ಟ್ವೆಂಟಿ-20 ಪಂದ್ಯದಲ್ಲಿ ಗರಿಷ್ಠ ರನ್ ಸ್ಕೋರರ್: ಅಗ್ರಸ್ಥಾನ ಹಂಚಿಕೊಂಡ ಕೊಹ್ಲಿ, ರೋಹಿತ್

Update: 2019-12-12 09:31 GMT

ಮುಂಬೈ, ಡಿ.12: ಭಾರತದ ಬ್ಯಾಟಿಂಗ್ ಶಕ್ತಿಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ರನ್ ಸ್ಕೋರರ್‌ಗಳಾಗಿ ಹೊರಹೊಮ್ಮುವ ಮೂಲಕ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಬುಧವಾರ ಮುಂಬೈನಲ್ಲಿ ವಿಂಡೀಸ್ ವಿರುದ್ಧ ನಡೆದ ಮೂರನೇ ಟ್ವೆಂಟಿ-20 ಪಂದ್ಯ ಈ ವರ್ಷ ಭಾರತ ಆಡಿದ ಕೊನೆಯ ಟಿ-20 ಪಂದ್ಯವಾಗಿದೆ. ವಿರಾಟ್ ಹಾಗೂ ರೋಹಿತ್ ವಿಂಡೀಸ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ ಭಾರತ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆಲ್ಲಲು ನೆರವಾದರು.

ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಪರ ರೋಹಿತ್ 71 ಹಾಗೂ ನಾಯಕ ಕೊಹ್ಲಿ ಔಟಾಗದೆ 70 ರನ್ ಗಳಿಸಿದ್ದರು. ಭಾರತ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಲು ನೆರವಾಗಿದ್ದರು. 3ನೇ ಪಂದ್ಯಕ್ಕಿಂತ ಮೊದಲು ಕೊಹ್ಲಿ ಅವರು ಗರಿಷ್ಠ ರನ್ ಗಳಿಕೆಯ ವಿಚಾರದಲ್ಲಿ ರೋಹಿತ್‌ಗಿಂತ ಒಂದು ರನ್ ಮುಂದಿದ್ದರು. ಇದೀಗ ಇಬ್ಬರು ಬ್ಯಾಟ್ ್ಸಮನ್‌ಗಳು ಟಿ-20 ಪಂದ್ಯದಲ್ಲಿ ಒಟ್ಟು 2,633 ರನ್ ಗಳಿಸಿ ಸಮಬಲ ಸಾಧಿಸಿದ್ದಾರೆ. ಕೊಹ್ಲಿ 75 ಪಂದ್ಯಗಳಲ್ಲಿ(70 ಇನಿಂಗ್ಸ್)52.66ರ ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದರೆ, ಮತ್ತೊಂದೆಡೆ ರೋಹಿತ್ 32.10ರ ಸರಾಸರಿಯಲ್ಲಿ 104 ಪಂದ್ಯಗಳಲ್ಲಿ 2,633 ರನ್ ಗಳಿಸಿದ್ದಾರೆ.

ಕೊಹ್ಲಿ ಟ್ವೆಂಟಿ-20 ವೃತ್ತಿಜೀವನದಲ್ಲಿ ಈ ತನಕ 24 ಅರ್ಧಶತಕಗಳನ್ನು ಗಳಿಸಿದರೆ, ರೋಹಿತ್ 19 ಅರ್ಧಶತಕಗಳನ್ನು ಗಳಿಸಿದ್ದಾರೆ.

 ನ್ಯೂಝಿಲ್ಯಾಂಡ್‌ನ ಮಾರ್ಟಿನ್ ಗಪ್ಟಿಲ್ ಟಿ-20 ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಗಪ್ಟಿಲ್ 2,436 ರನ್ ಗಳಿಸಿದ್ದಾರೆ. ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಪಾಕ್‌ನ ಶುಐಬ್ ಮಲಿಕ್ 2,263 ರನ್ ಗಳಿಸಿದರೆ, ಬ್ರೆಂಡನ್ ಮೆಕಲಮ್ 2,140 ರನ್ ಗಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News