ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಅಭಿಜಿತ್ ಬ್ಯಾನರ್ಜಿ ದಂಪತಿ

Update: 2019-12-11 13:16 GMT
Photo: Twitter

ಹೊಸದಿಲ್ಲಿ,ಡಿ.11: ಮಂಗಳವಾರ ಸ್ವೀಡನ್ನಿನ ಸ್ಟಾಕ್‌ಹೋಮ್‌ನ ಕನ್ಸರ್ಟ್ ಹಾಲ್‌ನಲ್ಲಿ ನಡೆದ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಿದ ಭಾರತೀಯ-ಅಮೆರಿಕನ್ ಅರ್ಥಶಾಸ್ತ್ರಜ್ಞ  ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಫ್ರೆಂಚ್-ಅಮೆರಿಕನ್ ಪತ್ನಿ ಎಸ್ಟರ್ ಡುಫ್ಲೊ ಅವರು ಅಚ್ಚ ಭಾರತೀಯ ಸಾಂಪ್ರದಾಯಿಕ ಉಡುಪುಗಳಲ್ಲಿ ಮಿಂಚುವ ಮೂಲಕ ಆಕರ್ಷಣೆಯ ಕೇಂದ್ರವಾಗಿದ್ದರು. ಬ್ಯಾನರ್ಜಿ ಚಿನ್ನದ ಝರಿಯಂಚಿನ ಧೋತಿ,ಕುರ್ತಾ ಮತ್ತು ಕಪ್ಪು ಬಂದ್‌ಗಲಾ ಧರಿಸಿದ್ದರೆ ಡುಫ್ಲೊ ನೀಲಿ-ಹಸಿರು ಸೀರೆ ಮತ್ತು ಕೆಂಪು ರವಿಕೆಯನ್ನು ಧರಿಸಿ,ಹಣೆಗೆ ಕೆಂಪು ತಿಲಕವನ್ನಿಟ್ಟುಕೊಂಡಿದ್ದರು. ಪ್ರಶಸ್ತಿಯಲ್ಲಿ ಪಾಲುದಾರರಾದ ಅವರ ಸಹೋದ್ಯೋಗಿ ಡಾ.ಮೈಕೆಲ್ ಕ್ರೆಮರ್ ಕಪ್ಪು ಬಣ್ಣದ ಸೂಟ್ ಧರಿಸಿದ್ದರು.

ಈವರೆಗೆ ಮೂವರು ಬಂಗಾಳಿಗಳು ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದು,ಬ್ಯಾನರ್ಜಿ ಸಾಂಪ್ರದಾಯಿಕ ಬಂಗಾಳಿ ಉಡುಪಿನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಬಂಗಾಳಿ ಎನಿಸಿಕೊಂಡರು. 1913ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದ ರವೀಂದ್ರನಾಥ ಟಾಗೋರ್ ಅವರು ಸ್ವೀಡನ್ನಿನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಿರಲಿಲ್ಲ. 1998ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದಿದ್ದ ಅಮರ್ತ್ಯ ಸೇನ್ ಅವರು ಸೂಟ್ ಧರಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಬ್ಯಾನರ್ಜಿ ತನ್ನ ಬಂಗಾಳಿ ಮೂಲವನ್ನು ನೆನಪಿಸುವ ಧೋತಿ-ಕುರ್ತಾ ಧರಿಸಿದ್ದು ಟ್ವಿಟರ್‌ನಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಕೋಲ್ಕತಾದಲ್ಲಿ ಜನಿಸಿದ್ದ 58ರ ಹರೆಯದ ಬ್ಯಾನರ್ಜಿ ದಿಲ್ಲಿಯ ಜೆಎನ್‌ಯುದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪೂರೈಸಿದ ಬಳಿಕ 1988ರಲ್ಲಿ ಪಿಎಚ್‌ಡಿ ಮಾಡಲು ಅಮೆರಿಕದ ಹಾರ್ವರ್ಡ್ ವಿವಿಗೆ ತೆರಳಿದ್ದರು.

ಜಾಗತಿಕ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಕ್ಕಾಗಿ ಬ್ಯಾನರ್ಜಿ,ಡುಫ್ಲೊ ಮತ್ತು ಕ್ರೆಮರ್ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವೀಡಿಯೊವನ್ನು ನೊಬೆಲ್ ಪ್ರಶಸ್ತಿ ಸಮಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News