ಪೌರತ್ವ ಕಾಯ್ದೆ ಮೂಲಕ ಕೇಂದ್ರದಿಂದ ಧರ್ಮಾಧಾರಿತ ತಾರತಮ್ಯ: ಜಗತ್ತಿನಾದ್ಯಂತ ಗಣ್ಯರ ಕಳವಳ

Update: 2019-12-19 05:37 GMT

ಹೊಸದಿಲ್ಲಿ,ಡಿ.12: ವಿವಾದಾಸ್ಪದವಾದ ಪೌರತ್ವ ತಿದ್ದುಪಡಿ ವಿಧೇಯಕ ಸಂಸತ್‌ನಲ್ಲಿ ಅಂಗೀಕಾರಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಜಗತ್ತಿನಾದ್ಯಂತದ ವಿವಿಧ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.

ಈಗಾಗಲೇ ತಮ್ಮ ದೇಶಗಳಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯಕ್ಕೊಳಗಾದವರುೆ ಈ ವಿಧೇಯಕದಿಂದಾಗಿ ಇನ್ನಷ್ಟು ಬಾಧಿತರಾಗಲಿದ್ದಾರೆಂದು, ಹಲವಾರು ಮಂದಿ ಮಾನವಹಕ್ಕು ಹೋರಾಟಗಾರರು,ಪತ್ರಕರ್ತರು ಹಾಗೂ ನ್ಯಾಯವಾದಿಗಳು ಸಹಿಮಾಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ)ಯ ಹೆಸರಿನಲ್ಲಿ ಭಾರತ ಸರಕಾರದ ಪೌರತ್ವ ಯೋಜನೆಯು ಕಾರ್ಯಗತಗೊಂಡಿರುವ ಸಮಯದಲ್ಲೇ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ. ಎನ್‌ಆರ್‌ಸಿಯಡಿ ತಮ್ಮ ದಾಖಲೆಪತ್ರಗಳನ್ನು ಹಾಜರುಪಡಿಸಲು ವಿಫಲರಾಗುವ ಸಾವಿರಾರು ಮುಸ್ಲಿಮರನ್ನು ಬಂಧನಕೇಂದ್ರಗಳಿಗೆ ತಳ್ಳುವ ಕೆಲಸ ನಡೆಯಲಿದೆಯೆಂದು ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ತಮ್ಮ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಸಿಖ್ಖರು,ಜೈನರು,ಬೌದ್ಧರು ಹಾಗೂ ಕ್ರೈಸ್ತರಿಗೆ ಅವರ ಧರ್ಮದ ಕಾರಣದಿಂದಾಗಿ ಪೌರತ್ವ ದೊರೆಯಲಿದೆಯೆಂದು ಎಂದು ಅಮಿತ್‌ ಶಾ ಅವರು ಸಂದರ್ಶನವೊಂದರಲ್ಲಿ ಹೇಳಿರುವುದನ್ನು ಕೂಡಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರನ್ನು ಸಂದೇಹಾಸ್ಪದವಾಗಿ ಹೊರಗಿಟ್ಟಿರುವ ಬಗೆ ಪತ್ರಕ್ಕೆ ಸಹಿಹಾಕಿರುವವರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರು ಭಾರತದ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಪಂಗಡವಾಗಿದ್ದಾರೆ. ಎನ್‌ಆರ್‌ಸಿ ಜೊತೆಗೆ ಸಿಎಬಿಯನ್ನು ಕೂಡಾ ಕೇಂದ್ರ ಸರಕಾರ ಜಾರಿಗೊಳಿಸಹೊರಟಿರುವುದು ಮುಸ್ಲಿಮ ರ ಆತಂಕ ಉಲ್ಬಣಿಸುವಂತೆ ಮಾಡಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಂವಿಧಾನವು ಪ್ರತಿಪಾದಿಸುವ ದೇಶದ ಜಾತ್ಯತೀತ ಸಂರಚನೆಯನ್ನು ಸಹಿದಾರರು ಪತ್ರದಲ್ಲಿ ಪ್ರಸ್ತಾವಿಸಿದ್ದಾರೆ ಹಾಗೂ ಮ್ಯಾನ್ಮಾರ್‌ನಲ್ಲಿ ದಮನಕ್ಕೊಳಗಾಗಿರುವ ರೋಹಿಂಗ್ಯ ಮುಸ್ಲಿಮರು ಮತ್ತು ಪಾಕಿಸ್ತಾನದ ಅಹ್ಮದಿಯಾ ಮುಸ್ಲಿಮರು, ಶ್ರೀಲಂಕಾ ಹಾಗೂ ನೇಪಾಳದಲ್ಲಿರುವ ಅಲ್ಪಸಂಖ್ಯಾತರು ಹಾಗೂ ಚೀನಾದ ಉಯಿಘರ್ ಮುಸ್ಲಿಮರನ್ನು ಸರಕಾರವು ಸಿಎಬಿಯಿಂದ ಹೊರಗಿಟ್ಟಿರುವುದನ್ನು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಪೌರತ್ವ ತಿದ್ದುಪಡಿ ವಿಧೇಯಕವನ್ನು ಶಾಸನವಾಗಿ ಜಾರಿಗೊಳಿಸುವುದನ್ನು ತಡೆಯುವಂತೆಯೂ ಪತ್ರವು ಭಾರತ ಸರಕಾರನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News