ನಿಮಗೆ ಬೇಡವಾದ ಮಚ್ಚೆಯನ್ನು ಈಗ ಲೇಸರ್ ಚಿಕಿತ್ಸೆಯಿಂದ ನಿವಾರಿಸಬಹುದು

Update: 2019-12-10 13:31 GMT

ಲೇಸರ್ ಮೂಲಕ ಮಚ್ಚೆಯ ನಿವಾರಣೆಯು ಹೊಸ ಚಿಕಿತ್ಸಾ ಪದ್ಧತಿಯಾಗಿದ್ದು,ಚರ್ಮದಲ್ಲಿಯ ಬೇಡವಾದ ಮಚ್ಚೆಗಳಿಂದ ತ್ವರಿತವಾಗಿ,ಸುರಕ್ಷಿತವಾಗಿ ಮತ್ತು ನೋವುರಹಿತವಾಗಿ ಮುಕ್ತಿ ಪಡೆಯಲು ನೆರವಾಗುತ್ತದೆ.

ಮುಖದಲ್ಲಿಯ ಕೆಲವು ಮಚ್ಚೆಗಳು ವಿಶೇಷವಾಗಿ ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಕೆಲವೊಮ್ಮೆ ಮಚ್ಚೆಗಳು,ವಿಶೇಷವಾಗಿ ಅವು ದೊಡ್ಡದಾಗಿದ್ದರೆ ಸೌಂದರ್ಯವನ್ನು ಕೆಡಿಸಿ ಕುರೂಪಿಯಾಗಿ ಕಾಣುವಂತೆ ಮಾಡುತ್ತವೆ. ನೀವು ಮಚ್ಚೆಗಳೊಂದಿಗೆ ಜನಿಸಿರಬಹುದು,ಆದರೆ ಅವುಗಳೊಂದಿಗೇ ಕೊನೆಯವರೆಗೂ ಬದುಕಬೇಕು ಎಂದೇನಿಲ್ಲ. ವಿಜ್ಞಾನ ಮತ್ತು ವೈದ್ಯಕೀಯ ನಿಮ್ಮ ಸೌಂದರ್ಯವನ್ನು ರಕ್ಷಿಸುತ್ತವೆ. ಅಲ್ಲದೆ ಕೆಲವೊಮ್ಮೆ ಸೌಂದರ್ಯದ ಕಾರಣದಿಂದಲ್ಲದೆ ಆರೋಗ್ಯದ ಕಾರಣದಿಂದಾಗಿಯೂ ಮಚ್ಚೆಗಳನ್ನು ನಿವಾರಿಸಬೇಕಾಗುತ್ತದೆ.

ಮಚ್ಚೆಯು ಅಸಮ ಪಾರ್ಶ್ವಗಳನ್ನು ಹೊಂದಿದ್ದರೆ,ಅಸಮ ಅಂಚುಗಳಿದ್ದರೆ,ಬೇರೆ ಬೇರೆ ಬಣ್ಣಗಳಿಂದ ಕೂಡಿದ್ದರೆ,ಆರು ಮಿಲಿಮೀಟರ್‌ಗಿಂತ ಹೆಚ್ಚಿನ ಗಾತ್ರದಲ್ಲಿದ್ದರೆ,ಅದು ಬೆಳೆಯುತ್ತಿದ್ದರೆ ಚರ್ಮವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ ಮತ್ತು ಅವರು ಡರ್ಮೊಸ್ಕೋಪಿ ಮೂಲಕ ತಪಾಸಣೆ ನಡೆಸಿ ಸಮಸ್ಯೆಯಿದ್ದರೆ ಪತ್ತೆ ಹಚ್ಚುತ್ತಾರೆ.

ಆದರೆ ಮಚ್ಚೆಯ ನಿವಾರಣೆಗೆ ಮುಂದಾಗುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಮಚ್ಚೆಯನ್ನು ತೆಗೆಯುವುದು ಸರಿಯಾದ ಕ್ರಮವೇ ಎನ್ನುವುದನ್ನು ಮೊದಲು ನಿರ್ಧರಿಸಬೇಕು. ಮಚ್ಚೆಯು ನಿಮ್ಮ ಆರೋಗ್ಯಕ್ಕೆ ಯಾವುದಾದರೂ ಅಪಾಯವನ್ನು ಸೂಚಿಸುತ್ತಿದೆಯೇ ಎನ್ನುವುದನ್ನು ಮೊದಲು ದೃಢಪಡಿಸಿಕೊಳ್ಳಬೇಕು. ಅದರ ಮಾರಕತೆ,ಅಂದರೆ ಅದು ಕ್ಯಾನ್ಸರ್ ಅಥವಾ ಇನ್ಯಾವುದೇ ರೋಗದ ಕುರುಹಾಗಿದೆಯೇ ಎನ್ನುವುದನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಏಕೆಂದರೆ ಒಮ್ಮೆ ಮಚ್ಚೆಯನ್ನು ತೆಗೆದುಬಿಟ್ಟರೆ ಅದರ ಮಾರಕತೆಯನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಲೇಸರ್ ಚಿಕಿತ್ಸೆಯಲ್ಲಿ ಮಚ್ಚೆಯ ಬಣ್ಣವನ್ನು ತೆಗೆಯಲಾಗುತ್ತದೆ. ಅಂದರೆ ನಿಮಗಾಗಲೀ ವೈದ್ಯರಿಗಾಗಲೀ ಈ ಚಿಕಿತ್ಸೆಯ ಬಳಿಕ ಮಚ್ಚೆಯ ಆಕಾರ ಅಥವಾ ಬಣ್ಣದಲ್ಲಿ ಯಾವುದೇ ಬದಲಾವಣೆಗಳನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ಮಚ್ಚೆಯು ಕ್ಯಾನ್ಸರ್‌ಕಾರಕವೇ ಎಂದು ಪರೀಕ್ಷಿಸಲು ಸಮಸ್ಯೆಯಾಗುತ್ತದೆ. ಹೀಗಾಗಿ ಮಚ್ಚೆಯನ್ನು ತೆಗೆಸಲು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಚರ್ಮವೈದ್ಯರು ಮತ್ತು ಪ್ಲಾಸ್ಟಿಕ್ ಸರ್ಜನ್‌ರ ಸಲಹೆ ಪಡೆದುಕೊಳ್ಳುವುದು ಅತುತ್ತಮ ಹೆಜ್ಜೆಯಾಗುತ್ತದೆ.

ನೀವು ನಿವಾರಿಸಿಕೊಳ್ಳಲು ಬಯಸಿರುವ ಮಚ್ಚೆ ದೊಡ್ಡದಾಗಿರಲಿ ಅಥವಾ ಪುಟಾಣಿ ಗಾತ್ರದ್ದಾಗಿರಲಿ,ಅದನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ವೈದ್ಯರು ಚಿಕಿತ್ಸೆಯ ಅವಧಿಯನ್ನು ನಿರ್ಧರಿಸಬಲ್ಲರು. ಲೇಸರ್ ಚಿಕಿತ್ಸೆ ಪಡೆಯುತ್ತಿದ್ದರೆ ಮಚ್ಚೆಯ ಗಾತ್ರವನ್ನು ಅವಲಂಬಿಸಿ 2-3 ಬಾರಿ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಾಗಬಹುದು. ಆದರೆ ಶಸ್ತ್ರಚಿಕಿತ್ಸೆಯ ಮೂಲಕ ಮಚ್ಚೆಯನ್ನು ತೆಗೆಯುವ ಪ್ರಕ್ರಿಯೆ ಒಂದೇ ಭೇಟಿಯಲ್ಲಿ ಪೂರ್ಣಗೊಳ್ಳುತ್ತದೆ.

 ಶಸ್ತ್ರಚಿಕಿತ್ಸೆಯ ಮೂಲಕ ಮಚ್ಚೆಯನ್ನು ತೆಗೆಸಿಕೊಂಡರೆ ಅದರ ಗಾತ್ರವನ್ನು ಮತ್ತು ಛೇದನದ ಆಳವನ್ನು ಅವಲಂಬಿಸಿ ಗಾಯವು ಗುಣವಾಗಲು ಕೆಲವು ದಿನಗಳಿಂದ ಹಿಡಿದು ಕೆಲವು ವಾರಗಳು ಬೇಕಾಗಬಹುದು. ಅಲ್ಲದೆ ಗಾಯಕ್ಕೆ ಹಾಕಲಾದ ಹೊಲಿಗೆಗಳು ಅದು ಮಾಯುವ ಅವಧಿಯ ಮೇಲೆ ಪರಿಣಾಮವನ್ನು ಹೊಂದಿರುತ್ತದೆ. ನೀವು ಯಾವುದೇ ಕಾರಣಕ್ಕೆ ಮಚ್ಚೆಯನ್ನು ತೆಗೆಸಲು ನಿರ್ಧರಿಸಿದ್ದರೂ ಈ ಚರ್ಮ ಚಿಕಿತ್ಸೆಯು ತಜ್ಞ ಚರ್ಮರೋಗ ತಜ್ಞರ ಮಾರ್ಗದರ್ಶನದಲ್ಲಿಯೇ ನಡೆಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News