ಮುಸ್ಲಿಂ ಪ್ರೊಫೆಸರ್ ಬೆಂಬಲಕ್ಕೆ ನಿಂತ ಬನಾರಸ್ ಹಿಂದು ವಿವಿಯ ಅಧ್ಯಾಪಕನ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ: ಆರೋಪ

Update: 2019-12-10 08:20 GMT
Photo: NDTV

ಹೊಸದಿಲ್ಲಿ: ಫಿರೋಝ್ ಖಾನ್ ಎಂಬ ಮುಸ್ಲಿಂ ಪ್ರೊಫೆಸರ್ ನೇಮಕಾತಿಯನ್ನು ಬೆಂಬಲಿಸಿದ್ದ ಬನಾರಸ್ ಹಿಂದು ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್ ಅವರ ಮೇಲೆ ಕೆಲ ವಿದ್ಯಾರ್ಥಿಗಳು ಸೋಮವಾರ  ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಸಂಸ್ಕೃತ ವಿಭಾಗಕ್ಕೆ ಫಿರೋಝ್ ಖಾನ್ ಅವರ ನೇಮಕಾತಿ  ಈಗಾಗಲೇ ಬಹಳಷ್ಟು ಪ್ರತಿಭಟನೆಗಳಿಗೆ ಕಾರಣವಾಗಿದೆಯಲ್ಲದೆ ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಬೇಕೆಂದೂ ಕೆಲ ವಿದ್ಯಾರ್ಥಿಗಳು ಬೇಡಿಕೆಯಿಟ್ಟಿದ್ದಾರೆ.

ಖಾನ್ ಬೆಂಬಲಿಸಿದ್ದ ಪ್ರೊಫೆಸರ್ ಶಾಂತಿ ಲಾಲ್ ಸಾಲ್ವಿ ಸೋಮವಾರ ತರಗತಿ ಕೊಠಡಿಯಲ್ಲಿ ಕುಳಿತುಕೊಂಡಿದ್ದ ವೇಳೆ ಕೆಲ ವಿದ್ಯಾರ್ಥಿಗಳು ಒಳ ನುಗ್ಗಿ ಅವರನ್ನು ನಿಂದಿಸಲು ಆರಂಭಿಸಿ ಮುಸ್ಲಿಂ ಪ್ರೊಫೆಸರ್ ನೇಮಕಾತಿಯನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರೆಂದು ದೂರಲಾಗಿದೆ.

ಆಗ ಅಲ್ಲಿ ತಾನು ಸುರಕ್ಷಿತವಲ್ಲ ಎಂದು ಶಾಂತಿ ಲಾಲ್ ಹೊರನಡೆದಾಗ ಕೆಲ ವಿದ್ಯಾರ್ಥಿಗಳು ಅವರತ್ತ ಕಲ್ಲೆಸೆದಿದ್ದೇ ಅಲ್ಲದೆ ಅವರನ್ನು ಹಿಡಿದು ದೂಡಿದರೆಂದು ಆರೋಪಿಸಲಾಗಿದೆ. ಈ ಸಂದರ್ಭ ಅಪರಿಚಿತರೊಬ್ಬರು ಸ್ಕೂಟರಿನಲ್ಲಿ ತಮಗೆ ಲಿಫ್ಟ್ ನೀಡಿದ್ದರಿಂದ ತಾನು ಪಾರಾzಗಿದ್ದಾಗಿಯೂ ಅವರು ಹೇಳಿದ್ದಾರೆ.

ಫಿರೋಝ್ ಖಾನ್ ಅವರನ್ನು ಬೆಂಬಲಿಸದಂತೆ ಶಾಂತಿ ಲಾಲ್ ಅವರಿಗೆ ಹೇಳಿದ್ದನ್ನು ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರಾದರೂ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾರೆ.

ತಮ್ಮನ್ನು ಕಂಡರೆ ಆಗದ ವಿಶ್ವವಿದ್ಯಾಲಯದ ಸಹ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳನ್ನು ತಮ್ಮ ವಿರುದ್ಧ ಎತ್ತಿ  ಕಟ್ಟಿದ್ದಾರೆ ಎಂದು ಶಾಂತಿ ಲಾಲ್ ಆರೋಪಿಸಿದ್ದಾರಲ್ಲದೆ, "ವಿವಿಯಲ್ಲಿ ಪಿ ಎಚ್ ಡಿ ಮಾಡಿರುವ ನನ್ನ ಪತ್ನಿ ಮುಸ್ಲಿಂ ಹಾಗೂ ಫಿರೋಝ್ ಖಾನ್ ಸೋದರಿ ಎಂದು ವದಂತಿ ಹರಡುತ್ತಿದ್ದಾರೆ,'' ಎಂದೂ ದೂರಿದ್ದಾರೆ.

ಅವರು ಈ ಕುರಿತಂತೆ ವಿವಿ ಉಪಕುಲಪತಿ ರಾಕೇಶ್ ಭಟ್ನಾಗರ್ ಅವರಿಗೆ ದೂರು ನೀಡಿದ್ದಾರೆ ಹಾಗೂ  ಪೊಲೀಸ್ ದೂರು ನೀಡುವುದಾಗಿಯೂ ತಿಳಿಸಿದ್ದಾರೆ. ವಿವಿ ಆಡಳಿತ ತನಿಖೆ ನಡೆಸುವ ಭರವಸೆ ನೀಡಿದೆಯೆನ್ನಲಾಗಿದೆ.

ಫಿರೋಝ್ ಖಾನ್ ನೇಮಕಾತಿಗೊಂಡಂದಿನಿಂದ ಸಂಸ್ಕೃತ ವಿಭಾಗದಲ್ಲಿ ತರಗತಿಗಳು ನಡೆಯುತ್ತಿಲ್ಲ. ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವ ಸಾಧ್ಯತೆಯೂ ಇದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News