ಎಲ್ಲಾ ಬಿಟ್ಟ ಭಂಗಿ ನೆಟ್ಟ

Update: 2019-12-12 04:40 GMT

ದೇಶ ಆರ್ಥಿಕವಾಗಿ ಕುಸಿದು ಕೂತಿದೆ ಎಂದು ಉದ್ಯಮಿಗಳು ಬಹಿರಂಗವಾಗಿಯೇ ಅಳಲು ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣಕ್ಕೆ ಮೀಸಲಿಟ್ಟ ಬಜೆಟ್ ಹಣವನ್ನು ಪೂರೈಸುವುದಕ್ಕೆ ಸಾಧ್ಯವಾಗದೆ 3000 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಲು ಸರಕಾರ ಹೊರಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರುದ್ಯೋಗ ಬೃಹದಾಕಾರ ತಾಳುತ್ತಿದೆ. ದಿನದಿಂದ ದಿನಕ್ಕೆ ವೇಗವಾಗಿ ರೂಪಾಯಿ ಬೆಲೆ ಕೆಳಗಿಳಿಯುತ್ತಿದೆ. ಹಣದುಬ್ಬರ ಹೆಚ್ಚುತ್ತಿದೆ. ಈರುಳ್ಳಿಯ ಬೆಲೆ ಕಿಲೋಗೆ 200 ರೂ. ತಲುಪಿದೆ. ಇವೆಲ್ಲವೂ ಚರ್ಚೆಯಾಗಬೇಕಾದ ಸಂಸತ್ ಅಧಿವೇಶನವನ್ನು ಸರಕಾರ ಬೇರೆಯೇ ದಿಕ್ಕಿಗೆ ತಿರುಗಿಸಿದೆ. ಈ ದೇಶದ ಭದ್ರತೆ, ಆರ್ಥಿಕತೆಗೆ ಯಾವ ರೀತಿಯಲ್ಲೂ ಪೂರಕವಾಗದ ‘ಪೌರತ್ವ ಮಸೂದೆ’ಯೊಂದನ್ನು ಮುಂದಿಟ್ಟುಕೊಂಡು ಜನಪರವಾದ ಯಾವ ಚರ್ಚೆಯೂ ಮುಂದೆ ಸಾಗದಂತೆ ನೋಡಿಕೊಳ್ಳುವಲ್ಲಿ ಸರಕಾರ ಯಶಸ್ವಿಯಾಗಿದೆ. ಇದೊಂದು ರೀತಿಯಲ್ಲಿ ಕಾಲಿಗಾದ ಗಾಯಕ್ಕೆ ಪ್ರತಿಕ್ರಿಯಿಸಲಾಗದೆ, ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಹೃದಯಕ್ಕೇ ಗಾಯ ಮಾಡಿಕೊಂಡಂತಿದೆ. ಜನರೀಗ ಹೃದಯದ ಗಾಯವನ್ನು ಚರ್ಚಿಸುವುದರಿಂದ ಕಾಲಿಗಾದ ವೃಣವನ್ನು ಮುಚ್ಚಿ ಹಾಕಬಹುದು ಎನ್ನುವುದು ಸರಕಾರದ ದೂರಾಲೋಚನೆಯೂ ಹೌದು, ದುರಾಲೋಚನೆಯಯೂ ಹೌದು. ಆದರೆ ಕಾಲಿನ ಗಾಯ ಇದರಿಂದ ಒಣಗುವುದಿಲ್ಲ, ಬದಲಿಗೆ ಅದು ಇನ್ನಷ್ಟು ಕೊಳೆಯ ತೊಡಗುತ್ತದೆ. ಇದೇ ಸಂದರ್ಭದಲ್ಲಿ ಸರಕಾರ ಮಾಡಿಕೊಂಡಿರುವ ಹೃದಯ ಗಾಯ ಇಡೀ ದೇಹವನ್ನು ಆಪತ್ತಿಗೆ ಸಿಲುಕಿಸಲಿದೆ. ದೇಶವನ್ನು ಆಳುವ ಯಾವು ಮುತ್ಸದ್ದಿತನವೂ ಇಲ್ಲದ ನಾಯಕರ ಕೈಯಲ್ಲಿ ಸಂಸತ್, ದ್ವೇಷ ನಿರ್ಮಾಣದ ಕಾರ್ಖಾನೆಯಾಗಿ ಬದಲಾಗಿದೆ. ಈಗಾಗಲೇ ಕಾಶ್ಮೀರವನ್ನು ಜೈಲಾಗಿ ಪರಿವರ್ತಿಸಿರುವ ಸರಕಾರ, ಈಶಾನ್ಯ ಭಾರತವನ್ನೂ ಸೇನೆಯ ತೆಕ್ಕೆಗೆ ತಳ್ಳಲು ಹೊರಟಿದೆ. ಈಶಾನ್ಯ ಭಾರತ ಅಕ್ಷರಶಃ ಉರಿಯುತ್ತಿದೆ. ಗುವಾಹಟಿಯಲ್ಲಿ ಕರ್ಫ್ಯೂ ಹೇರಲಾಗಿದೆ. ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಐದು ಸಾವಿರಕ್ಕೂ ಅಧಿಕ ಸೈನಿಕರನ್ನು ಈಶಾನ್ಯ ರಾಜ್ಯಗಳಿಗೆ ರವಾನಿಸಲಾಗಿದೆ. ಪ್ರತಿಭಟನೆಗಿಳಿದಿರುವ ವಿದ್ಯಾರ್ಥಿಗಳ ಮೇಲೆ ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗೆ ತಳ್ಳಲಾಗುತ್ತಿದೆ. ಇಡೀ ದೇಶದಲ್ಲಿ ಆತಂಕವನ್ನು ಬಿತ್ತಲಾಗಿದೆ. ಬಹುಶಃ ಇಂತಹದೊಂದು ಸ್ಥಿತಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗಲೂ ಇದ್ದಿರಲಿಲ್ಲ. ನೋಟು ನಿಷೇಧದಂತಹ ಅಪಕ್ವ ನಿರ್ಧಾರದ ಮೂಲಕ ಈ ದೇಶವನ್ನು ಆರ್ಥಿಕವಾಗಿ ಪಾತಾಳಕ್ಕೆ ತಳ್ಳಿರುವ ಸರಕಾರ, ಇದೀಗ ಪೌರತ್ವ ಮಸೂದೆಯ ಮೂಲಕ ಇನ್ನೊಂದು ಪ್ರಯೋಗಕ್ಕೆ ಇಳಿದಿದೆ. ಬಹುಶಃ ಆರೆಸ್ಸೆಸ್‌ನಲ್ಲಿ ಸಿದ್ಧಗೊಂಡಿರುವ ಚಿಂತನೆಗಳನ್ನು ಜಾರಿಗೆ ತರಲು ಭಾರತವನ್ನು ಅಮಿತ್ ಶಾ ನೇತೃತ್ವದಲ್ಲಿ ಗಿನಿಪಿಗ್ ಆಗಿ ಬಳಸಲಾಗುತ್ತಿದೆ. ಸರಕಾರ ಅಸ್ಸಾಮಿನಲ್ಲಿ ಎನ್‌ಆರ್‌ಸಿ ಅಥವಾ ಪೌರತ್ವ ನೋಂದಣಿಯನ್ನು ಆರಂಭಿಸಿತು. ಈ ನೋಂದಣಿಯನ್ನು ಸರಕಾರ ಅನುಷ್ಠಾನಕ್ಕೆ ತಂದಿದ್ದೇ, ಅಸ್ಸಾಮಿನಲ್ಲಿ ವ್ಯಾಪಕವಾಗಿ ಬಾಂಗ್ಲಾದ ಅಕ್ರಮ ನುಸುಳುಕೋರರು, ಅದರಲ್ಲೂ ಮುಸ್ಲಿಮರು ನೆಲೆಯೂರಿದ್ದಾರೆ ಎನ್ನುವ ಆರೆಸ್ಸೆಸ್‌ನ ಗಿಣಿಪಾಠವನ್ನು ಆಧರಿಸಿ. ಇದಕ್ಕಾಗಿ ಸರಕಾರ ವ್ಯಯಿಸಿದ್ದು 1,100 ಕೋಟಿ ರೂಪಾಯಿ. 62,000 ಸಿಬ್ಬಂದಿ ಈ ಯೋಜನೆಗಾಗಿ ಕೆಲಸ ಮಾಡಿದ್ದರು. ಆದರೆ ಅಂತಿಮವಾಗಿ ಬೆಟ್ಟ ಅಗೆದು ಇಲಿ ಹಿಡಿದಂತಾಯಿತು ಸರಕಾರದ ಸ್ಥಿತಿ. ಶೇ. 6ರಷ್ಟು ಅಂದರೆ 19 ಲಕ್ಷ ಜನರು ಈ ಎನ್‌ಆರ್‌ಸಿಯಿಂದ ಅತಂತ್ರರಾದರು. ಆದರೆ ಅವರು ಕೇವಲ ಮುಸ್ಲಿಮರೇ ಆಗಿರಲಿಲ್ಲ. ಲಕ್ಷಾಂತರ ಜನ ಆದಿವಾಸಿಗಳು, ಮುಸ್ಲಿಮೇತರರ ಸ್ಥಿತಿಯೂ ಅತಂತ್ರವಾಯಿತು. ಇದೀಗ ಮತ್ತೆ ಮುಸ್ಲಿಮರನ್ನೇ ಗುರಿಯಾಗಿಸಲು, ಪೌರತ್ವ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಲು ಮುಂದಾಗಿದೆ. ಅಂದರೆ, ಎನ್‌ಆರ್‌ಸಿಯಲ್ಲಿ ಅತಂತ್ರರಾಗಿರುವ ಉಳಿದೆಲ್ಲರನ್ನು ರಕ್ಷಿಸಿ ಮುಸ್ಲಿಮರನ್ನಷ್ಟೇ ನಿರಾಶ್ರಿತ ಶಿಬಿರಕ್ಕೆ ಸೇರಿಸುವುದು ಸರಕಾರದ ಉದ್ದೇಶ. ಒಂದು ನಿರ್ದಿಷ್ಟ ಧರ್ಮೀಯರ ಮೇಲಿನ ದ್ವೇಷಕ್ಕಾಗಿಯೇ ಸಹಸ್ರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಗಡಿಕಾಯಬೇಕಾದ ಸೇನೆ, ತನ್ನದೇ ಜನರ ವಿರುದ್ಧ ಯುದ್ಧ ಮಾಡಬೇಕಾದ ಸ್ಥಿತಿಯನ್ನು ಸೃಷ್ಟಿಸುತ್ತಿದೆ. ನಿಧಾನಕ್ಕಾಗಿಯಾದರೂ ದೇಶದ ಆರ್ಥಿಕತೆ ಚಿಗುರಬಹುದೇನೋ ಎಂಬ ಅಳಿದುಳಿದ ಆಸೆಯೂ ಜನರಲ್ಲಿ ಕಮರುತ್ತಿದೆ. ಯಾಕೆಂದರೆ ಪೌರತ್ವ ಮಸೂದೆಯ ಹೆಸರಲ್ಲಿ ದೇಶದೊಳಗೆ ಕ್ಷೋಭೆಯೆದ್ದರೆ, ಅದು ಆರ್ಥಿಕತೆಯನ್ನು ಇನ್ನಷ್ಟು ಕೆಡಿಸಿ ಹಾಕುತ್ತದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿಲ್ಲುತ್ತದೆ, ಮುಸ್ಲಿಮರಿಗೆ ನಷ್ಟವುಂಟಾಗುತ್ತದೆ ಎನ್ನುವ ದ್ವೇಷವನ್ನು ಬಿತ್ತಿ ‘ನೋಟು ನಿಷೇಧ ’ ಮಾಡಿ ಅರ್ಥವ್ಯವಸ್ಥೆಯನ್ನು ನಾಶಮಾಡಿದವರು, ಇದೀಗ ಅಕ್ರಮ ವಲಸಿಗರಿಗೆ ಕಡಿವಾಣ ಬೀಳುತ್ತದೆ ಎಂದು ನಂಬಿಸಿ ‘ಪೌರತ್ವ ತಿದ್ದುಪಡಿ ವಿಧೇಯಕ’ಕ್ಕೆ ಕೈ ಹಾಕಿ ದೇಶದ ಆಂತರಿಕ ಭದ್ರತೆಯನ್ನೇ ನಾಶ ಮಾಡಲು ಮುಂದಾಗಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಆರೆಸ್ಸೆಸ್‌ನ ‘ಹಿಂದೂರಾಷ್ಟ್ರ’ದೆಡೆ ಇಟ್ಟ ಮೊದಲ ಅಧಿಕೃತ ಹೆಜ್ಜೆಯಾಗಿದೆ. ದೇಶಾದ್ಯಂತ ಎನ್‌ಆರ್‌ಸಿ ನಡೆಸಿ ಮುಸ್ಲಿಮರನ್ನಷ್ಟೇ ಗುರಿಯಾಗಿಸಿ ಅವರನ್ನು ಅತಂತ್ರಗೊಳಿಸುವುದು ಸರಕಾರದ ಸ್ಪಷ್ಟ ಉದ್ದೇಶ. ಆ ಮೂಲಕ ತನ್ನ ಆಡಳಿತ ವೈಫಲ್ಯವನ್ನು ಜನರಿಂದ ಮುಚ್ಚಿ ಹಾಕಲು ಮುಂಂದಾಗಿದೆ. ದಾಖಲೆಗಳಿಲ್ಲದ ಮುಸ್ಲಿಮೇತರರಿಗಷ್ಟೇ ಪೌರತ್ವ ನೀಡುವ ಸರಕಾರದ ಉದ್ದೇಶವೇ ದೇಶದ ಸಂವಿಧಾನದ ಆಶಯಗಳನ್ನು ದಿಕ್ಕು ತಪ್ಪಿಸುವಂತಹದು. ಈ ಮೂಲಕ ಸರಕಾರ ಸ್ಪಷ್ಟವಾಗಿ ಒಂದು ಧರ್ಮದ ಹಕ್ಕನ್ನು ನಿರಾಕರಿಸಿದೆ. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ, ಈ ಮಸೂದೆಯನ್ನು ಸಮರ್ಥಿಸುವುದಕ್ಕಾಗಿ ಅಮಿತ್ ಶಾ ‘ದೇಶ ಧರ್ಮದ ಆಧಾರದಲ್ಲಿ ವಿಭಜನೆಯಾಯಿತು’ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಭಾರತ ಧರ್ಮದ ಹೆಸರಿನಲ್ಲಿ ವಿಭಜನೆಯಾಗಿಲ್ಲ, ಜಾತ್ಯತೀತ, ಧರ್ಮ ನಿರಪೇಕ್ಷ ಭಾರತವಾಗಿ ವಿಭಜನೆಯಾಯಿತು ಎನ್ನುವ ಅರಿವೇ ಇಲ್ಲದ ಗೃಹ ಸಚಿವ, ಪೌರತ್ವ ಮಸೂದೆ ತಿದ್ದುಪಡಿಯನ್ನು ಅಂಗೀಕರಿಸಲು ಹೊರಟ ಉದ್ದೇಶವೇನು ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಈ ದೇಶವನ್ನು ಧರ್ಮಾಧಾರಿತವಾಗಿ ವಿಭಜಿಸಿದ್ದು ಹಿಂದೂ ಮಹಾಸಭಾ. ಧರ್ಮದ ಹೆಸರಲ್ಲಿ ಪಾಕಿಸ್ತಾನವಾಗುವುದನ್ನು ಹಿಂದೂ ಮಹಾಸಭಾ ಬಹಿರಂಗವಾಗಿ ಬೆಂಬಲಿಸಿತ್ತು. ಇದೇ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಮತ್ತು ಸ್ವಾತಂತ್ರ ಹೋರಾಟಗಾರರು ಕೊನೆಯವರೆಗೂ ಧರ್ಮಾಧಾರಿತವಲ್ಲದ ಭಾರತದ ಕುರಿತಂತೆ ಬದ್ಧತೆಯನ್ನು ಹೊಂದಿದ್ದರಿಂದ ಈ ದೇಶ ಜಾತ್ಯತೀತ ಭಾರತವಾಯಿತು. ಆ ಭಾರತವನ್ನು ಮತ್ತೆ ಧರ್ಮಾಧಾರಿತ ದೇಶವನ್ನಾಗಿಸುವ ಸಂಚಿನ ಭಾಗವಾಗಿದೆ ಪೌರತ್ವ ತಿದ್ದುಪಡಿ ಮಸೂದೆ.

ಭಾರತ ವೈವಿಧ್ಯಮಯವಾದ ಜಾತಿ ಧರ್ಮ, ಸಂಸ್ಕೃತಿಗಳ ತೋಟವಾಗಿದೆ. ಪಟ್ಟದ ಕಲ್ಲು, ಅಜಂತಾಗಳಂತೆಯೇ ತಾಜ್‌ಮಹಲ್, ಗೋಲಗುಂಬಜ್, ಕುತುಬ್ ಮಿನಾರ್ ಕೂಡ ಈ ದೇಶದ ಸೌಂದರ್ಯವಾಗಿದೆ. ಇಂದು ಅಮಿತ್ ಶಾ ನೇತೃತ್ವದ ಭಂಗಿ ಮಾರಾಟಗಾರರು ಈ ದೇಶದೊಳಗಿನ ವೈವಿಧ್ಯಮಯ ಮರಗಳನ್ನೆಲ್ಲ ಕಡಿದುರುಳಿಸಿ ಭಂಗಿ ಗಿಡಗಳನ್ನು ನೆಡಲು ಹೊರಟಿದ್ದಾರೆ ಮತ್ತು ಈ ಭಂಗಿ ಗಿಡಗಳು ಭವಿಷ್ಯದಲ್ಲಿ ಬೆಳೆದು, ಅಮೃತಫಲಗಳನ್ನು ನೀಡಲಿವೆ ಎಂದು ದೇಶವನ್ನು ನಂಬಿಸಲು ಹೊರಟಿದ್ದಾರೆ. ಆದರೆ ಭಂಗಿ ಗಿಡಗಳಲ್ಲಿ ಅಮೃತ ಫಲಗಳನ್ನು ಬೆಳೆಯಲಾಗದು ಎನ್ನುವ ಸತ್ಯಕ್ಕೆ ಉದಾಹರಣೆಗಳಾಗಿ ನಾಶವಾದ ಹಲವು ದೇಶಗಳು ನಮ್ಮ ಮುಂದಿವೆ. ಭಂಗಿ ಗಿಡಗಳು ಸೃಷ್ಟಿಸುವ ವಿಸ್ಮತಿಯಿಂದ ಹೊರಬಂದು ಜಾತ್ಯತೀತವಾದ, ಪ್ರಜಾಸತ್ತಾತ್ಮಕವಾದ ಭಾರತವನ್ನು ಉಳಿಸುವುದಕ್ಕಾಗಿ ಪ್ರತಿ ಭಾರತೀಯನೂ ಬೀದಿಗಿಳಿಯಬೇಕಾದ ದಿನಗಳು ಇವು. ಇದು ಭಾರತದ ಪಾಲಿನ ಎರಡನೇ ಸ್ವಾತಂತ್ರ ಹೋರಾಟವಾಗಿ ಬದಲಾಗುವ ಎಲ್ಲ ಸೂಚನೆಗಳೂ ಕಾಣುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News