ಎಲ್ಲಾ ಸರಕಾರಗಳು ತಾರತಮ್ಯ ರಹಿತ ಕಾನೂನು ಪಾಲಿಸಲಿ: ವಿಶ್ವಸಂಸ್ಥೆ ವರಿಷ್ಠ ಗುಟೆರಸ್ ಕರೆ

Update: 2019-12-11 16:53 GMT

ವಿಶ್ವಸಂಸ್ಥೆ,ಡಿ.11: ಮೋದಿ ಸರಕಾರದ ವಿವಾದಾಸ್ಪದ ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ವಿವಿಧೆಡೆ ವ್ಯಾಪಕ ಅಸಮಾದಧಾನ ವ್ಯಕ್ತವಾಗುತ್ತಿರುವಂತೆಯೇ, ಜಗತ್ತಿನಾದ್ಯಂತ ಎಲ್ಲಾ ಸರಕಾರಗಳು ‘ತಾರತಮ್ಯ ರಹಿತ ಕಾನೂನುಗಳನ್ನು’ ಅನುಸರಿಸಬೇಕೆಂದು ವಿಶ್ವಸಂಸ್ಥೆಯ ವರಿಷ್ಠ ಆ್ಯಂಟೊನಿಯೊ ಗುಟೆ ರಸ್ ಪ್ರತಿಪಾದಿಸಿದ್ದಾರೆ. ಆದರೆ ಭಾರತೀಯ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದ ಶಾಸಕಾಂಗ ಪ್ರಕ್ರಿಯೆ ಇನ್ನೂ ನಡೆಯುತ್ತಿರುವುದರಿಂದ ಆ ಬಗ್ಗೆ ತಾನು ಪ್ರತಿಕ್ರಿಯಿಸುವುದಿಲ್ಲವೆಂದು ಅವರು ಸ್ಪಷ್ಟಪಡಿಸಿರುವುದಾಗಿ ಅವರ ವಕ್ತಾರರು ತಿಳಿಸಿದ್ದಾರೆ.

‘‘ನನಗೆ ತಿಳಿದಮಟ್ಟಿಗೆ ಈ ಮಸೂದೆಗೆ ಸಂಬಂಧಿಸಿದ ಶಾಸಕಾಂಗ ಪ್ರಕ್ರಿಯೆಯು ಮುಂದುವರಿದಿದೆ. ಹೀಗಾಗಿ ಆ ಬಗ್ಗೆ ನಾನು ಪ್ರತಿಕ್ರಿಯಿಸುವ ಹಾಗಿಲ್ಲ’’ ಎಂದು ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮುಸ್ಲಿಮ್ ಸಮುದಾಯದ ವಿರುದ್ಧ ತಾರತಮ್ಯವೆಸಗುವ ಪೌರತ್ವ (ತಿದ್ದುಪಡಿ) ವಿಧೇಯ ವನ್ನು ಲೋಕಸಭೆಯಲ್ಲಿ ಅಂಗೀಕಾರಗೊಂಡ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ಯಾವುದೇ ಪ್ರತಿಕ್ರಿಯೆ ನೀಡಿರುವರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

 ಪ್ರಸ್ತಾವಿತ ಪೌರತ್ವ ತಿದ್ದುಪಡಿ ಮಸೂದೆಯ ಪ್ರಕಾರ 2014ರ ಡಿಸೆಂಬರ್ 31ರವರೆಗೆ ಧಾರ್ಮಿಕ ದಬ್ಬಾಳಿಕೆಗೊಳಗಾಗಿ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಗಳಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್ಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯಗಳ ಜನರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ ಹಾಗೂ ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News