಸಾಮಾನ್ಯ ವಿಚಾರ. ಅವರೆಲ್ಲ ಕ್ರೈಸ್ತರಾಗಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರದ ಕಲ್ಪನೆಯನ್ನು ಬಲವಾಗಿ ನಂಬಿದ್ದ ನಾಯಕರು ಅವರ ಭಾಷಣಗಳಿಂದ ನಂಬಿಸಿದ್ದರು.

 ಈ ಅಬ್ಬರ ಭಾರತೀಯರ ಕವಿಯನ್ನೂ ಮುಟ್ಟಿತ್ತು. ಭಾರತೀಯರಿಗಿದ್ದ ಸಮಸ್ಯೆಯೆಂದರೆ ಯೂರೋಪಿನವರಂತೆ ಹೇಳಿಕೊಳ್ಳಲು ಒಂದು ‘ಧರ್ಮ’ವಿರಲಿಲ್ಲ. ಯೂರೋಪಿನವರ ಧರ್ಮದ ಕಲ್ಪನೆ ಸ್ಪಷ್ಟವಾಗಿತ್ತು. ಒಬ್ಬ ಪ್ರವಾದಿ, ಒಂದು ಧರ್ಮಗ್ರಂಥದಲ್ಲಿ ನಂಬಿಕೆ ಹೊಂದಿರುವುದು. ಆ ಲೆಕ್ಕಕ್ಕೆ ಇಸ್ಲಾಮ್ ಸಹ ಒಂದು ಧರ್ಮವಾಗಿತ್ತು. ಈ ಹೊತ್ತಿಗೆ ಭಾರತದ ಸಮಾಜ ಸುಧಾರಕರು ಹಿಂದೂ ಧರ್ಮವನ್ನು ವ್ಯಾಖ್ಯಾನಿಸ ತೊಡಗಿದರು. ಆರ್ಯ ಸಮಾಜದಲ್ಲಿ ಆರಂಭವಾದ ಹಿಂದೂ ಧರ್ಮದ ವ್ಯಾಖ್ಯಾನ ಹಿಂದೂ ಮಹಾಸಭಾದಲ್ಲಿ ವಿಸ್ತರಿಸಿ ರಾಜಕೀಯಗೊಂಡಿತು. ಸಂಸ್ಕೃತ ಭಾಷೆ, ವೇದ ಕಾಲೀನ ಸಾಹಿತ್ಯ, ಯಜ್ಞ ಯಾಗಾದಿಗಳು ಇವೆಲ್ಲವನ್ನು ಹಿಂದು ಸಂಸ್ಕೃತಿ ಎಂದು ವಿವರಿಸಲಾಯಿತು. ವಿವರಿಸಿದ್ದು ವೈದಿಕ ಬದುಕನ್ನು. ಆದರೆ ಹೇಳಿದ್ದು ಮಾತ್ರ ಅದು ಹಿಂದೂ ಧರ್ಮವೆಂದು. ಭಿನ್ನ ಭಾಷೆ, ಭಿನ್ನ ಸಂಸ್ಕೃತಿಯುಳ್ಳ ಈ ನಾಡಿನಲ್ಲಿ ಉತ್ತರದಿಂದ ದಕ್ಷಿಣ ದವರೆಗೆ ಇದ್ದ ಸಾಮ್ಯತೆ ಎಂದರೆ ಜಾತಿ ಪದ್ಧತಿ. ಹಾಗಾಗಿ ಇಂತಹ ಸಂಕೀರ್ಣವಾದ ಪ್ರಶ್ನೆಗಳಿಗೆ ವಾಸ್ತವ ನೆಲೆಯಲ್ಲಿ ಕಾಣದ ಅರ್ಥಕ್ಕೆ ಚರಿತ್ರೆ, ಪುರಾಣ, ಅಧ್ಯಾತ್ಮ ಭಾಷೆಯಲ್ಲಿ ಉತ್ತರ ಹುಡುಕಿಕೊಂಡವರು ಸಾವರ್ಕರ್. ರಾಷ್ಟ್ರೀಯತೆಯ ಸಮರ್ಥನೆಗೆ ಹೊರಟ ಸಾವರ್ಕರ್ ಹಿಂದೂ ರಾಷ್ಟ್ರೀಯತೆಯ ಘೋಷಣಾ ವಾಕ್ಯದೊಂದಿಗೆ ಹೊರಬಂದರು. ‘ಹಿಂದೂ ಒಂದು ಧರ್ಮವಲ್ಲ. ಅದು ರಾಷ್ಟ್ರವೆಂದರು. ‘ಹಿಂದೂ ರಾಷ್ಟ್ರೀಯತೆ’ಯ ವಾದದಲ್ಲಿ ಈ ಬಾಡು ಹಿಂದೂಗಳಿಗೆ ಮಾತ್ರ ಸೇರಬೇಕು. ಆ ಹಿಂದೂಗಳು ಯಾರೆಂದು ಅವರು ಗುರುತಿಸಿದ್ದರು. ಈವರೆಗೆ ಹಿಂದೂಸ್ಥಾನಿ ಎಂದು ಕರೆಸಿಕೊಳ್ಳುತ್ತಿದ್ದ ಮುಸಲ್ಮಾನರು ಶತ್ರುಗಳಾದರು. ಮುಸಲ್ಮಾನರನ್ನೂ ವಿದೇಶಿಯರೆಂದು ಮಂಡಿಸಿದರು. ಈ ನಾಡಿನಲ್ಲೇ ಹುಟ್ಟಿ ಬೆಳೆದು ಜೊತೆಯಲ್ಲೇ ಬದುಕಿದ ಜನ ಇದ್ದಕ್ಕಿದ್ದಂತೆ ಹೊರಗಿನವರಾಗಿ ಕಾಣಿಸಿದರು.

1885ರಲ್ಲಿ ಆರಂಭವಾದ ರಾಜಕೀಯ ವೇದಿಕೆಯನ್ನು ‘ನ್ಯಾಷನಲ್’ ಕಾಂಗ್ರೆಸ್ ಎಂದು ಹೆಸರಿಸಲಾಯಿತು. ಇವರು ನಂಬಿದ ನೇಷನ್ ಕಲ್ಪನೆಯಲ್ಲಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಜನರೆಲ್ಲರೂ ಒಳಗೊಂಡಿದ್ದರು. ವಸಾಹತು ಆಳ್ವಿಕೆಯಲ್ಲಿ ಆದ ಅನ್ಯಾಯ ಅದರಲ್ಲೂ ಆರ್ಥಿಕ ಶೋಷಣೆಯನ್ನು ವಿರೋಧಿಸುವುದು ಮುಖ್ಯ ಗುರಿಯಾಗಿತ್ತು. ರಾಜಕೀಯ ದಬ್ಬಾಳಿಕೆ, ಆರ್ಥಿಕ ಶೋಷಣೆಯ ಕಾರಣಕ್ಕೆ ತಾವು ಒಂದು ಎಂದು ಭಾವಿಸಿದ್ದರಿಂದ ಅದು ರಾಜಕೀಯ ರಾಷ್ಟ್ರೀಯತೆ ಹಾಗೂ ಆರ್ಥಿಕ ರಾಷ್ಟ್ರೀಯತೆಯೆಂದು ಗುರುತಿಸಲಾಗಿದೆ. ಕಾಂಗ್ರೆಸ್ಸಿಗರು ಹಿಂದೂ ರಾಷ್ಟ್ರೀಯವಾದಿಗಳಂತೆ ಧರ್ಮ ಹಾಗೂ ಸಂಸ್ಕೃತಿಗಳಿಗಾಗಿ ಹೋರಾಡಲಿಲ್ಲ. ಹದಿನೆಂಟನೇ ಶತಮಾನದ ಯೂರೋಪಿನ ಕಲಾವಿದರು ರಾಷ್ಟ್ರವನ್ನು ಚಿತ್ರಿಸುವಾಗ ಹೆಣ್ಣಿನ ರೂಪಕದಲ್ಲಿ ಕಂಡರು. ಈ ರೂಪಕಗಳು ಜನಪ್ರಿಯವಾದವು. ಆ ಸಂದರ್ಭದಲ್ಲಿ ಹುಟ್ಟಿದ ‘ತಾಯ್ನಿಡು’(ಮದರ್ ಲ್ಯಾಂಡ್) ಸಂಬೋಧನೆ ರಾಷ್ಟ್ರೀಯತೆಯ ಅತ್ಯಂತ ಪ್ರಬಲ ಬಾವುಕ ರೂಪಕವಾಗಿ ಮೂಡಿಬಂತು. ಜರ್ಮನಿ ಫಾದರ್ ಲ್ಯಾಂಡ್ ಎಂದು ಕರೆದುಕೊಂಡರೆ; ಸಾವರ್ಕರ್ ಸಹ ಹಾಗೆ ಸಂಬೋಧಿಸುವುದನ್ನು ಬಯಸಿದ್ದರು. ಆದರೆ ಭಾರತೀಯರು ಇಂಗ್ಲಿಷರನ್ನು ಅನುಸರಿಸಿ ತಾಯ್ನಿಡಿನ ರೂಪಕಕ್ಕೆ ಹೆಚ್ಚು ಮಾರುಹೋದರು. ಹಾಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಹುಟ್ಟಿ ಬಂದವಳು ‘ಭಾರತ ಮಾತೆ’. ಅಮೂರ್ತವಾಗಿದ್ದ ರಾಷ್ಟ್ರೀಯತೆಯ ಕಲ್ಪನೆಗೆ ಮೂರ್ತ ಸ್ವರೂಪ ಬರತೊಡಗಿತು. ಬಂಗಾಳದಲ್ಲಿ ಭಾರತ ಮಾತೆಯನ್ನು ಕಾಳಿಕಾ ಮಾತೆಯಲ್ಲಿ ಬೆಸೆದು ನೋಡತೊಡಗಿದಾಗ ಕಲ್ಪಿತ ರಾಷ್ಟ್ರೀಯತೆಗೆ ಧರ್ಮವೂ ಬೆರೆತು ಜನಸಾಮಾನ್ಯರ ಮನಸ್ಸನ್ನು ಸೂರೆಗೊಳ್ಳಲು ಭಾವನೆ ಹದಗೊಂಡಿತು. ಧರ್ಮ ಹಾಗೂ ರಾಷ್ಟ್ರೀಯತೆಯನ್ನು ಬೆರೆಸಿ ವಿವರಿಸಿದ ಬಂಕಿಮರು ‘ ವಂದೇ ಮಾತರಂ’ ಗೀತೆಯನ್ನು ಬರೆದರು. ಕಾಂಗ್ರೆಸ್‌ನಲ್ಲಿದ್ದ ಉಗ್ರರಾಷ್ಟ್ರೀಯವಾದಿಗಳಾದ ಅರವಿಂದ ಘೋಷರು ಕಾಳಿಕಾ ಮಾತೆಯ ಮುಂದೆ ದೀಕ್ಷೆಯನ್ನು ನೀಡುವ ಆಚರಣೆಯನ್ನು ಅನುಶೀಲನಾ ಸಮಿತಿಯಲ್ಲಿ ರೂಢಿಸಿದರು. ರಾಷ್ಟ್ರೀಯತೆಯನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ವಿವರಿಸಿದರು. ದುರಂತವೆಂದರೆ ಈ ಆಚರಣೆಗಳು ಮುಸಲ್ಮಾನರನ್ನು ರಾಷ್ಟ್ರೀಯ ಹೋರಾಟದಿಂದ ದೂರವಿಡತೊಡಗಿತು. ಇದರ ರಾಜಕೀಯ ಲಾಭ ಮಾಡಿಕೊಂಡವರು ಮಾತ್ರ ಬ್ರಿಟಿಷರು. ಜನರನ್ನು ಒಂದುಗೂಡಿಸಲು ತಿಲಕರು ಆರಂಭಿಸಿದ ಶಿವಾಜಿ ಜಯಂತಿ, ಗಣೇಶ ಚತುರ್ಥಿಗಳು ಮುಂದೆ ಶಿವಸೇನೆಯ ಭಾಗವಾದುದನ್ನು ಇಲ್ಲಿ ಗಮನಿಸಬಹುದು.

 ಕಾಂಗ್ರೆಸ್‌ನಲ್ಲಿದ್ದ ಹಿಂದೂ ಸಂಪ್ರದಾಯವಾದಿಗಳು ಪಾಶ್ಚಿಮಾತ್ಯ ಪ್ರಭಾವದಿಂದ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಿದ್ದರೇ ವಿನಃ ಹಿಂದೂ ರಾಷ್ಟ್ರೀಯತೆಯನ್ನು ಬೋಧಿಸಿರಲಿಲ್ಲ. ಹಿಂದೂ ರಾಷ್ಟ್ರೀಯತೆ ಮುಸಲ್ಮಾನರಿಗೆ ನೀಡಿದ ಮೀಸಲಾತಿಯನ್ನು ವಿರೋಧಿಸಿತು. ಈ ಎಲ್ಲ ಬೆಳವಣಿಗೆ ಮುಸ್ಲಿಮ್ ಮೂಲಭೂತವಾದವನ್ನು ಹುಟ್ಟುಹಾಕಲು ಕಾರಣವಾಗಿತ್ತು. ಜಿನ್ನಾರಿಗೆ ಮುಸ್ಲಿಮ್ ರಾಷ್ಟ್ರದ ಆಲೋಚನೆ ಬರುವ ಹೊತ್ತಿಗೆ ಎರಡನೇ ಮಹಾಯುದ್ಧ ಆರಂಭವಾಗಿತ್ತು.

 ಾಂಧೀಜಿ ಭಾರತದಲ್ಲಿ ವೈವಿಧ್ಯಮಯವಾದ ಸಮುದಾಯಗಳಿರುವುದರಿಂದ ಇದು ಒಂದು ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲವೆಂದು ಹೇಳುತ್ತಿದ್ದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧೀಜಿಯ ರಾಷ್ಟ್ರೀಯತೆಯ ಆವೇಶ ‘ ಮಾಡು ಇಲ್ಲವೆ ಮಡಿ’ ಎಂಬ ಕರೆಯಲ್ಲಿ ಮೊಳಗಿತು. ನಾನು ರಾಷ್ಟ್ರಗಳನ್ನು ವಿರೋಧಿಸುತ್ತೇನೆ ಎಂದು ನೇರವಾಗಿ ಬರೆದವರು ಅವರು. ಅವರು ರಾಷ್ಟ್ರೀಯವಾದಿಯಾಗಿದ್ದರು ಹಾಗೂ ತಾನು ಹಿಂದೂವೆಂದು ಕರೆದುಕೊಳ್ಳುತ್ತಿದ್ದರು, ಆದರೆ ಹಿಂದೂ ರಾಷ್ಟ್ರೀಯವಾದಿಯಾಗಿರಲಿಲ್ಲ. ಹಿಂದೂ ಮುಸ್ಲಿಮ್ ಏಕತೆಯಲ್ಲಿ ಸ್ವಾತಂತ್ರ ಹೋರಾಟದ ಬಲವಿದೆ ಎಂದು ನಂಬಿದ್ದರು. ಪಾಕಿಸ್ತಾನದ ಪ್ರತ್ಯೇಕತೆಯನ್ನು ತೀವ್ರವಾಗಿ ವಿರೋಧಿಸಿದರು. ಇಪ್ಪತ್ತನೇ ಶತಮಾನದಲ್ಲಿ ಯೂರೋಪ್‌ನ ಕೆಲವು ರಾಷ್ಟ್ರಗಳಿಗೆ ರಾಷ್ಟ್ರೀಯತೆಯ ಕಲ್ಪನೆಯಲ್ಲಿ ಜನರನ್ನು ಒಂದುಗೂಡಿಸಲು ಸಾಧ್ಯವಾಗಿತ್ತು. ಆರ್ಥಿಕ ಪೈಪೋಟಿಯಿಂದ ಆರಂಭಗೊಂಡ ಧೋರಣೆ ರಾಷ್ಟ್ರ ವಿಸ್ತರಣೆಯ ಕಡೆಗೆ ಹೊರಳಿತು. ಅತಿಯಾದ ರಾಷ್ಟ್ರೀಯತೆಯ ಭಾವನೆ ಫ್ಯಾಶಿಸ್ಟ್ ರಾಷ್ಟ್ರಗಳನ್ನು ರೂಪಿಸಿತು. ಜನಾಂಗ ದ್ವೇಷ ಅದರ ನೆಲೆಗಟ್ಟಾಯಿತು. ಫ್ಯಾಶಿಸ್ಟ್ ನಾಯಕರು ಜನರ ಭಾವನೆಗಳನ್ನು ತಮ್ಮ ಮಹತ್ವಾಕಾಂಕ್ಷೆಗೆ ತಕ್ಕ ಹಾಗೆ ರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಫಾಶಿಸಂನ್ನು ಮೆರೆದ ಜರ್ಮನಿ, ಜಪಾನ್, ಇಟಲಿ ಇವುಗಳ ಉತ್ಕರ್ಷ ಎರಡನೆಯ ಮಹಾಯುದ್ಧದಲ್ಲಿ ಪರಿಸಮಾಪ್ತಿಯಾಯಿತು.

ಎರಡನೆಯ ಮಹಾಯುದ್ಧಾದ ನಂತರ ಹಲವು ಹೊಸ ರಾಷ್ಟ್ರಗಳು ಉದಯಿಸಿದವು. ಇಂದು ಬಹುತೇಕ ವಸಾಹತು ಆಳ್ವಿಕೆ ಕೊನೆಗೊಂಡಿದೆ, ಆದರೆ ಜನಾಂಗ ದ್ವೇಷ ಕೊನೆಗೊಳ್ಳಲಿಲ್ಲ. ಜನಾಂಗ ನೆಲೆಯ ರಾಷ್ಟ್ರಗಳ ಹುಟ್ಟು ಮುಂದುವರಿದಿದೆ. ರಶ್ಯದಿಂದ ಹೊರ ಬಂದ ದೇಶಗಳ ತಳಹದಿ ಜನಾಂಗ ಕಲ್ಪನೆಯೇ ಆಗಿದೆ. ಇದೇ ಕಾರಣದಿಂದ ಬಹು ಕಾಲದ ಹೋರಾಟದ ನಂತರ ಜೆಕ್ ಮತ್ತು ಸ್ಲೊವಾಕಿಯಾಗಳು ಬೇರ್ಪಟ್ಟವು.

 ರಾಷ್ಟ್ರದ ಕಲ್ಪನೆ ಭೂತಾಕಾರವಾಗಿ ಬೆಳೆದು ಆಧುನಿಕ ಕಾಲದ ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ನೆಲೆಗಟ್ಟಾಗಿ ಹೋಗಿದೆ. ಅಮೂರ್ತವಾದ ಈ ಕಲ್ಪನೆ ಶ್ರೇಷ್ಠತೆಯ ಪಾವಿತ್ರದ ಅರ್ಥಪಡೆದುಕೊಳ್ಳತೊಡಗಿತು. ರಾಜತ್ವವನ್ನು, ವಸಾಹತು ಆಳ್ವಿಕೆಯನ್ನು ಉರುಳಿಸಲು ನ್ಯಾಷನಲಿಸಂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ ನಿಜ, ಆದರೆ ಅದೇ ಸಮಯಕ್ಕೆ ರಾಷ್ಟ್ರಗಳು ತಮ್ಮ ಸುತ್ತ ಕೃತಕ ಗೋಡೆಗಳನ್ನು ಹಾಕಿಕೊಂಡು ಸಂಘರ್ಷಕ್ಕೆ ಸದಾ ಸಿದ್ಧವಾಗಿವೆ.

ರಾಷ್ಟ್ರೀಯತೆ ಅವಾಸ್ತವಿಕ ನೆಲೆಯಲ್ಲಿ ಹುಟ್ಟಿದ ತರ್ಕ ಎಂದು ಹೇಳಲು ಸಾಧ್ಯವಾಗಿದ್ದು ರವೀಂದ್ರನಾಥ ಟಾಗೋರರಿಗೆ. ‘ನಾನು ರಾಷ್ಟ್ರಗಳನ್ನು ವಿರೋಧಿಸುತ್ತೇನೆ’ ಎಂದು ನೇರವಾಗಿ ಬರೆದವರು ಅವರು. ಯೂರೋಪಿನ ರಾಷ್ಟ್ರದ ಕಲ್ಪನೆಯಲ್ಲಿ ಒಂದು ಧರ್ಮವನ್ನು ಹೇಳುವುದುಸಹಜವಾಗಿತ್ತು. ಏಕೆಂದರೆ ಕ್ರೈಸ್ತ ಧರ್ಮ ಹರಡುವಾಗಲೇ ಅಲ್ಲಿನ ವೈವಿಧ್ಯತೆ ಅಳಿಸಿ ಹೋಗಿತ್ತು. ಇನ್ನು ಭಾರತದ ವಿಚಾರದಲ್ಲಿ ಟಾಗೋರರು ಹಿಂದೂ ಧರ್ಮವನ್ನು ಒಂದು ಭ್ರಮೆಯೆಂದೇ ತಿಳಿದಿದ್ದರು. 

ಕೃಪೆ: ಒಡಲ ಬೆಂಕಿ ಆರದಿರಲಿ ಕೃತಿಯಿಂದ (20.08.2013)

Similar News