ರಾಜಸ್ತಾನ: ‘ಪಾಣಿಪತ್’ ಸಿನೆಮಾದ ಪ್ರರ್ದಶನ ನಿಷೇಧಕ್ಕೆ ರಾಜವಂಶಸ್ಥರ ಆಗ್ರಹ

Update: 2019-12-09 15:54 GMT

ಜೈಪುರ, ಡಿ.9: ಮರಾಠರು ಮತ್ತು ಅಪಘಾನ್ ದೊರೆ ಅಹ್ಮದ್ ಶಾ ಅಬ್ದಾಲಿ ಮಧ್ಯೆ 1761ರಲ್ಲಿ ನಡೆದ ಮೂರನೇ ಪಾಣಿಪತ್ ಯುದ್ಧದ ಕತೆಯನ್ನು ಒಳಗೊಂಡಿರುವ ಹಿಂದಿ ಸಿನೆಮ ‘ಪಾಣಿಪತ್’ಗೆ ರಾಜಸ್ತಾನದ ರಾಜವಂಶಸ್ಥ ಹಾಗೂ ರಾಜ್ಯದ ಸಚಿವರು ಆಕ್ಷೇಪ ಸೂಚಿಸಿದ್ದು ಸಿನೆಮಾದ ಪ್ರದರ್ಶನ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.

ತನ್ನ ಪೂರ್ವಜರಾದ ಭರತ್‌ಪುರದ ಮಹಾರಾಜ ಸೂರಜ್‌ಮಾಲ್‌ರ ಘನತೆಗೆ ಕುಂದು ಉಂಟುಮಾಡುವ ರೀತಿ ಸಿನೆಮದಲ್ಲಿ ಅವರ ಪಾತ್ರಪೋಷಣೆ ಮಾಡಲಾಗಿದೆ. ಯುದ್ಧದಲ್ಲಿ ಹಿಮ್ಮೆಟ್ಟುತ್ತಿದ್ದ ಮರಾಠಾ ಸೈನ್ಯಕ್ಕೆ ಮಹಾರಾಜ ಸೂರಜ್‌ಮಲ್ ನೆರವು ನೀಡಲಿಲ್ಲ ಎಂದು ಸಿನೆಮದಲ್ಲಿ ತಿಳಿಸಿದ್ದು ಇದರಿಂದ ಜಾಟ್ ಸಮುದಾಯದವರ ಭಾವನೆಗೆ ಘಾಸಿಯಾಗಿದೆ ಎಂದು ರಾಜಸ್ತಾನದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಆರೋಪಿಸಿದ್ದಾರೆ.

ಪಾಣಿಪತ್ ಯುದ್ಧದಲ್ಲಿ ಸೋತು ಹಿಮ್ಮೆಟ್ಟಿದ್ದ ಪೇಶ್ವೆ ಹಾಗೂ ಮರಾಠಾರ ಇಡೀ ಸೇನೆಗೆ ಮಹಾರಾಜ ಸೂರಜ್‌ಮಲ್ ಮತ್ತು ಮಹಾರಾಣಿ ಕಿಶೋರಿ 6 ತಿಂಗಳು ಆಶ್ರಯ ನೀಡಿದ್ದರು. ಆಗ ಭರತ್‌ಪುರದ ರಾಜಧಾನಿಯಾಗಿದ್ದ ಕುಮ್‌ಹೇರ್‌ನಲ್ಲಿ ಮೃತಪಟ್ಟಿದ್ದ ಖಂಡೇರಾವ್ ಹೋಳ್ಕರ್‌ರ ಸ್ಮಾರಕವನ್ನು ಇಂದಿಗೂ ಗಗರ್‌ಸೋಲಿ ಗ್ರಾಮದಲ್ಲಿ ಕಾಣಬಹುದು ಎಂದು ಸಿಂಗ್ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆ ಕೂಡಾ ಸಿನೆಮವನ್ನು ಟೀಕಿಸಿದ್ದಾರೆ. ಘನ ವ್ಯಕ್ತಿತ್ವದ, ಆತ್ಮಗೌರವ ಹೊಂದಿದ್ದ, ಅತ್ಯಂತ ಗೌರವಾನ್ವಿತ ಮಹಾರಾಜ ಸೂರಜ್‌ಮಾಲ್‌ರನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿರುವುದು ಖಂಡನಾರ್ಹ ಎಂದವರು ಪ್ರತಿಕ್ರಿಯಿಸಿದ್ದಾರೆ.

ಅಶುತೋಷ್ ಗೋವಾರಿಕರ್ ನಿರ್ದೇಶನದ ಈ ಸಿನೆಮ ಡಿ.6ರಂದು ಬಿಡುಗಡೆಯಾಗಿದ್ದು ಅರ್ಜುನ್ ಕಪೂರ್, ಸಂಜಯ್ ದತ್ ಮತ್ತು ಕೃತಿ ಸನೂನ್ ಮುಖ್ಯ ಪಾತ್ರವಹಿಸಿದ್ದಾರೆ.

ಸೆನ್ಸಾರ್ ಮಂಡಳಿ ಮಧ್ಯಪ್ರವೇಶಿಸಲಿ: ಅಶೋಕ್ ಗೆಹ್ಲೋಟ್

ಸಿನೆಮದಲ್ಲಿ ಮಹಾರಾಜ ಸೂರಜ್‌ಮಲ್‌ರ ಪಾತ್ರ ಚಿತ್ರಣದ ಬಗ್ಗೆ ಆಕ್ಷೇಪ ಕೇಳಿಬಂದಿದೆ. ಇಂತಹ ವಿಷಯಗಳಿಗೆ ಆಸ್ಪದ ನೀಡಬಾರದು. ಸೆನ್ಸಾರ್ ಮಂಡಳಿ ಮಧ್ಯಪ್ರವೇಶಿಸಬೇಕು ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಸಿನೆಮದ ಬಗ್ಗೆ ಜಾಠ್ ಸಮುದಾಯದವರು ಆಕ್ಷೇಪ ಸೂಚಿಸಿದ್ದಾರೆ. ವಿತರಕರು ತಕ್ಷಣವೇ ಜಾಠ್ ಸಮುದಾಯದವರೊಂದಿಗೆ ಮಾತುಕತೆ ನಡೆಸಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News