ಕರ್ನಾಟಕದ ವಿರುದ್ಧ ತಮಿಳುನಾಡು 165/4

Update: 2019-12-10 18:18 GMT

ದಿಂಡಿಗಲ್, ಡಿ.10: ಆಫ್ ಸ್ಪಿನ್ನರ್ ಕೆ.ಗೌತಮ್(3-61)ಮೂರು ವಿಕೆಟ್ ಗೊಂಚಲು ನೆರವಿನಿಂದ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದ 2ನೇ ದಿನವಾದ ಮಂಗಳವಾರ ಅಲ್ಪ ಮೇಲುಗೈ ಸಾಧಿಸಿದೆ.

ಕರ್ನಾಟಕದ ಮೊದಲ ಇನಿಂಗ್ಸ್ 336 ರನ್‌ಗೆ ಉತ್ತರವಾಗಿ ತಮಿಳುನಾಡು ತಂಡ 4 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿದ್ದು, ಇನ್ನೂ 171 ರನ್ ಹಿನ್ನಡೆಯಲ್ಲಿದೆ. ಮಂದ ಬೆಳಕಿನಿಂದಾಗಿ ಪಂದ್ಯ ಬೇಗನೆ ಮುಗಿದಾಗ ಹಿರಿಯ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್(ಔಟಾಗದೆ 23)ಹಾಗೂ ಜಗದೀಶನ್(6) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿನವ್ ಮುಕುಂದ್(47) ಹಾಗೂ ಮುರಳಿ ವಿಜಯ್(32)ಮೊದಲ ವಿಕೆಟ್‌ಗೆ 81 ರನ್ ಸೇರಿಸಿ ತಮಿಳುನಾಡಿಗೆ ಉತ್ತಮ ಆರಂಭ ಒದಗಿಸಿದರು. ವಿಜಯ್ ಅವರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ಗೌತಮ್ ಕರ್ನಾಟಕಕ್ಕೆ ಆರಂಭಿಕ ಮೇಲುಗೈ ಒದಗಿಸಿಕೊಟ್ಟರು. ವಿಜಯ್ ಔಟಾದ ಬೆನ್ನಿಗೆ ಎಡಗೈ ಬ್ಯಾಟ್ಸ್‌ಮನ್ ಮುಕುಂದ್, ಗೌತಮ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಶರತ್‌ಗೆ ಕ್ಯಾಚ್ ನೀಡಿದರು.

ನಾಯಕ ವಿಜಯ ಶಂಕರ್ ಭರವಸೆಯ ಇನಿಂಗ್ಸ್ ಆಡುವ ವಿಶ್ವಾಸ ಮೂಡಿಸಿದರೂ 12 ರನ್ ಗಳಿಸಿ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಕಾರ್ತಿಕ್ ಹಾಗೂ ಬಿ.ಅಪರಾಜಿತ್(37, 86 ಎಸೆತ, 3 ಬೌಂಡರಿ, 1 ಸಿಕ್ಸರ್)ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿ ತಂಡವನ್ನು ಆಧರಿಸಿದರು.ಈ ಜೋಡಿಯನ್ನು ರೋನಿತ್ ಮೋರೆ ಬೇರ್ಪಡಿಸಿದರು.

ಕರ್ನಾಟಕ 336 ರನ್‌ಗೆ ಆಲೌಟ್

ಇದಕ್ಕೂ ಮೊದಲು 6 ವಿಕೆಟ್‌ಗಳ ನಷ್ಟಕ್ಕೆ 259 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಪ್ರವಾಸಿ ಕರ್ನಾಟಕ ತಂಡ ಗೌತಮ್(51, 39 ಎಸೆತ, 4 ಬೌಂಡರಿ, 4 ಸಿಕ್ಸರ್)ಅರ್ಧಶತಕ ಹಾಗೂ ಡೇವಿಡ್ ಮಥಾಯಿಸ್(26)ಸಾಹಸದಿಂದ 300ಕ್ಕೂ ಅಧಿಕ ರನ್ ಗಳಿಸಿತು.

ಆರ್. ಅಶ್ವಿನ್(4-79)33.4 ಓವರ್‌ಗಳಲ್ಲಿ ಗೌತಮ್ ಸಹಿತ ಕರ್ನಾಟಕದ ಕೆಳ ಕ್ರಮಾಂಕದ ಆಟಗಾರರನ್ನು ಕಾಡಿದರು. ಸತತ ಎಸೆತಗಳಲ್ಲಿ ಮಥಾಯಿಸ್ ಹಾಗೂ ರೋನಿತ್ ಮೋರೆ ವಿಕೆಟ್‌ನ್ನು ಉರುಳಿಸಿದರು. ಆದರೆ,11ನೇ ಕ್ರಮಾಂಕದ ಆಟಗಾರ ವಿ.ಕೌಶಿಕ್ ಅವರು ಅಶ್ವಿನ್‌ಗೆ ಹ್ಯಾಟ್ರಿಕ್ ವಿಕೆಟ್ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News