ತಬ್ರೇಝ್ ಅನ್ಸಾರಿ ಗುಂಪು ಹತ್ಯೆ ಪ್ರಕರಣ: ಆರು ಆರೋಪಿಗಳಿಗೆ ಜಾಮೀನು

Update: 2019-12-10 17:49 GMT

ರಾಂಚಿ (ಜಾರ್ಖಂಡ್), ಡಿ.10: ಗುಂಪಿನಿಂದ ತಬ್ರೇಝ್ ಅನ್ಸಾರಿ ಹತ್ಯೆ ಪ್ರಕರಣದಲ್ಲಿಯ ಆರು ಆರೋಪಿಗಳಿಗೆ ರಾಂಚಿ ಉಚ್ಚ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ. 2019,ಜೂ.17ರಂದು ಸರಾಯ್‌ಕೇಲಾ-ಖರ್ಸ್ವಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಗುಂಪೊಂದು ಬೈಕ್ ಕಳ್ಳತನದ ಆರೋಪದಲ್ಲಿ ಅನ್ಸಾರಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸುತ್ತಿರುವ ಮತ್ತು ‘ಜೈಶ್ರೀರಾಮ್’ ಘೋಷಣೆಯನ್ನು ಕೂಗುವಂತೆ ಆತನನ್ನು ಬಲವಂತಗೊಳಿಸುತ್ತಿರುವ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿದ್ದವು.

ಆರೋಪಿಗಳ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪವಿಲ್ಲ ಮತ್ತು ಅಪರಾಧವು ಸಾರ್ವತ್ರಿಕ ಸ್ವರೂಪದ್ದಾಗಿದೆ ಎಂದು ನ್ಯಾಯಾಲಯವು ಹೇಳಿದೆ. ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ಹೆಸರಿಸಲಾಗಿರಲಿಲ್ಲ ಎಂದು ಅನ್ಸಾರಿ ಕುಟುಂಬದ ಪರ ಹಾಜರಾಗಿದ್ದ ಸದಾಬ್ ಅನ್ಸಾರಿ ಸುದ್ದಿಗಾರರಿಗೆ ತಿಳಿಸಿದರು.

ಗುಂಪೊಂದು ಅಪರಾಧದಲ್ಲಿ ಭಾಗಿಯಾದ ಇಂತಹ ಪ್ರಕರಣಗಳಲ್ಲಿ ಪ್ರತಿಯೊಬ್ಬ ಆರೋಪಿಯ ವಿರುದ್ಧ ಕಾನೂನು ಸಮರ ನಡೆಸುವುದು ಬಲಿಪಶುಗಳಿಗೆ ಅತ್ಯಂತ ಕಷ್ಟವಾಗುತ್ತದೆ ಎಂದು ಅನ್ಸಾರಿಯ ಪತ್ನಿ ಶಾಹಿಶ್ತಾ ಪರ್ವೀನ್ ಪರ ಪರ ವಕೀಲ ಎ.ಆಲಂ ಹೇಳಿದರು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಕರಣದಲ್ಲಿಯ ಎಲ್ಲ 13 ಆರೋಪಿಗಳ ವಿರುದ್ಧದ ಕೊಲೆ ಆರೋಪವನ್ನು ಪೊಲೀಸರು ಕೈಬಿಟ್ಟಿದ್ದರು. ಒಂದು ವಾರದ ಬಳಿಕ ತಾಜಾ ವೈದ್ಯಕೀಯ ವರದಿಯನ್ನು ಪಡೆದುಕೊಂಡು ಆರೋಪಿಗಳ ವಿರುದ್ಧ ಮತ್ತೆ ಕೊಲೆ ಆರೋಪವನ್ನು ಹೊರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News