ಬ್ರೆಝಿಲ್ ಅಧ್ಯಕ್ಷರ ನಿಂದನೆ ನಂತರ ಟ್ವಿಟರ್ ಖಾತೆಯ ಹೆಸರು ಬದಲಾಯಿಸಿದ ಗ್ರೆಟಾ!

Update: 2019-12-12 15:09 GMT

ಮ್ಯಾಡ್ರಿಡ್ (ಸ್ಪೇನ್), ಡಿ. 12: ಅಮೆಝಾನ್ ದಟ್ಟಾರಣ್ಯದಲ್ಲಿ ವಾಸಿಸುತ್ತಿರುವ ಬ್ರೆಝಿಲ್ ಬುಡಕಟ್ಟು ಜನರ ಹತ್ಯೆಗಳನ್ನು ಸ್ವೀಡನ್‌ನ ಹದಿಹರೆಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಖಂಡಿಸುತ್ತಾರೆ. ಇದರಿಂದ ಕೆಂಡಾಮಂಡಲರಾದ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ, ಪರಿಸರ ಹೋರಾಟಗಾರ್ತಿಯನ್ನು ‘ಪಿರಾಳ’ ಎಂದು ಕರೆಯುತ್ತಾರೆ.

 ‘ಪಿರಾಳ’ ಅಗೌರವಸೂಚಕ ಪೋರ್ಚುಗೀಸ್ ಪದವಾಗಿದ್ದು, ಇಂಗ್ಲಿಷ್‌ನ ‘ಬ್ರಾಟ್’ ಹಾಗೂ ಕನ್ನಡದ ‘ಕೆಟ್ಟು ಹೋದ ಹುಡುಗ ಅಥವಾ ಹುಡುಗಿ’ ಎಂಬುದಕ್ಕೆ ಸಮಾನವಾಗಿದೆ.

 ‘‘ಅಮೆಝಾನ್ ದಟ್ಟಾರಣ್ಯವನ್ನು ಸಂರಕ್ಷಿಸುತ್ತಿರುವುದಕ್ಕಾಗಿ ಇಂಡಿಯನ್ ಬುಡಕಟ್ಟು ಜನರನ್ನು ಕೊಲ್ಲಲಾಗುತ್ತಿದೆ ಎಂದು ಗ್ರೆಟಾ ಹೇಳಿದ್ದಾರೆ. ಈ ರೀತಿಯ ಪಿರಾಳಗಳಿಗೆ ಪತ್ರಿಕೆಗಳು ಮಹತ್ವ ನೀಡುತ್ತಿರುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ’’ ಎಂಬುದಾಗಿ ಬ್ರೆಸೀಲಿಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಲ್ಸೊನಾರೊ ಹೇಳಿದರು ಎಂದು ಸಿಎನ್‌ಎನ್ ವರದಿ ಮಾಡಿದೆ.

ಗ್ವಾಜಾಜರ ಬುಡಕಟ್ಟು ಪಂಗಡಕ್ಕೆ ಸೇರಿದ ಇಬ್ಬರು ವ್ಯಕ್ತಿಗಳ ಸಾವಿಗೆ ಸಂಬಂಧಿಸಿ, 16 ವರ್ಷದ ತನ್‌ಬರ್ಗ್ ಮಾಡಿರುವ ಟ್ವೀಟ್‌ಗೆ ಬೊಲ್ಸೊನಾರೊ ಪ್ರತಿಕ್ರಿಯಿಸುತ್ತಿದ್ದರು.

‘‘ಕಾಡುಗಳ್ಳರಿಂದ ಕಾಡುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದಕ್ಕಾಗಿ ಬುಡಕಟ್ಟು ಜನರನ್ನು ಅಕ್ಷರಶಃ ಕೊಲೆ ಮಾಡಲಾಗುತ್ತಿದೆ. ಇದು ಪದೇ ಪದೇ ಪುನರಾವರ್ತನೆಯಾಗುತ್ತಿದೆ. ಈ ವಿಷಯದಲ್ಲಿ ಜಗತ್ತು ವೌನವಾಗಿರುವುದು ನಾಚಿಕೆಗೇಡು’’ ಎಂಬುದಾಗಿ ತನ್‌ಬರ್ಗ್ ಡಿಸೆಂಬರ್ 8ರಂದು ಟ್ವೀಟ್ ಮಾಡಿದ್ದರು.

ಬ್ರೆಝಿಲ್ ಅಧ್ಯಕ್ಷರ ಹೇಳಿಕೆ ಬಿಡುಗಡೆಯಾದ ಸ್ವಲ್ಪವೇ ಹೊತ್ತಿನಲ್ಲಿ, ಗ್ರೆಟಾ ತನ್‌ಬರ್ಗ್ ತನ್ನ ಟ್ವಿಟರ್ ಹೆಸರನ್ನು ‘ಪಿರಾಳ’ ಎಂದು ಬದಲಾಯಿಸಿದರು.

ಪರಿಸರ ಹೋರಾಟದ ಮುಂಚೂಣಿಯಲ್ಲಿರುವ ಗ್ರೆಟಾರನ್ನು ಬುಧವಾರ ‘ಟೈಮ್’ ಮ್ಯಾಗಝಿನ್‌ನ ‘ವರ್ಷದ ವ್ಯಕ್ತಿ’ಯಾಗಿ ಘೋಷಿಸಲಾಗಿದೆ. ಈ ಗೌರವವನ್ನು ಪಡೆದ ಅತಿ ಕಿರಿಯ ವ್ಯಕ್ತಿ ಅವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News