ನೀವು ಅತಿಯಾಗಿ ಬೆವರುತ್ತೀರಾ? ಹಾಗಿದ್ದರೆ ಕಾರಣಗಳನ್ನು ತಿಳಿದುಕೊಳ್ಳಿ

Update: 2019-12-09 14:06 GMT

ಅತಿಯಾಗಿ ಬೆವರುವಿಕೆಯೂ ಒಂದು ಕಾಯಿಲೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಈ ಸ್ಥಿತಿಯನ್ನು ಹೈಪರ್‌ಹೈಡ್ರೋಸಿಸ್ ಎಂದು ಕರೆಯಲಾಗುತ್ತದೆ. ತಾಪಮಾನ ಹೆಚ್ಚಿದ್ದಾಗ ಅಥವಾ ವ್ಯಾಯಾಮ ಮಾಡಿದಾಗ ಬೆವರು ಹೆಚ್ಚಾಗುತ್ತದೆ,ಅದು ಸಹಜ. ಆದರೆ ಈ ಕಾರಣಗಳಿಲ್ಲದೆಯೂ ನೀವು ಅತಿಯಾಗಿ ಬೆವರಬಹುದು,ಧರಿಸಿದ್ದ ಬಟ್ಟೆಗಳು ಒದ್ದೆಯಾಗಬಹುದು,ಕೈಗಳಿಂದ ಬೆವರು ತೊಟ್ಟಿಕ್ಕುತ್ತಿರಬಹುದು. ಹೀಗಿದ್ದಾಗ ನೀವು ಹೈಪರ್‌ಹೈಡ್ರೋಸಿಸ್‌ನಿಂದ ಬಳಲುತ್ತಿದ್ದೀರಿ ಎಂದೇ ಅರ್ಥ. ಇದು ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡುವುದಲ್ಲದೆ ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗಬಹುದು.

ಹೈಪರ್‌ಹೈಡ್ರೋಸಿಸ್‌ನಿಂದ ಬಳಲುತ್ತಿರುವವರಿಗೆ ವೈದ್ಯರು ಆರಂಭದಲ್ಲಿ ಆ್ಯಂಟಿಪರ್ಸ್ಪಿರಂಟ್‌ಗಳನ್ನು ಶಿಫಾರಸು ಮಾಡುತ್ತಾರೆ. ಡಿಯೋಡರಂಟ್ ಅಥವಾ ದುರ್ಗಂಧನಾಶಕಗಳನ್ನೂ ಬಳಸಬಹುದು. ಆದರೆ ಇವುಗಳಿಂದ ಯಾವುದೇ ಪ್ರಯೋಜನವಾಗದಿ ದ್ದಾಗ ಬೇರೆ ಔಷಧಿಗಳು ಮತ್ತು ಚಿಕಿತ್ಸೆಗಳನ್ನು ಪ್ರಯತ್ನಿಸಬಹುದು. ಶಸ್ತ್ರಚಿಕಿತ್ಸೆಯ ಮೂಲಕ ಬೆವರು ಗ್ರಂಥಿಗಳನ್ನು ತೆಗೆಯುವುದನ್ನು ಅಥವಾ ಅತಿಯಾಗಿ ಬೆವರುವಿಕೆಗೆ ಕಾರಣವಾಗಿರುವ ನರಗಳ ಸಂಪರ್ಕವನ್ನು ತಪ್ಪಿಸುವುದನ್ನೂ ವೈದ್ಯರು ಶಿಫಾರಸು ಮಾಡಬಹುದು. ಕೆಲವೊಮ್ಮೆ ಅತಿಯಾದ ಬೆವರುವಿಕೆಗೆ ಇತರ ಯಾವುದೇ ಅನಾರೋಗ್ಯ ಕಾರಣವಾಗಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

►ಲಕ್ಷಣಗಳು

ಹೆಚ್ಚಿನ ಜನರು ವ್ಯಾಯಾಮ ಅಥವಾ ದೈಹಿಕ ಶ್ರಮದ ಕೆಲಸಗಳಲ್ಲಿ ತೊಡಗಿಕೊಂಡಾಗ,ವಾತಾವರಣದ ತಾಪಮಾನ ಹೆಚ್ಚಾಗಿದ್ದಾಗ,ಉದ್ವೇಗಗೊಂಡಾಗ ಅಥವಾ ಒತ್ತಡಕ್ಕೆ ಸಿಲುಕಿದಾಗ ಬೆವರುತ್ತಾರೆ. ಹೈಪರ್‌ಹೈಡ್ರೋಸಿಸ್ ಅಥವಾ ಅತಿಯಾದ ಬೆವರುವಿಕೆಯು ಇಂತಹ ಸಾಮಾನ್ಯ ಬೆವರುವಿಕೆಗಿಂತ ಭಿನ್ನವಾಗಿದೆ.

 ಸಾಮಾನ್ಯವಾಗಿ ಹೈಪರ್‌ಹೈಡ್ರೋಸಿಸ್‌ನಿಂದ ಬಳಲುತ್ತಿರುವವರಿಗೆ ಕನಿಷ್ಠ ವಾರಕ್ಕೊಮ್ಮೆಯಾದರೂ ಕೈಗಳು, ಪಾದಗಳು, ಕಂಕುಳು ಅಥವಾ ಮುಖದಲ್ಲಿ ಅತಿಯಾಗಿ ಬೆವರಿಳಿಯುತ್ತಿರುತ್ತದೆ. ಶರೀರದ ಎರಡೂ ಪಾರ್ಶ್ವಗಳಿಂದ ಬೆವರು ಹರಿಯುತ್ತಿರುತ್ತದೆ

►ವೈದ್ಯರನ್ನು ಯಾವಾಗ ಕಾಣಬೇಕು?

ಕೆಲವೊಮ್ಮೆ ಅತಿಯಾಗಿ ಬೆವರುವಿಕೆಯು ಗಂಭೀರ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಅತಿಯಾಗಿ ಬೆವರುವಿಕೆಯೊಂದಿಗೆ ತಲೆ ಹಗುರವಾಗುವಿಕೆ,ಎದೆನೋವು ಅಥವಾ ವಾಕರಿಕೆಯೂ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಅತಿಯಾದ ಬೆವರುವಿಕೆ ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ವ್ಯತ್ಯಯವನ್ನುಂಟು ಮಾಡುತ್ತಿದ್ದರೆ,ದಿಢೀರ್‌ನೆ ಸಾಮಾನ್ಯಕ್ಕಿಂತ ಹೆಚ್ಚು ಬೆವರಿಳಿಯುತ್ತಿದ್ದರೆ,ಯಾವುದೇ ಕಾರಣವಿಲ್ಲದೆ ರಾತ್ರಿಯಲ್ಲಿಯೂ ಬೆವರುತ್ತಿದ್ದರೆ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.

►ಕಾರಣಗಳು

ಬೆವರುವಿಕೆಯು ಶರೀರವು ತನ್ನನ್ನು ತಂಪುಗೊಳಿಸಿಕೊಳ್ಳುವ ವ್ಯವಸ್ಥೆಯಾಗಿದೆ. ನಿಮ್ಮ ಶರೀರದ ಉಷ್ಣತೆ ಹೆಚ್ಚಾದಾಗ ನರಮಂಡಲವು ಸ್ವಯಂಚಾಲಿತವಾಗಿ ಬೆವರಿನ ಗ್ರಂಥಿಗಳನ್ನು ಪ್ರಚೋದಿಸುತ್ತದೆ. ನೀವು ಅಧೀರರಾಗಿದ್ದಾಗ, ದಿಗಿಲುಗೊಂಡಾಗ,ಮಾನಸಿಕ ಒತ್ತಡದಲ್ಲಿದಾಗಲೂ ಸಾಮಾನ್ಯವಾಗಿ ಅಂಗೈಗಳು ಬೆವರುತ್ತವೆ.

ಪ್ರೈಮರಿ ಫೋಕಲ್ ಹೈಪರ್‌ಹೈಡ್ರೋಸಿಸ್ ಈ ಸಮಸ್ಯೆಯ ಹೆಚ್ಚು ಸಾಮಾನ್ಯವಾದ ರೂಪವಾಗಿದೆ. ಇಲ್ಲಿ ದೈಹಿಕ ಶ್ರಮ ಅಥವಾ ತಾಪಮಾನ ಏರಿಕೆ ಬೆವರುವಿಕೆಗೆ ಕಾರಣವಾಗಿರದಿದ್ದರೂ ಬೆವರಿನ ಗ್ರಂಥಿಗಳನ್ನು ಪ್ರಚೋದಿಸುವ ನರಗಳು ಅತಿ ಕ್ರಿಯಾಶೀಲವಾಗಿರುತ್ತವೆ. ಮಾನಸಿಕ ಒತ್ತಡ ಅಥವಾ ಅಧೀರತೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ. ಈ ವಿಧದ ಹೈಪರ್‌ಹೈಡ್ರೋಸಿಸ್‌ನಲ್ಲಿ ಸಾಮಾನ್ಯವಾಗಿ ಅಂಗೈಗಳು,ಹಿಮ್ಮಡಿಗಳು ಮತ್ತು ಕೆಲವೊಮ್ಮೆ ಮುಖ ಅತಿಯಾಗಿ ಬೆವರುತ್ತವೆ. ಪ್ರೈಮರಿ ಫೋಕಲ್ ಹೈಪರ್‌ಹೈಡ್ರೋಸಿಸ್‌ಗೆ ಯಾವುದೇ ವೈದ್ಯಕೀಯ ಕಾರಣಗಳಿಲ್ಲ,ಇದು ಆನುವಂಶಿಕ ಆಗಿರಲೂಬಹುದು.

ವೈದ್ಯಕೀಯ ಕಾರಣದಿಂದಾಗಿ ಅತಿಯಾದ ಬೆವರುವಿಕೆಯುಂಟಾದರೆ ಅದನ್ನು ಸೆಕೆಂಡರಿ ಹೈಪರ್‌ಹೈಡ್ರೋಸಿಸ್ ಎಂದು ಕರೆಯಲಾಗುತ್ತಿದ್ದು,ಇದು ಸಾಮಾನ್ಯವಾಗಿ ಕಡಿಮೆ ಪ್ರಕರಣಗಳಲ್ಲಿ ಕಂಡುಬರುತ್ತದೆ. ಈ ವಿಧವು ಇಡೀ ಶರೀರವು ಅತಿಯಾಗಿ ಬೆವರುವಂತೆ ಮಾಡಬಲ್ಲದು.

ಮಧುಮೇಹ,ಋತುಬಂಧದ ಹಂತದಲ್ಲಿ ಹಾರ್ಮೋನ್‌ಗಳಲ್ಲಿ ಬದಲಾವಣೆಗಳು,ಥೈರಾಯ್ಡ ಸಮಸ್ಯೆಗಳು,ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿತ,ಕೆಲವು ವಿಧಗಳ ಕ್ಯಾನ್ಸರ್,ಹೃದಯಾಘಾತ,ನರಮಂಡಲ ರೋಗಗಳು,ಸೋಂಕುಗಳು,ಕೆಲವು ಔಷಧಿಗಳು ಸಹ ಅತಿಯಾದ ಬೆವರುವಿಕೆಗೆ ಕಾರಣವಾಗುತ್ತವೆ.

►ತೊಂದರೆಗಳು

ಸೋಂಕುಗಳು: ಅತಿಯಾಗಿ ಬೆವರುವವರು ಚರ್ಮದ ಸೋಂಕುಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸಾಮಾಜಿಕ ಮತ್ತು ಭಾವನಾತ್ಮಕ ಪರಿಣಾಮಗಳು: ಕೈಗಳಿಂದ ಬೆವರು ಬಸಿಯುತ್ತಿರುವುದು ಮತ್ತು ಧರಿಸಿದ ಬಟ್ಟೆಗಳು ಬೆವರಿನಿಂದ ಮುದ್ದೆಯಾಗಿರುವುದು ಸಾಮಾಜಿಕವಾಗಿ ಮುಜುಗರವನ್ನು ಉಂಟು ಮಾಡಬಹುದು. ಅತಿಯಾದ ಬೆವರುವಿಕೆಯಿಂದ ಕೆಲಸವನ್ನು ಶ್ರದ್ಧೆಯಿಂದ ಮಾಡಲು ಸಾಧ್ಯವಾಗುವುದಿಲ್ಲ,ವಿದ್ಯಾರ್ಥಿಗಳಾಗಿದ್ದರೆ ವ್ಯಾಸಂಗಕ್ಕೂ ತೊಡಕನ್ನುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News